ಸೆ. 21ರಿಂದ 29 ಮೈಸೂರು ದಸರಾ ಉತ್ಸವ , ಅದ್ದೂರಿಯಾಗಿ ಆಚರಿಸಲು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

dasara--mysore

ಬೆಂಗಳೂರು.ಜು.24 : ವಿಶ್ವಖ್ಯಾತ ಮೈಸೂರು ದಸರಾ ಉತ್ಸವವನ್ನು ಈ ಬಾರಿಯೂ ಸಾಂಪ್ರದಾಯಿಕ ಮತ್ತು ಹೆಚ್ಚು ಜನಾಕರ್ಷವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ದಸರಾ ಉತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಸುದ್ದಿಗಾರರೊಂದಿಗೆ ಮಾತನಾಡಿದರು.  ದಸರಾ ಉತ್ಸವ ಸೆಪ್ಟೆಂಬರ್ 21ರಿಂದ 29ರ ವರೆಗೆ ನಡೆಯಲಿದೆ. 21ರಂದು ಬೆಳಗ್ಗೆ 9.15ಕ್ಕೆ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ನೆರವೇರಲಿದೆ. ಜಂಬೂ ಸವಾರಿಯ ದಿನವಾದ 29ರಂದು ಮಧ್ಯಾಹ್ನ 1.15ರಿಂದ 1.43ರೊಳಗೆ ನಂದಿ ಧ್ವಜಕ್ಕೆ ಪೂಜೆ ಮತ್ತು 3.13ರಿಂದ 3.40ರೊಳಗೆ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯಾಗಲಿದೆ ಎಂದು ಹೇಳಿದರು.

ವಸ್ತುಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಪ್ರತಿವರ್ಷ ಆಯಾ ಜಿಲ್ಲೆಗಳು ಮಳಿಗೆಗಳನ್ನು ತೆರೆಯುತ್ತಿದ್ದವು. ಈ ಬಾರಿ ವಿವಿಧ ಇಲಾಖೆಗಳು ಮಳಿಗೆಗಳನ್ನು ಹೊಂದಲಿವೆ. ಆ ಮಳಿಗೆಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲಾಗುವುದು.  ದಸರಾ ಉತ್ಸವವನ್ನು ಉದ್ಘಾಟಿಸುವ ಗಣ್ಯರು ಯಾರು ಎಂಬುದನ್ನು ವಾರದೊಳಗೆ ನಿರ್ಧರಿಸಲಾಗುವುದು. ಗಣ್ಯರ ಆಯ್ಕೆ ವಿವೇಚನೆಯನ್ನು ಉನ್ನತ ಮಟ್ಟದ ಸಮಿತಿ ತಮಗೆ ವಹಿಸಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.   ಜಂಬೂ ಸವಾರಿ ಹಾದು ಹೋಗುವ ಅರಮನೆಯಿಂದ ಬನ್ನೀಮಂಟಪ ಮೈದಾನದವರೆಗಿನ ರಸ್ತೆಯನ್ನು ಈಗಾಗಲೇ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಮೈಸೂರು ನಗರದ ಎಲ್ಲ ರಸ್ತೆಗಳನ್ನು ದಸರೆಯ ವೇಳೆಗೆ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.

ಜಂಬೂ ಸವಾರಿಯಂದು ನಡೆಯುವ ಮೆರವಣಿಗೆಯಲ್ಲಿ ಎಲ್ಲ ಜಿಲ್ಲೆಗಳಿಂದ ಸ್ತಬ್ಧ ಚಿತ್ರಗಳು ಬರಲಿವೆ. ರಾಜ್ಯದವರ ಜೊತೆಗೆ ಹೊರ ರಾಜ್ಯದ ಕಲಾವಿದರಿಗೂ ಈ ಬಾರಿ ಮೆರವಣಿಗೆಯಲ್ಲಿ ಅವಕಾಶ ನೀಡಲು ನಿರ್ಧರಿಸಿದೆ. ಒಟ್ಟಾರೆ ಮೆರವಣಿಗೆ ಅತ್ಯಂತ ಆಕರ್ಷಕವಾಗಿರಬೇಕು. ನಾಡಿನ ಮತ್ತು ದೇಶದ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸುವಂತೆ ಇರಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಸಿಎಂ ಹೇಳಿದರು.  ದಸರೆಯ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ವಾಹನಗಳ ಪ್ರವೇಶ ತೆರಿಗೆಯಲ್ಲಿ ರಿಯಾಯಿತಿ ತೋರಿಸಬೇಕು ಎಂಬ ಬೇಡಿಕೆ ಬಂದಿದೆ. ಜೆಎಸ್‍ಟಿ ಜಾರಿಯಾದ ಬಳಿಕ ಪ್ರವೇಶ ತೆರಿಗೆ ಇಲ್ಲ. ಒಂದೊಮ್ಮೆ ಇದ್ದರೆ ಸಡಿಲಗೊಳಿಸಲು ಸೂಚಿಸಿದೆ.

ದಸರಾ ಮಹೋತ್ಸವ ಆಚರಣೆಗೆ ಕಳೆದ ವರ್ಷ 13 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ವರ್ಷ 15 ಕೋಟಿ ರೂ.ಗಳನ್ನು ನಿಗಧಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು. ದಸರಾ ಉತ್ಸವಕ್ಕೆ ಸಂಬಂಧಿಸಿದ ಪ್ರಚಾರ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.  ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಲೋಕೋಪಯೋಗಿ ಸಚಿವ ಮಹದೇವಪ್ಪ, ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಉಮಾಶ್ರೀ, ಶಿಕ್ಷಣ ಸಚಿವ ತನ್ವೀರ್ ಸೇಠ್, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin