ಬಡವರ ಸೇವೆ ದೇವರ ಕೆಲಸ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cm--004

ಬೆಂಗಳೂರು, ಜು.24- ಬಡವರ ಹಸಿವು ನೀಗಿಸುವುದು ಮತ್ತು ಎಲ್ಲಾ ಸೌಲಭ್ಯ ಕಲ್ಪಿಸಿಕೊಡುವುದು ದೇವರ ಕೆಲಸವಿದ್ದಂತೆ. ಈ ಕೆಲಸ ಮಾಡಲು ಸರ್ಕಾರ ನಿರತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಬಿಬಿಎಂಪಿ ವತಿಯಿಂದ ಕೋರಮಂಗಲದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ನಾವು ಮಾಡಿರುವ ವಿವಿಧ ಅಭಿವೃದ್ಧಿ ಕೆಲಸಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸುಳ್ಳು ಹೇಳಲು ಕೂಡ ಇತಿಮಿತಿ ಇರಬೇಕು ಎಂದರು.

ಬಡವರ ಹಸಿವು ನೀಗಿಸಲು ಉಚಿತ ಅನ್ನಭಾಗ್ಯ ಯೋಜನೆ. ಅದೇ ರೀತಿ ಬಡವರಿಗೆ ರಿಯಾಯಿರಿ ದರದಲ್ಲಿ ಊಟ ನೀಡಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸುತ್ತಿದ್ದೇವೆ. ಇದರ ಬಗ್ಗೆಯೂ ವಿರೋಧ ಪಕ್ಷಗಳು ಭ್ರಷ್ಟಾಚಾರ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು.
ಇಂದಿರಾ ಕ್ಯಾಂಟೀನ್‍ಗೆ ಹಣ ನೀಡಲಾಗಿದೆ. ಎಲ್ಲಾ ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಆಗೇ ಆಗುತ್ತದೆ. ವಿರೋಧ ಪಕ್ಷಗಳು ಹೇಳುತ್ತಿರುವುದು ಸುಳ್ಳಿನ ಕಂತೆ. ಅದನ್ನೆಲ್ಲ ನಂಬಬೇಡಿ ಎಂದು ಸಲಹೆ ನೀಡಿದರು.

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆಗೆ ಮುಂದಾದೆವು. ಅದು ಆಗಿದ್ದರೆ ವಾಹನ ದಟ್ಟಣೆ ತಗ್ಗುತ್ತಿತ್ತು. ಅದು ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಅದನ್ನೂ ಪ್ರತಿಪಕ್ಷಗಳು ವಿರೋಧಿಸಿದವು.  ನಾವು ಈ ಯೋಜನೆಗೆ ಅನುಮೋದನೆಯನ್ನೇ ನೀಡಿರಲಿಲ್ಲ. ಈಗ ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ನಾವು ಇದನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ಪ್ರತಿಪಕ್ಷಗಳು ಏನೇ ಆರೋಪ ಮಾಡಿದರೂ ಜನರ ಒಳಿತಿಗಾಗಿ ಏನೆಲ್ಲ ಯೋಜನೆ ಜಾರಿಗೆ ತಂದಿದ್ದೇವೆಯೋ ಅದನ್ನೆಲ್ಲ ಮಾಡಿಯೇ ತೀರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin