ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಕೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

Kovind--07

ನವದೆಹಲಿ, ಜು.25- ದೇಶದ 14 ನೇ ರಾಷ್ಟ್ರಪತಿಯಾಗಿ ಬಿಹಾರದ ಮಾಜಿ ರಾಜ್ಯಪಾಲ ರಾಮ್‍ನಾಥ್ ಕೋವಿಂದ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಇದರಿಂದಾಗಿ ರಾಷ್ಟ್ರಪತಿ ಭವನದಲ್ಲೂ ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಬಹುದಿನಗಳ ಕನಸು ದಶಕಗಳ ಬಳಿಕ ಇಂದು ನನಸಾಗಿದೆ.
ಮಧ್ಯಾಹ್ನ 12.25ಕ್ಕೆ ಸರಿಯಾಗಿ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‍ನಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್‍ಸಿಂಗ್ ಅವರು ದೇಶದ ಪ್ರಥಮ ಪ್ರಜೆಗೆ ಅಧಿಕಾರ ಗೌಪ್ಯತೆ ಬೋಧಿಸಿದರು.

Kovind--02 ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ದೇಶದ ಅತ್ಯುನ್ನತ ಹುದ್ದೆ ಎನಿಸಿಕೊಂಡ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೋವಿಂದ್ ಪಾತ್ರರಾದರು. ಅಲ್ಲದೆ ಮಾಜಿ ರಾಷ್ಟ್ರಪತಿ ದಿ.ಕೆ.ಆರ್.ನಾರಾಯಣನ್ ನಂತರ ದಲಿತ ಸಮುದಾಯದಿಂದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾದ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಕಳೆದ ಗುರುವಾರ ನಡೆದ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಮ್‍ನಾಥ್ ಕೋವಿಂದ್ ಅವರು ಯುಪಿಎ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರ್ ಅವರನ್ನು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

Kovind--03

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್‍ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಸಚಿವರು, ಸಂಸದರು, ವಿವಿಧ ದೇಶಗಳ ರಾಯಭಾರಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜತಾಂತ್ರಿಕ ಮುಖ್ಯಸ್ಥರು, ಸಂಸತ್ ಸದಸ್ಯರು, ಸಚಿವಾಲಯದ ಉನ್ನತಾಧಿಕಾರಿಗಳು, ರಾಜತಾಂತ್ರಿಕರು, ಸೇನಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಗೌರವಾರ್ಥವಾಗಿ 21-ಗನ್ ಸೆಲ್ಯೂಟ್ ನಡೆಯಿತು. ಬಳಿಕ ನೂತನ ರಾಷ್ಟ್ರಪತಿ ಕೋವಿಂದ್ ಅವರು ಭಾಷಣ ಮಾಡಿದರು.

Kovind--05

ಪದಗ್ರಹಣ ಸಮಾರಂಭಕ್ಕೂ ಮೊದಲು ಕೋವಿಂದ್ ಅವರು ರಾಜ್‍ಘಾಟ್‍ಗೆ ಭೇಟಿ ಕೊಟ್ಟು ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದರು. ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತೆರಳಿ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್ ಭವನಕ್ಕೆ ಆಗಮಿಸಿದರು. ಇದಕ್ಕೂ ಮುನ್ನ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದ ಮುಂಭಾಗಕ್ಕೆ ರಾಷ್ಟ್ರಪತಿಗಳ ಸೇನಾ ಕಾರ್ಯದರ್ಶಿ ಕರೆತಂದ ಬಳಿಕ ಅಲ್ಲಿಂದ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಹಾಗೂ ಕೋವಿಂದ್ ಒಂದೇ ಕಾರಿನಲ್ಲಿ ಸಂಸತ್ತಿಗೆ ತೆರಳಿದರು.

Kovind--08

ಸಂಸತ್ತಿನಲ್ಲಿ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ, ಲೋಕಸಭಾ ಸ್ಪೀಕರ್ ಕೋವಿಂದ-ಪ್ರಣಬ್ ಅವರನ್ನು ಸೆಂಟ್ರಲ್ ಹಾಲ್‍ಗೆ ಕರೆದೊಯ್ಯುದರು. ನಂತರ ಮುಖ್ಯನ್ಯಾಯಮೂರ್ತಿ ಖೇಹರ್ ಅವರು ನೂತನ ರಾಷ್ಟ್ರಪತಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ನೂತನ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ನಂತರ ರಾಷ್ಟ್ರಪತಿ ಕೋವಿಂದ್‍ರನ್ನು ಅಂಗರಕ್ಷಕರು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದರು. ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೋವಿಂದ್ ಅವರಿಗೆ ರಾಷ್ಟ್ರಪತಿ ಭವನವನ್ನು ಪರಿಚಯಿಸಿದ ಬಳಿಕ ದರ್ಬಾರ್ ಹಾಲ್‍ನಲ್ಲಿರುವ ಸಿಂಹಾಸನದಲ್ಲಿ ಸಾಂಕೇತಿಕವಾಗಿ ಕೋವಿಂದರನ್ನು ಕುಳ್ಳಿರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಮನಾಥ ಕೋವಿಂದ್
ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಮನಾಥ ಕೋವಿಂದ್

ಅಂತಿಮವಾಗಿ ಕೋವಿಂದ್ ಅವರು ಪ್ರಣಬ್ ಅವರಿಗೆ ನಿಗದಿಗೊಳಿಸಲಾಗಿರುವ 10, ರಾಜಾಜಿ ಮಾರ್ಗದಲ್ಲಿರುವ ನೂತನ ನಿವಾಸಕ್ಕೆ ಅವರನ್ನು ಬಿಟ್ಟು ರಾಷ್ಟ್ರಪತಿ ಭವನಕ್ಕೆ ಹಿಂತಿರುಗಿದರು. ನೂತನ ರಾಷ್ಟ್ರಪತಿ ಕೋವಿಂದರನ್ನು ಅಂಗರಕ್ಷಕರು ಅಧಿಕೃತ ನಿವಾಸಕ್ಕೆ ಕರೆದೊಯ್ಯರು. ಈ ಮೂಲಕ ಕೋವಿಂದ್ ಅವರ ದರ್ಬಾರ್ ಅಧಿಕೃತವಾಗಿ ಇಂದಿನಿಂದ ಆರಂಭವಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin