ಹೊಸ ನೇಮಕಾತಿಗೆ ಅತಿಥಿ ಉಪನ್ಯಾಸಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

College--lecturer

ಬೆಂಗಳೂರು, ಜು.25-ಹೊಸ ನೇಮಕಾತಿ ಹೆಸರಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರನ್ನು ಕೈಬಿಡಲು ಮುಂದಾಗಿರುವ ಕ್ರಮ ಖಂಡನೀಯ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಆಕ್ರೋಶವ್ಯಕ್ತಪಡಿಸಿದೆ.ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 12,859 ಅತಿಥಿ ಉಪನ್ಯಾಸಕರ ಸೇವೆಯನ್ನು ಅನೇಕ ವರ್ಷಗಳಿಂದ ಬಳಸಿಕೊಂಡ ಸರ್ಕಾರ ಹೊಸ ನೇಮಕಾತಿ ಹೆಸರಲ್ಲಿ ಸಾವಿರಾರು ಉಪನ್ಯಾಸಕರನ್ನು ಕೈಬಿಡಲು ಮುಂದಾಗಿರುವ ಕ್ರಮವನ್ನು ಸಮಿತಿಯ ಪದಾಧಿಕಾರಿಗಳಾದ ಡಾ.ಎಚ್.ಸೋಮಶೇಖರ್, ಎಂ.ಸಿ.ನರಹರಿ, ಅರುಣ್‍ಕುಮಾರ್ ಮತ್ತಿತರರು ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ಸಾವಿರಾರು ಅತಿಥಿ ಉಪನ್ಯಾಸಕರು ಪರ್ಯಾಯ ಉದ್ಯೋಗ ಹುಡುಕಿಕೊಳ್ಳಲು ತೊಳಲಾಡುತ್ತಿದ್ದಾರೆ. ದಿವ್ಯಾಂಗರೂ ಸೇರಿದಂತೆ ವಯೋಮಿತಿ ಮೀರಿದವರು, ಮೀರುತ್ತಿರುವವರು ಈ ಭೀತಿ ಎದುರಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಮುಂದುವರೆಸುವುದಾಗಿ ಇಲಾಖೆ ಭರವಸೆ ನೀಡಿತ್ತಾದರೂ ಈ ಬಾರಿ ನೇಮಕಾತಿ ಸಂದರ್ಭದಲ್ಲಿ ಭರವಸೆಯನ್ನು ಹುಸಿಯಾಗಿಸಿದೆ ಎಂದು ಆರೋಪಿಸಿದ್ದಾರೆ.

ಪ್ರಸಕ್ತ ಸಾಲಿಗೆ ಹೊಸದಾಗಿ 1489ಕ್ಕೂ ಹೆಚ್ಚು ಪ್ರಾಧ್ಯಾಪಕ ನೇಮಕಾತಿ ಪ್ರಕರಣದಲ್ಲಿ 700ಕ್ಕೂ ಹೆಚ್ಚು ಅನರ್ಹರು ವಾಮಮಾರ್ಗದಲ್ಲಿ ಆಯ್ಕೆಗೊಂಡಿದ್ದಾರೆ ಎಂದು ಇಲಾಖೆಯ ತನಿಖಾ ವರದಿಯಲ್ಲಿ ಬಹಿರಂಗವಾಗಿರುವಾಗ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದ ಸಹಾಯಕ ಪ್ರಾಧ್ಯಾಪಕರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ. ಇದನ್ನು ಬಿಟ್ಟು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ನೇಮಕಾತಿ ನಡೆಸಲು ಆದೇಶಿಸಿರುವುದು ಕಾನೂನು ಬಾಹಿರ.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೇಮಕಾತಿ ಪ್ರಕ್ರಿಯೆ ತಡೆಹಿಡಿದು ಕಳೆದ ಸಾಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸಬೇಕು ಮತ್ತು ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin