ಕೆಪಿಸಿಸಿ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ, ಕಾಟಾಚರಕ್ಕೂ ಕಚೇರಿಗೆ ಬಾರದ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

kpcc

ಬೆಂಗಳೂರು, ಜು.25- ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಲು ಸಂಪುಟದ ಪ್ರತಿಯೊಬ್ಬ ಸಚಿವರೂ ವಾರಕ್ಕೊಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಬೇಕು ಎಂದು ಪಕ್ಷದ ಅಧ್ಯಕ್ಷರು ಹೊರಡಿಸಿದ್ದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸರ್ಕಾರದ ಪ್ರಮುಖ ಹಾಗೂ ಪ್ರಭಾವಿ ಸಚಿವರೇ ಕೆಪಿಸಿಸಿ ಅಧ್ಯಕ್ಷರ ಆದೇಶವನ್ನು ಮೂಲೆಗುಂಪು ಮಾಡಿದ್ದಾರೆ. ಈವರೆಗೂ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಚಿವರಿಗಿಂತಲೂ ಭೇಟಿ ನೀಡದ ಸಚಿವರ ಪಟ್ಟಿಯೇ ದೊಡ್ಡದಿದೆ.ಅದರಲ್ಲೂ ಪರಮೇಶ್ವರ್ ಅವರು ಗೃಹ ಸಚಿವರಾದ ನಂತರವಂತೂ ಸಂಪುಟದ ಸಚಿವರು ಕೆಪಿಸಿಸಿ ಕಚೇರಿ ಕಡೆಗೆ ತಲೆ ಹಾಕುವುದನ್ನೇ ಮರೆತಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯಂತೆ ಈ ಹಿಂದೆ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ದಾಖಲೆ ಬರೆದಿದ್ದಾರೆ. ಉಳಿದಂತೆ ಅತಿ ಹೆಚ್ಚು ಜನಸಂಪರ್ಕ ಇರುವ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಆರೋಗ್ಯ ಸಚಿವ ರಮೇಶ್‍ಕುಮಾರ್, ಕಾರ್ಮಿಕ ಸಚಿವ ಸಂತೋಷ್‍ಲಾಡ್, ಯುವ ಜನಸೇವೆ ಇಲಾಖೆಯ ಪ್ರಮೋದ್ ಮಧ್ವರಾಜ್, ಪೌರಾಡಿತ ಸಚಿವ ಈಶ್ವರ್ ಖಂಡ್ರೆ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣಕೈಗಾರಿಕೆ ಸಚಿವ ರಮೇಶ್‍ಜಾರಕಿಹೊಳಿ, ಕೃಷಿ ಸಚಿವ ಕೃಷ್ಣಬೈರೇಗೌಡ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಕೆಪಿಸಿಸಿಯತ್ತ ಒಮ್ಮೆಯೂ ತಲೆ ಹಾಕಿಲ್ಲ.

ಕಿಮ್ಮನೆ ರತ್ನಾಕರ 16 ಬಾರಿ, ಉಮಾಶ್ರೀ 10 ಬಾರಿ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ತಲಾ 6 ಬಾರಿ, ಪರಮೇಶ್ವರ್‍ನಾಯಕ್ 8 ಬಾರಿ, ಮಹದೇವಪ್ರಸಾದ್(ಇದ್ದಾಗ), ಸತೀಸ್‍ಜಾರಕಿ, ಎಚ್.ಕೆ.ಪಾಟೀಲ್, ಎ.ಮಂಜು 2 ಬಾರಿ, ಶಾಮನೂರು ಶಿವಶಂಕರಪ್ಪ, ರೋಷನ್‍ಬೇಗ್, ಎಚ್.ಆಂಜನೇಯ, ದೇಶಪಾಂಡೆ, ಎಂ.ಬಿ.ಪಾಟೀಲ್ ತಲಾ 3 ಬಾರಿ, ಎಸ್.ಆರ್. ಪಾಟೀಲ್, ರಾಮಲಿಂಗಾರೆಡ್ಡಿ 4 ಬಾರಿ, ಎಚ್.ಸಿ.ಮಹದೇವಪ್ಪ 1ಬಾರಿ ಭೇಟಿ ನೀಡಿರುವ ಮಾಹಿತಿ ಇದೆ.

ಸಚಿವರಾಗಿದ್ದ ಪೈಕಿ ಕಿಮ್ಮನೆ ರತ್ನಾಕರ, ಪಿ.ಟಿ.ಪರಮೇಶ್ವರ್‍ನಾಯಕ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಶಾಮನೂರು ಶಿವಶಂಕರಪ್ಪ, ಶಿವರಾಜ್ ತಂಗಡಗಿ, ಅಂಬರೀಶ್ ಸಚಿವ ಸ್ಥಾನ ಕಳೆದುಕೊಂಡು ಮಾಜಿಗಳಾಗಿದ್ದಾರೆ. ಎಚ್.ಎಸ್.ಮಹದೇವಪ್ರಸಾದ್ ಅವರು ಅಕಾಲಿಕ ನಿಧನಕ್ಕೀಡಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವರಾಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿತ್ತು. ಅಂಬರೀಶ್ ಹೊರತುಪಡಿಸಿ ಉಳಿದ ಸಚಿವರು ಅಧ್ಯಕ್ಷರ ಸೂಚನೆಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಪರಮೇಶ್ವರ್ ಅವರು ಸಚಿವರಾದ ನಂತರ ಈ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಯಿತು. ಈ ನಡುವೆ ಸಚಿವರಾಗಿದ್ದ ದಿನೇಶ್‍ಗುಂಡೂರಾವ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕಾರ್ಯಾಧ್ಯಕ್ಷರಿಗೆ ಕೆಪಿಸಿಸಿ ಕಚೇರಿಯ ಕೆಳ ಮಹಡಿಯ ಸಭಾಂಗಣವನ್ನು ಕಾರ್ಯಾಲಯವನ್ನಾಗಿ ಬಿಟ್ಟುಕೊಡಲಾಗಿದೆ. ಹೀಗಾಗಿ ಸಚಿವರು ಭೇಟಿ ನೀಡಿದರೆ ಕಾರ್ಯಕರ್ತರ ಜತೆ ಮಾತನಾಡಲು ಸ್ಥಳವಕಾಶ ಇಲ್ಲ ಎಂಬ ನೆಪವೊಡ್ಡಿ ಬಹಳಷ್ಟು ಸಚಿವರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿಲ್ಲ.

ಇನ್ನೂ ಕೆಲವರು ಉದ್ದೇಶಪೂರ್ವಕವಾಗಿಯೇ ಕೆಪಿಸಿಸಿ ಅಧ್ಯಕ್ಷರ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎನ್ನಲಾಗಿದೆ. ಇದು ಚುನಾವಣೆ ವರ್ಷವಾಗಿದ್ದು, ಕಾರ್ಯಕರ್ತರನ್ನು ಉರಿದುಂಬಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಪಕ್ಷ ಸಂಘಟನೆಯ ವಿಷಯವಾಗಿ ಯಾವುದೇ ಜಿಲ್ಲಾಧ್ಯಕ್ಷರು ಪಕ್ಷ ಸಂಘಟನೆ ವಿಷಯವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದರೆ ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಲಾಭವಾಗಿಲ್ಲ. ಇನ್ಯಾವ ಪುರುಷಾರ್ಥಕ್ಕೆ ಪಕ್ಷ ಸಂಘಟನೆ ಮಾಡಬೇಕು ಎಂಬ ಖಾರವಾದ ಪ್ರತ್ಯುತ್ತರ ಕೇಳಿ ಬರುತ್ತಿದೆ.
ಯಾವುದೇ ಸಚಿವರೂ ಕೈಗೆ ಸಿಗುವುದಿಲ್ಲ. ಕೆಪಿಸಿಸಿ ಕಚೇರಿಗೆ ಹೋದರೂ ಕೇಳುವವರು ದಿಕ್ಕಿಲ್ಲ. ಸಾಮಾನ್ಯ ಕಾರ್ಯಕರ್ತರು ವಿಧಾನಸೌಧಕ್ಕೆ ತೆರಳಿ ಸಚಿವರನ್ನು ಭೇಟಿ ಮಾಡಬೇಕಾದರೆ. ದುಸ್ಸಾಹಸ ಮಾಡಬೇಕು ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.  ಈ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರು ಪ್ರತೀವಾರ ಕಡ್ಡಾಯವಾಗಿ ಒಬ್ಬ ಸಚಿವರು ಕಾರ್ಯಕರ್ತರ ಅಹವಾಲು ಸ್ವೀಕರಿಸಬೇಕೆಂಬ ಆದೇಶ ಮಾಡಿದ್ದರು. ಆದರೆ ಈ ಆದೇಶಕ್ಕೆ ಯಾವುದೇ ಕಿಮ್ಮತ್ತು ಇಲ್ಲದಂತಾಗಿದೆ.
ಸಂಪುಟ ಪುನರ್ ರಚನೆಯಾದ ನಂತರವಂತೂ ಪಶುಸಂಗೋಪನೆ ಸಚಿವರಾದ ಎ.ಮಂಜು ಮತ್ತು ವಸತಿ ಸಚಿವರಾದ ಎಂ.ಕೃಷ್ಣಪ್ಪ ತಲಾ ಒಂದು ಬಾರಿ ಭೇಟಿ ನೀಡಿದ್ದು ಬಿಟ್ಟರೆ ಇನ್ಯಾವ ಸಚಿವರೂ ಅಧಿಕೃತವಾಗಿ ಪಕ್ಷದ ಕಚೇರಿಗೆ ವಾರದ ಭೇಟಿ ನೀಡಿಲ್ಲ. ಇದು ಕಾರ್ಯಕರ್ತರ ಅಸಮಾಧನಕ್ಕೆ ಕಾರಣವಾಗಿದೆ.  ಕೆಲವು ಸಚಿವರು ಕಾರ್ಯಕ್ರಮಗಳು ಇದ್ದಾಗ ಅತಿಥಿಗಳಂತೆ ಬಂದು ಹೋಗಿದ್ದನ್ನು ಹೊರತುಪಡಿಸಿದರೆ ಅಧಿಕೃತವಾಗಿ ವಾರದ ಭೇಟಿಗೆ ಯಾರೂ ಬರುತ್ತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin