ಬಡವರಿಗಾಗಿ ಪ್ರಧಾನಿ ಮೋದಿ ಯಾವುದೇ ಅನುಕೂಲ ಮಾಡಿಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiha--001

ಬೆಂಗಳೂರು, ಜು.25-ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ, ಆದರೂ ನಾನು ಎಲ್ಲಾ ಮಾಡಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು. ಸರ್ವಜ್ಞ ನಗರದ ಕಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಮೋದಿಯವರು ಜಾರಿಗೆ ತಂದಿರುವ ಜನ್‍ಧನ್ ಯೋಜನೆಯಿಂದ ಇದುವರೆಗೂ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ವಿದೇಶಿ ಬ್ಯಾಂಕ್‍ಗಳಲ್ಲಿರುವ ಕಪ್ಪು ಹಣವನ್ನು ತಂದು ರಾಜ್ಯದ ಎಲ್ಲಾ ಜನರ ಖಾತೆಗೂ 15 ಲಕ್ಷ ಠೇವಣಿ ಇಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿವರೆಗೂ 15 ರೂ. ಕೂಡ ಇಟ್ಟಿಲ್ಲ ಎಂದು ಲೇವಡಿ ಮಾಡಿದರು.

ಮೋದಿಯವರ ಬಾಯಿ ಬಡಾಯಿ. ಸಾಧನೆ ಶೂನ್ಯ ಎಂದು ಕುಟುಕಿದ ಅವರು, ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇಂಡಿಯಾ ಶೈನಿಂಗ್ ಅಂತಿದ್ದರು. ಮೋದಿಯವರು ಬಂದ ಮೇಲೆ ಅಚ್ಛೆ ದಿನ್ ಎಂದು ಬಡಾಯಿ ಕೊಚ್ಚಿಕೊಂಡರು. ಆದರೆ ಮೋದಿ ಮಾಡಿದ್ದು ಮಾತ್ರ ಮಾರ್ಕೆಟಿಂಗ್ ಎಂದು ಟೀಕಿಸಿದರು.  ರಾಜ್ಯದಲ್ಲಿ ಇದುವರೆಗೂ ಯಾವುದೇ ಸರ್ಕಾರ ಮಾಡಿರದ ಸಾಧನೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ರಾಜ್ಯದ ಆರೂವರೆ ಕೋಟಿ ಜನರಿಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಲ್ಪಸಂಖ್ಯಾತರಿಗೆ ಅವರ ಅಧಿಕಾರಾವಧಿಯಲ್ಲಿ ಏನೂ ಮಾಡಿಲ್ಲ. ಆದರೆ ಈಗ ಮಾತ್ರ ದಲಿತರ ಮನೆಯಲ್ಲಿ ಉಪಹಾರ ಸೇವಿಸುತ್ತಿದ್ದಾರೆ. ದಲಿತರ ಸಂಬಂಧ ಬೆಳೆಸಿ ಎಂದು ಹೇಳಿದ್ದೆ. ಆದರೆ ದಲಿತರ ಮನೆಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಮೊದಲು ನಾಟಕವಾಡುವುದನ್ನು ಬಿಡಿ ಎಂದು ಕಿವಿಮಾತು ಹೇಳಿದರು. ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಮಹಾನಗರ ಪಾಲಿಕೆಗೆ ಏಳೂವರೆ ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಯಾರೂ ಸಹ ಇಷ್ಟು ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ. ನಾವು ಏನೇ ಕೆಲಸ ಮಾಡಿದರೂ ಅದು ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ ಮತದಾರರು ಮುಂಬರುವ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರು ರಚನಾತ್ಮಕವಾಗಿ ಟೀಕೆ ಮಾಡದೆ ವಾಸ್ತವವಾಗಿ ಕೆಲಸ ಮಾಡಿ ಎಂದು ಹೇಳಿದರು. ಮೇಯರ್ ಜಿ.ಪದ್ಮಾವತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಕಳೆದ ಎರಡೂವರೆ ವರ್ಷದಿಂದೀಚೆಗೆ 7,300 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ ಅಧಿಕಾರಾವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ ಎಂದರು. ಈ ಸಂದರ್ಭದಲ್ಲಿ 4 ಸಾವಿರ ಫಲಾನುಭವಿಗಳಿಗೆ ಆಟೋ, ಹೊಲಿಗೆಯಂತ್ರ, ವಿಕಲಚೇತನರಿಗೆ ಎಲೆಕ್ಟ್ರಿಕಲ್ ಕಿಟ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಮತ್ತಿತರರಿದ್ದರು.

ಚುನಾವಣಾಪ್ರಚಾರಕ್ಕೆ ಬಳಸಿಕೊಂಡ ಕಾರ್ಯಕ್ರಮ: 

ಕಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಚುನಾವಣಾ ಪ್ರಚಾರ ಕಾರ್ಯಕ್ರಮವನ್ನಾಗಿ ಬಳಸಿಕೊಂಡರು.
ಮತದಾರರು ನಮ್ಮ ಮನೆ ದೇವರು. ಜೆಡಿಎಸ್-ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ ಎಂದು ಮನವಿ ಮಾಡಿದರು. ಜೆಡಿಎಸ್‍ಗೆ ಜಾತ್ಯತೀತ ನ್ಯಾಯ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಬೆಂಬಲಿಸಿದರೆ ಕೋಮುವಾದಿಗಳನ್ನು ಬೆಂಬಲಿಸಿದಂತಾಗುತ್ತದೆ. ಹಾಗಾಗಿ ನಮ್ಮನ್ನು ಬೆಂಬಲಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕಾಣಬಹುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin