ರೈತರಿಗೆ ಜಿಎಸ್‍ಟಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Formners--01

ಬೆಂಗಳೂರು, ಜು.25-ವ್ಯವಸಾಯಕ್ಕೆ ಸಂಬಂಧಿಸಿದ ವಿದ್ಯುತ್ ಉಪಕರಣಗಳ ಮೇಲೆ ಶೇ.28ರಷ್ಟು ಜಿಎಸ್‍ಟಿ ತೆರಿಗೆಯಿಂದ ವ್ಯವಸಾಯದ ವೆಚ್ಚ ಹೆಚ್ಚಾಗುತ್ತಿದೆ ಎಂದು ಬೆಂಗಳೂರು ಸ್ವಿಚ್‍ಗೇರ್ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಷನ್ ಅಧ್ಯಕ್ಷ ರತನ್‍ರಾಜ್ ತಿಳಿಸಿದ್ದಾರೆ. ಭಾರತದಾದ್ಯಂತ ರೈತರಿಗೆ, ಅತಿ ಸಣ್ಣ ಕೈಗಾರಿಕೆಗಳಿಗೆ ಕೃಷಿ ಸಲಕರಣೆಗಳನ್ನು ಉತ್ಪಾದಿಸುತ್ತಿರುವ ಬಿಎಸ್‍ಎಂಎ ಸಂಸ್ಥೆಯು ಗರಿಷ್ಠ ಜಿಎಸ್‍ಟಿ ತೆರಿಗೆಯಿಂದ ನಷ್ಟ ಅನುಭವಿಸುತ್ತಿದೆ. ಜಿಎಸ್‍ಟಿ ದರಗಳನ್ನು ಜಾರಿಗೊಳಿಸಿದ ನಂತರ ಕಳೆದ 25 ದಿನಗಳಿಂದ ಯಾವುದೇ ವಹಿವಾಟು ನಡೆಯುತ್ತಿಲ್ಲ. ಜಿಎಸ್‍ಟಿ ಹೇರಿರುವುದರಿಂದ ರೈತ ಮತ್ತು ಸಂಘ-ಸಂಸ್ಥೆಗಳ ವೆಚ್ಚ ಹೆಚ್ಚಾಗಿದೆ.

ಸರ್ಕಾರವು ಕೃಷಿಯನ್ನು ಬೆಂಬಲಿಸುತ್ತಿದೆ. ಆದರೆ ವಿದ್ಯುತ್ ಕೃಷಿ ಉಪಕರಣಗಳ ಮೇಲಿನ ಹೆಚ್ಚಿನ ತೆರಿಗೆಯು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ. ಇದರಿಂದ ಈಗಾಗಲೇ ಕಡಿಮೆ ಆದಾಯವಿರುವ ರೈತರ ಆದಾಯದಲ್ಲಿ ಮತ್ತಷ್ಟು ಕುಸಿತವಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರು ಮತ್ತು ಸಣ್ಣ ಕೈಗಾರಿಕೆಗಳು ಬಳಸುವ ಬೇಸಾಯಕ್ಕೆ ಸಂಬಂಧಿಸಿದ ಉಪಕರಣಗಳಾದ ಮೋಟರ್ ಸ್ಟಾರ್ಟರ್, ಅಗ್ರಿ ಸಬ್‍ಮರ್ಸಿಬಲ್ ಸ್ಟಾರ್ಟರ್ ಪಂಪ್‍ಗಳು, ಫ್ಯೂಸ್‍ಯೂನಿಟ್‍ಗಳು, ಸ್ವಿಚ್‍ಗೇರ್‍ಗಳನ್ನು ಐಷಾರಾಮಿ ಉಪಕರಣಗಳ ಗುಂಪಿನಲ್ಲಿ ಶೇ.28ರಷ್ಟು ಜಿಎಸ್‍ಟಿ ಸ್ಲ್ಯಾಬ್ ಅಡಿಯಲ್ಲಿ ಪರಿಗಣಿಸಲಾಗಿದೆ.

ಈ ಉಪಕರಣಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಇವುಗಳ ಮೇಲೆ ಜಿಎಸ್‍ಟಿ ಹೇರಿಕೆಯಿಂದ ಕೃಷಿ ವೆಚ್ಚವೂ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ಎಸ್‍ಎಸ್‍ಐ ಉದ್ಯಮಿಗಳಾದ ತರುಣ್ ಸಂಚಿತ್ ಹಾಗೂ ಜಯಂತ್ ಮಾದ ತಿಳಿಸಿದ್ದಾರೆ. ಈ ಅಂಶಗಳನ್ನು ಪರಿಗಣಿಸಿ ಬೇಸಾಯಕ್ಕೆ ಸಂಬಂಧಿಸಿದ ವಿದ್ಯುತ್ ಉಪಕರಣಗಳ ಮೇಲಿನ ಜಿಎಸ್‍ಟಿ ದರವನ್ನು ಇಳಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin