ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಗೆಟಕುವ ದರದಲ್ಲಿ ಸಿರಿ ಧಾನ್ಯ

ಈ ಸುದ್ದಿಯನ್ನು ಶೇರ್ ಮಾಡಿ

Krishna-Byregowda

ಬೆಂಗಳೂರು, ಜು.25- ಸಮೃದ್ಧ ಪೌಷ್ಠಿಕಾಂಶ ಗಳನ್ನು ಹೊಂದಿರುವ ಸಿರಿಧಾನ್ಯಗಳಿಂದ ಜನರಿಗೆ ಪ್ರಿಯವಾದ ಮತ್ತು ಕೈಗೆಟುಕುವ ಆಹಾರ ಪದಾರ್ಥಗಳನ್ನು ತಯಾರಿಸಲು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಎಂ.ಎಸ್.ರಾಮಯ್ಯ ನಗರದಲ್ಲಿರುವ ದ್ವಾರಕ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆಹಾರ ತಜ್ಞರಿಗೆ ಮತ್ತು ಬಾಣಸಿಗರಿಗೆ ಸಿರಿಧಾನ್ಯ ಖಾದ್ಯಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸಿರಿ ಧಾನ್ಯಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಬಿಳಿಜೋಳ, ಉರಲು, ಆರ್ಕ, ಬರಗು ಬಡವರ ಆಹಾರ ಎಂದು ಸೀಮಿತಗೊಳಿಸಲಾಗಿತ್ತು. ಗೋಧಿ, ಅಕ್ಕಿ, ಸಕ್ಕರೆ, ಎಣ್ಣೆ ಬಳಕೆ ಶ್ರೀಮಂತಿಕೆಯ ಸಂಕೇತ ಎಂದು ಬಿಂಬಿಸಲಾಗಿತ್ತು ಎಂದರು.

ಬಹುತೇಕರು ಅಕ್ಕಿ, ಗೋಧಿ, ಸಕ್ಕರೆಯನ್ನೇ ಪ್ರಧಾನ ಆಹಾರವನ್ನಾಗಿ ಬಳಸುತ್ತಿದ್ದಾರೆ. ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಕಾಣಿಸುತ್ತಿವೆ. ಭಾರತ ವಿಶ್ವದಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಎರಡನೇ ದೇಶವಾಗಿದೆ. ಮಧುಮೇಹದ ಜತೆಗೆ ಹೃದಯದ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿಂದೆ ಪ್ಲೇಗ್, ಕಾಲರ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಿದ್ದವು. ಅವುಗಳನ್ನು ಸಮರ್ಥವಾಗಿ ನಿಯಂತ್ರಿಸಲಾಗಿದೆ. ಆದರೆ, ಬದಲಾದ ಜೀವನ ಶೈಲಿಯಿಂದ ದಿನೇ ದಿನೇ ಹಲವು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಒತ್ತಡದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ರೋಗಗಳು ಉಲ್ಬಣಗೊಳ್ಳುತ್ತಿವೆ. ಇವುಗಳಿಗೆ ಸಿರಿ ಧಾನ್ಯಗಳ ಬಳಕೆ ರಾಮಬಾಣವಾಗಿದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಬಡವರ ಆಹಾರವೆಂದು ಹೇಳಲಾಗುತ್ತಿದ್ದ ಸಿರಿ ಧಾನ್ಯಗಳು ಈಗ ಆರೋಗ್ಯದ ಶ್ರೀಮಂತಿಕೆಯ ಧಾನ್ಯಗಳು ಎಂದು ಗುರುತಿಸಲ್ಪಡುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಆಹಾರ ತಯಾರಿಸುವುದು ಮತ್ತು ಸೇವಿಸುವ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಹೀಗಾಗಿ ಈ ಕುರಿತು ವಿವಿಧ ಸಂಘ-ಸಂಸ್ಥೆಗಳ ಜತೆ ಸೇರಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಜನರಿಗೆ ಇಷ್ಟವಾಗುವ ಇಡ್ಲಿ, ದೋಸೆ, ಫಿಜ್ಜಾ, ಬರ್‍ಗರ್, ಸ್ನ್ಯಾಕ್ಸ್‍ಗಳನ್ನು ಸಿರಿಧಾನ ಗಳಲ್ಲಿ ತಯಾರಿಸುವ ಯೋಜನೆಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ಸಿರಿ ಧಾನ್ಯಗಳಲ್ಲೇ ರೆಡಿ ಟು ಈಟ್, ರೆಡಿ ಟು ಕುಕ್ ಪದಾರ್ಥಗಳನ್ನು ತಯಾರಿಸಲಾಗುವುದು. ಜತೆಗೆ ಸಿರಿಧಾನ್ಯಗಳ ಪದಾರ್ಥಗಳನ್ನು ಉಪಯೋಗಿಸುವ ಕ್ರಮಗಳ ಬಗ್ಗೆ ಆನ್‍ಲೈನ್ ವೆಬ್‍ಸೆಟ್‍ಗಳ ಮೂಲಕ ಪ್ರಚಾರ ಮಾಡಲಾಗುವುದು ಎಂದು ಹೇಳಿದರು. ಸಿರಿ ಧಾನ್ಯಗಳು ನಮ್ಮ ಪುರಾತನ ಆಹಾರ ಸಂಸ್ಕøತಿ ಎಂದು ಭಾವನಾತ್ಮಕವಾಗಿ ಪ್ರಚಾರ ಮಾಡಲು ನಾವು ಬಯಸುವುದಿಲ್ಲ. ಸಿರಿ ಧಾನ್ಯಗಳು ಅಕ್ಕಿ, ಗೋಧಿಗಿಂತಲೂ ಪೋಷಕಾಂಶ, ಫೈಬರ್, ಕ್ಯಾಲ್ಸಿಯಂ ಅಂಶಗಳಿಗೆ ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಆಧಾರದ ಮೇಲೆ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಿರಿ ಧಾನ್ಯಗಳ ಬಳಕೆ ಈ ಮೊದಲು ದೇಶದಲ್ಲಿ ಶೇ.30ರಷ್ಟಿತ್ತು. ಅದು ಈಗ ಶೇ.5ಕ್ಕಿಳಿದಿದೆ. ಇದರಿಂದಾಗಿ ಆರೋಗ್ಯದಲ್ಲೂ ಹಲವಾರು ವ್ಯತ್ಯಯಗಳಾಗಿವೆ ಎಂದು ಹೇಳಿದರು. ಸಿರಿಧಾನ್ಯಗಳ ಉತ್ಪನ್ನ ಕೂಡ ಅತ್ಯಂತ ಸುಲಭ ವಾಗಿದೆ. ಒಂದು ಕೆಜಿ ಅಕ್ಕಿ ಬೆಳೆಯಲು ಸುಮಾರು 4ರಿಂದ 5ಸಾವಿರ ಲೀಟರ್ ನೀರು ಬೇಕು. ಸಿರಿ ಧಾನ್ಯಕ್ಕೆ ಅತ್ಯಂತ ಕಡಿಮೆ ನೀರು ಸಾಕು. ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಬೆಳೆಯಬಹುದು. ಅತ್ಯಂತ ಕಡಿಮೆ ಪ್ರಮಾಣದ ರಸಗೊಬ್ಬರ, ರಾಸಾಯನಿಕ ಕ್ರಿಮಿನಾಶಕಗಳ ಬಳಕೆ ಮಾಡಿದರೆ ಸಾಕು ಎಂದು ಸಚಿವರು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin