ಬಿಬಿಎಂಪಿ ಸದಸ್ಯರಾದ ವೇಲು ನಾಯಕ್, ವೆಂಕಟೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ

BBBBBBBBEedgsdg

ಬೆಂಗಳೂರು, ಜು.25-ನನ್ನ ತೇಜೋವಧೆ ಮಾಡಲು ನನ್ನ ವಿರುದ್ಧ ಕೆರೆ ಭೂಮಿ ಕಬಳಿಕೆಯ ಆರೋಪ ಮಾಡಿರುವ ಬಿಬಿಎಂಪಿ ಸದಸ್ಯರಾದ ಜಿ.ಕೆ.ವೆಂಕಟೇಶ್ ಮತ್ತು ಎಂ.ವೇಲುನಾಯ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸು ವುದಾಗಿ ಬಿಜೆಪಿ ಮುಖಂಡ, ಪಾಲಿಕೆ ಮಾಜಿ ಸದಸ್ಯ ಬಿ.ಆರ್.ನಂಜುಂಡಪ್ಪ ಹೇಳಿದ್ದಾರೆ.  ನಾನು ಕಾರ್ಪೊರೇಟರ್ ಆಗಿದ್ದ ಸಮಯದಲ್ಲಿ ಜೆ.ಪಿ.ಉದ್ಯಾನವನದ 28 ಎಕರೆ ಜಾಗವನ್ನು ಕಬಳಿಸಿದ್ದೇನೆ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಗಳು ಸುಳ್ಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.

ಜೆ.ಪಿ.ಉದ್ಯಾನವನ ಕೆರೆಯ ವಿಸ್ತೀರ್ಣದ ಬಗ್ಗೆ ಕೋಳಿವಾಡ ನೇತೃತ್ವದ ಸದನ ಸಮಿತಿ ಸರ್ವೆ ನಡೆಸಿದೆ. ಕೆರೆಯ ವಿಸ್ತೀರ್ಣ 103 ಎಕರೆ 15 ಗುಂಟೆ ಎಂದು ನಮೂದಾಗಿದೆ. ಈ ಜಾಗವನ್ನು ಯಾವ ಯಾವ ಉದ್ದೇಶಗಳಿಗೆ ಬಳಕೆ ಮಾಡಿದೆ, ಎಷ್ಟು ಜಾಗ ಉಳಿದಿದೆ ಎಂಬುದರ ಬಗ್ಗೆ ನಕ್ಷೆ ಸಹಿತವಾದ ಮಾಹಿತಿ ಸರ್ಕಾರದ ಬಳಿಯೇ ಇದೆ. ನಾನು ಯಾವ ಜಾಗವನ್ನೂ ಕೂಡ ಕಬಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಜಾಲಹಳ್ಳಿ ಸರ್ವೆ ನಂಬರ್‍ಗಳ ಪೈಕಿ 39 ಮತ್ತು 31/2 ರಲ್ಲಿ ಇರುವ ಆಸ್ತಿ ನನಗೆ ಪಿತ್ರಾರ್ಜಿತವಾಗಿ ಬಂದಿದೆ. ಕೆರೆಯ ಸರ್ವೆ ಮಾಡಿಸಿ ದಾಗ ನಮಗೆ ಸೇರಿದ 9 ಗುಂಟೆ ಜಾಗ ಕೆರೆಯ ಕಾಂಪೌಂಡ್‍ಒಳಗೆ ಸೇರಿದೆ. ಇಂತಹ ಪರಿಸ್ಥಿತಿಯಲ್ಲಿ ಭೂಮಿ ಕಬಳಿಕೆ ಮಾಡುವುದಾದರೂ ಹೇಗೆ? ಇಷ್ಟೆಲ್ಲಾ ಇದ್ದರೂ ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ.ವೆಂಕಟೇಶ್ ಮತ್ತು ಲಕ್ಷ್ಮಿದೇವಿನಗರ ವಾರ್ಡ್ ಸದಸ್ಯ ಎಂ.ವೇಲುನಾಯ್ಕರ್ ಅವರುಗಳು ನನ್ನ ವಿರುದ್ಧ ವಿನಾಕಾರಣ ಭೂಕಬಳಿಕೆ ಆರೋಪಗಳನ್ನು ಮಾಡಿ ತೇಜೋವಧೆ ಮಾಡಿದ್ದಾರೆ ಎಂದರು.
ಜೆ.ಪಿ.ಪಾರ್ಕ್‍ನಿಂದ ನಾನು ಮೂರು ಬಾರಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದೇನೆ. ಈ ಪಾರ್ಕ್‍ನ ಕೆರೆಯ ಸುತ್ತಮುತ್ತ ಕಾಪೌಂಡ್ ನಿರ್ಮಿಸಿ ಕೆರೆಯ ರಕ್ಷಣೆ ಮಾಡಿದ್ದೇನೆ ಅಲ್ಲದೆ, 84.9 ಎಕರೆ ಜಾಗದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಉತ್ತಮ ಹೆಸರು ಬರುವಂತೆ ಮಾಡಿದ್ದೇನೆ. ಹೀಗಿದ್ದೂ ನನ್ನ ಜನಪ್ರಿಯತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮದು ತಲಾತಲಾಂತರದಿಂದ ಬಡವರ ಶ್ರೇಯೋಭಿವೃದ್ದಿಗಾಗಿ ದಾನ ಮಾಡುತ್ತಾ ಬಂದಿರುವ ವಂಶವಾಗಿದೆ. ನಮ್ಮ ಕುಟುಂಬವನ್ನು ಚಿಕ್ಕಬಂಡಪ್ಪನವರ ಕುಟುಂಬವೆಂದೇ ಕರೆಯಲಾಗುತ್ತದೆ. ಯಶವಂತಪುರ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಒಂದೇ ಒಂದು ಸರ್ಕಾರಿ ಶಾಲೆ ಇದ್ದಂತಹ ದಿನಗಳಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಇದನ್ನು ಮನಗಂಡು ನಮ್ಮ ಕುಟುಂಬವು ಹಲವು ದಶಕಗಳ ಹಿಂದೆಯೇ ಯಶವಂತಪುರದ ಸರ್ವೇ ನಂ.43ರಲ್ಲಿದ್ದ 1.2 ಎಕರೆ ಜಾಗವನ್ನು ಸರ್ಕಾರಿ ಶಾಲೆಗೆ ಬಿಟ್ಟುಕೊಟ್ಟಿತ್ತು ಎಂದರು.

150 ಬಡ ಕುಟುಂಬಗಳಿಗೆ ಬಿ.ಕೆ.ನಗರದ 2ನೆ ಮುಖ್ಯರಸ್ತೆಯಲ್ಲಿ ಮನೆ ಕಟ್ಟಿಕೊಳ್ಳಲು 2030 ವಿಸ್ತೀರ್ಣದ ನಿವೇಶನಗಳನ್ನು ಉಚಿತವಾಗಿ ನೀಡಿದ್ದೇವೆ. ಯಶವಂತಪುರ ಸರ್ವೆ ನಂ.136ರಲ್ಲಿ 90 ಸಾವಿರ ಅಡಿಗಳಷ್ಟು ಜಾಗವನ್ನು ಬಡವರಿಗೆ ಬಿಟ್ಟುಕೊಟ್ಟಿದ್ದೇವೆ. ಯಶವಂತಪುರ, ಸುಣ್ಣದ ಗೂಡು ಕೊಳಚೆ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು 22 ಗುಂಟೆ ಭೂಮಿ ದಾನ, ಮೋಹನ್‍ಕುಮಾರ್ ನಗರದ ಅಕ್ಕಿಯಪ್ಪಗಾರ್ಡನ್‍ನ ನಿವರ್ಸತಿಗರಿಗೆ ಮನೆ ನಿರ್ಮಾಣಕ್ಕೆ ಸರ್ವೆ ನಂ.111 ರಲ್ಲಿ 1.5 ಎಕರೆ ಭೂಮಿ, ಆನಂದ ಸಾಮಾಜಿಕ, ಶೈಕ್ಷಣಿಕ ವಿದ್ಯಾಸಂಸ್ಥೆಗೆ ಸರ್ವೆ ನಂ.136/2ರಲ್ಲಿ 20 ಗುಂಟೆ ಜಾಗವನ್ನು ಉಚಿತವಾಗಿ ನೀಡಿದ್ದೇವೆ.
ಹೀಗೆ ಸಮಾಜಸೇವೆಯಲ್ಲಿ ತೊಡಗಿರುವ ನಮ್ಮ ಕುಟುಂಬದ ವಿರುದ್ದ ಭೂ ಕಬಳಿಕೆ ಆರೋಪ ಮಾಡಿರುವವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ರಾಮಚಂದ್ರ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin