ಸರ್ಕಾರಿ ಗೌರವಗಳೊಂದಿಗೆ ಪ್ರೊ.ಯು.ಆರ್.ರಾವ್ ಅಂತ್ಯಕ್ರಿಯೆ

U-R-Roa--01

ಬೆಂಗಳೂರು, ಜು.24- ಖ್ಯಾತ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮಾಜಿ ಅಧ್ಯಕ್ಷ ಪದ್ಮವಿಭೂಷಣ ಪ್ರೊ.ಯು.ಆರ್.ರಾವ್(85) ಇಂದು ಮುಂಜಾನೆ 2.50ರಲ್ಲಿ ಬೆಂಗಳೂರಿನ ಇಂದಿರಾನಗರದ ತಮ್ಮ ನಿವಾಸದಲ್ಲಿ ನಿಧನರಾದರು
ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಇಸ್ರೋ ಸಾರ್ವಜನಿಕ ಸಂಪರ್ಕ ನಿರ್ದೇಶಕ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ. ರಾವ್ ಅವರು ಪತ್ನಿ ಯಶೋಧಾ, ಪುತ್ರ ಡಾ. ಮದನ್ ರಾವ್ ಮತ್ತು ಪುತ್ರಿ ಮಾಲಾ ರಾವ್ ಅವರನ್ನು ಅಗಲಿದ್ದಾರೆ.
ಪ್ರೊ.ರಾವ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಣ್ಯರು ಮುಂಜಾನೆಯೇ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ವಿದಾಯ ವಂದನೆ ಸಲ್ಲಿಸಿದರು.

U-R-Roa--03

ಬೆಳಗ್ಗೆ 10 ರಿಂದ ಅಪರಾಹ್ನ 3 ಗಂಟೆವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಂಜೆ 5 ಗಂಟೆಗೆ ಹೆಬ್ಬಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.   ಉಡುಪಿ ರಾಮಚಂದ್ರ ರಾವ್ (ಯು.ಆರ್.ರಾವ್), 1932 ಮಾರ್ಚ್ 10ರಂದು ಉಡುಪಿ ಜಿಲ್ಲೆಯ ಅದಮಾರು ಗ್ರಾಮದಲ್ಲಿ ಬಡ ಕೃಷಿಕ ಕುಟುಂಬವೊಂದರಲ್ಲಿಜನಿಸಿದ್ದರು. ಇವರು ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಕೃಷ್ಣವೇಣಿ ಅಮ್ಮ ದಂಪತಿಯ ಪುತ್ರ. ಅದಮಾರುವಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರಾವ್, ಹಂತ ಹಂತವಾಗಿ ಉತ್ತಮ ಶೈಕ್ಷಣಿಕ ಸಾಧನೆಗಳೊಂದಿಗೆ ಯಶಸ್ಸಿನ ಮೆಟ್ಟಿಲು ಏರಿದರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‍ನಲ್ಲಿ ಪ್ರೌಢಶಿಕ್ಷಣ ಪೂರೈಸಿದ ರಾವ್, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ, 1954ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಹಾಗೂ 1960ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಪಡೆದಿದ್ದರು. ಆ ನಂತರ ಅವರು ಕಾಸ್ಮಿಕ್ ರೇ ವಿಜ್ಞಾನಿಯಾಗಿ ತಮ್ಮ ವೃತ್ತಿ ಆರಂಭಿಸಿದ್ದರು.

U-R-Roa--04

ಪ್ರೊ. ರಾವ್ ಅವರು ಇಸ್ರೋದ ಆರ್ಯಭಟ ಉಪಗ್ರಹ ಯೋಜನೆಯಿಂದ ಇತ್ತೀಚಿನ ಮಂಗಳಯಾನ ಯೋಜನೆವರೆಗೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳಾದ ಎಂ.ಜಿ.ಕೆ. ಮೆನನ್, ವಿಕ್ರಮ್ ಸಾರಾಭಾಯಿ, ಸತೀಶ್ ಧವನ್ ಮೊದಲಾದವರೊಂದಿಗೆ ಕಾರ್ಯನಿರ್ವಹಿಸಿದ್ದರು.  ಸತೀಶ್ ಧವನ್ ನಿವೃತ್ತಿ ನಂತರ ಪ್ರೊ.ರಾವ್, 1984ರಿಂದ 1994ರವರೆಗೆ ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಅನೇಕ ಅನ್ವೇಷಣಾತ್ಮಕ ಪ್ರಯೋಗಗಳು ಯಶಸ್ವಿಯಾದವು. ಅಂತರಿಕ್ಷ ವಿಜ್ಞಾನ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಅನನ್ಯವಾದುದು. ಸಂವಹನ ಮತ್ತು ನೈಸರ್ಗಿಕ ಸಂಪನ್ಮೂಲದ ದೂರ ಸಂವೇದಿ ಕ್ಷೇತ್ರದಲ್ಲಿ ಪ್ರೊ. ರಾವ್ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿತ್ತು.

U-R-Roa--06

1984ರಲ್ಲಿಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಕೆಟ್ ತಂತ್ರಜ್ಞಾನ ಅಭಿವೃದ್ದಿಗೆ ಹೊಸ ರೂಪ ನೀಡುವಲ್ಲಿ ಇವರು ಅಪಾರ ಶ್ರಮ ವಹಿಸಿದರು. ಇವರ ಶ್ರಮದ ಫಲವಾಗಿ ಎಎಸ್‍ಎಲ್‍ವಿ ರಾಕೆಟ್ ಉಡಾವಣೆ ಹಾಗೂ ಪಿಎಸ್‍ಎಲ್‍ವಿ ಉಡಾವಣಾ ವಾಹಕ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಸಾಧಿಸಲಾಯಿತು. ಧ್ರುವ ಕಕ್ಷೆಗೆ 2.0 ಟನ್ ದರ್ಜೆಯ ಉಪಗ್ರಹಗಳ ಉಡ್ಡಯನಕ್ಕೆ ಇವರ ಕೊಡುಗೆ ಅನುಪಮವಾದುದು.

ಭೂ ಸ್ಥಿರ ಉಡಾವಣಾ ವಾಹನ (ಜಿಯೋ ಸ್ಟೇಷನರಿ ಲಾಂಚ್ ವೆಹಿಕಲ್-ಜಿಎಸ್‍ಎಲ್‍ವಿ) ಅಭಿವೃದ್ದಿ ಹಾಗೂ 1991ರಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನದ ಪ್ರಗತಿಯಲ್ಲಿಯೂ ಡಾ.ರಾವ್ ಅವರ ಕೊಡುಗೆಗಳು ಗಮನಾರ್ಹ. ಪ್ರಸ್ತುತ ಅಹಮದಾಬಾದ್‍ನ ಭೌತಿಕ ಸಂಶೋಧನಾ ಪ್ರಯೋಗಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ತಿರುವನಂತಪುರಂನ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನೋಲಜಿಯ ಕುಲಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಸ್ಮಿಕ್ ರೇ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರ 350ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಬಂಧ-ಲೇಖನಗಳನ್ನು ಮಂಡಿಸಿದ್ದರು. ಭೌತಶಾಸ್ತ್ರ, ಅಗಾಧ ಸಾಮಥ್ರ್ಯದ ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನದ ಅನ್ವಯಿಕತೆ, ಉಪಗ್ರಹ ಮತ್ತು ರಾಕೆಟ್ ತಂತ್ರಜ್ಞಾನ ಕುರಿತು ಅನೇಕ ಪುಸ್ತಕಗಳನ್ನು ಇವರು ಬರೆದಿದ್ದಾರೆ.

U-R-Roa--05

ಮಾರ್ಚ್ 19, 2013ರಲ್ಲಿ ವಾಷಿಂಗ್ಟನ್‍ನಲ್ಲಿ ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಕೀರ್ತಿಗೆ ಸೇರ್ಪಡೆಯಾದ ಭಾರತದ ಪ್ರಥಮ ಬಾಹ್ಯಾಕಾಶ ವಿಜ್ಞಾನಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಮೆಕ್ಸಿಕೋದ ಗೌಡಲಜಾರದ ಐಎಎಫ್ ಹಾಲ್ ಆಫ್ ಫೇಮ್ ಕೀರ್ತಿಗೂ ಭಾಜನರಾಗಿದ್ದರು.
ರಾವ್ ಅವರಿಗೆ 1976ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಮತ್ತು 2017ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೇ 10ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಪುರಸ್ಕಾರ-ಸನ್ಮಾನಗಳು ಲಭಿಸಿದ್ದವು. ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಇಸ್ರೋ ಜೀವಮಾನ ಸಾಧನೆ ಪ್ರಶಸ್ತಿಗಳಿಗೂ ಇವರು ಭಾಜನರಾಗಿದ್ಧಾರೆ.

U-R-Roa--02

ಗಣ್ಯರ ಸಂತಾಪ :
ಡಾ ಯು.ಆರ್.ರಾವ್ ನಿಧನಕ್ಕೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಇಸ್ರೋ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್, ಉಪ ನಿರ್ದೇಶಕ ಡಾ.ವೆಂಕಟೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.  ಪ್ರೊ. ರಾವ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಮೋದಿ, ದೇಶವು ಮೇರು ಬಾಹ್ಯಾಕಾಶ ವಿಜ್ಞಾನಿಯನ್ನು ಕಳೆದುಕೊಂಡಿದೆ. ಅವರು ಈ ಕ್ಷೇತ್ರಕ್ಕೆ ನೀಡರುವ ಅಮೂಲ್ಯ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin