ರಾಜ್ಯದಲ್ಲಿ ಮತ್ತೆ ಮುಂಗಾರು ದುರ್ಬಲ, ಸೆಪ್ಟಂಬರ್‍ವರೆಗೂ ಬರ ಘೋಷಣೆ ಇಲ್ಲ

Mansoon-Rain

ಬೆಂಗಳೂರು, ಜು.25- ಕಳೆದ ವಾರ ಒಂದೆರಡು ದಿನ ಕರಾವಳಿ ಹಾಗೂ ಮಲೆನಾಡಿನಲ್ಲಿ ಆರ್ಭಟಿಸಿದ್ದ ಮುಂಗಾರು ಮಳೆ ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು 8-10 ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆ.4ರವರೆಗೂ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೀರ್ಘಕಾಲಿಕ ಹವಾಮಾನ ಮುನ್ಸೂಚನೆ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಬೇಕು. ಆದರೆ, ಹವಾಮಾನದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೋ ಕಾದು ನೋಡಬೇಕು ಎಂದರು.

ರಾಜ್ಯ ಸರ್ಕಾರ ಆಗಸ್ಟ್ ಮೊದಲ ವಾರದಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಕೃತಕ ಮಳೆ ತರಿಸುವ ಪ್ರಯತ್ನ ನಡೆಸಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಎದುರಿಸಿರುವ ಪ್ರದೇಶದಲ್ಲಿ ಬರದ ಛಾಯೆ ಕಂಡು ಬರುತ್ತಿದೆ. ಆದರೂ ಕೂಡ ಮುಂದಿನ ಸೆಪ್ಟೆಂಬರ್‍ವರೆಗೂ ಅಧಿಕೃತವಾಗಿ ಬರಪೀಡಿತ ಪ್ರದೇಶಗಳ ಘೋಷಣೆ ಆಗುವುದಿಲ್ಲ.

ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಜಾನುವಾರುಗಳ ಮೇವು, ಕುಡಿಯುವ ನೀರು, ಮೇವು ಬೆಳೆಯಲು ಬಿತ್ತನೆ ಬೀಜ ಸೇರಿದಂತೆ ಬರ ಪರಿಹಾರ ಕಾರ್ಯವನ್ನು ಕೈಗೊಳ್ಳಲು ಯಾವುದೇ ಅಡ್ಡಿಯಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುದಾನ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮಳೆ ಕೊರತೆ ಮುಂದುವರೆದಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಇದರಿಂದ ಬಿತ್ತನೆ ಪ್ರಮಾಣದಲ್ಲೂ ವ್ಯತ್ಯಾಸವಾಗಿದೆ ಎಂದರು. ಆದರೆ, ಕಳೆದವಾರ ಬಿದ್ದ ಮಳೆಯಿಂದಾಗಿ ಕೆಲ ಜಲಾಶಯಗಳ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದ್ದು, ಒಳ ಹರಿವು ಹೆಚ್ಚಳವಾಗಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin