50ನೆ ಟೆಸ್ಟ್ ಆಡುವ ಕಾತರದಲ್ಲಿ ಸ್ಪಿನ್ ಮಾಂತ್ರಿಕ ಅಶ್ವಿನ್

ಈ ಸುದ್ದಿಯನ್ನು ಶೇರ್ ಮಾಡಿ

Ashwin-01

ಗಾಲೆ, ಜು. 25- ಭಾರತ ತಂಡದಲ್ಲಿ ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡು ತಂಡಕ್ಕೆ ಹಲವಾರು ಬಾರಿ ಗೆಲುವನ್ನು ತಂದುಕೊಟ್ಟಿರುವ ರವಿಚಂದ್ರನ್ ಅಶ್ವಿನ್ ಅವರಿಗೆ 50ನೆ ಟೆಸ್ಟ್ ಪಂದ್ಯವಾಡುವ ಕಾತರ.  ನಾಳೆಯಿಂದ ಗಾಲೆಯಲ್ಲಿ ಆರಂಭಗೊಳ್ಳಲಿರುವ 3 ಟೆಸ್ಟ್‍ಗಳ ಮೊದಲ ಟೆಸ್ಟ್‍ನಲ್ಲಿ ಆಡುವ ಮೂಲಕ 50 ಟೆಸ್ಟ್ ಪಂದ್ಯ ಆಡಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.  2011 ನವೆಂಬರ್ 6 ರಂದು ಟೆಸ್ಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಅಶ್ವಿನ್ ಅಂದು ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದಿದ್ದ ಅನಿಲ್‍ಕುಂಬ್ಳೆ ಹಾಗೂ ಹಭರ್ಜನ್‍ಸಿಂಗ್ ಅವರನ್ನು ಮೀರಿಸುವಂತೆ ಬೌಲಿಂಗ್ ಮಾಡುವ ಮೂಲಕ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಂದಿನಿಂದ ಆರಂಭಗೊಂಡ ಅವರ ಕ್ರಿಕೆಟ್ ಅಭಿಯಾನ ಇಂದು ಅವರನ್ನು ವಿಶ್ವದಲ್ಲೇ ಶ್ರೇಷ್ಠ ಸ್ಪಿನ್ನರ್ ಎಂದು ಗುರುತಿಸುವಂತೆ ಮಾಡಿದೆ.
2013ರ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಟೆಸ್ಟ್ ಪಂದ್ಯಗಳಿಂದ 29 ವಿಕೆಟ್‍ಗಳನ್ನು ಕೆಡವುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದೇ ಅಲ್ಲದೆ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ 9.3 ಓವರ್‍ಗಳಲ್ಲಿ ಕೇವಲ 15 ರನ್‍ಗಳನ್ನು ನೀಡಿ 6 ವಿಕೆಟ್ ಕಬಳಿಸಿರುವುದು ಕೂಡ ಅವರ ಟೆಸ್ಟ್ ಕ್ರಿಕೆಟ್‍ನಲ್ಲಿ ಪ್ರದರ್ಶಿಸಿದ ಅದ್ಭುತ ಬೌಲಿಂಗ್ ಸ್ಪೆಲ್ ಅನ್ನಿಸಿಕೊಂಡಿದೆ. ಬೌಲಿಂಗ್ ಮಾತ್ರವಲ್ಲದೆ ತಮ್ಮ ಬ್ಯಾಟಿಂಗ್‍ನಿಂದಲೂ ಗಮನ ಸೆಳೆದಿರುವ ಅಶ್ವಿನ್ ಇದುವರೆಗೂ 1903 ರನ್‍ಗಳನ್ನು ಗಳಿಸಿದ್ದು 2000 ರನ್ ಗಳಿಸಲು ಉತ್ಸುಕರಾಗಿದ್ದಾರೆ.  ನಾಳೆಯಿಂದ ಆರಂಭಗೊಳ್ಳುವ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲೂ ಕೂಡ ತಮ್ಮ ಬೌಲಿಂಗ್ ಚಮತ್ಕಾರವನ್ನು ಪ್ರದರ್ಶಿಸುವ ಮೂಲಕ ತಂಡದ ಗೆಲುವಲ್ಲಿ ಮಹತ್ವದ ಕಾಣಿಕೆ ನೀಡಲು ಅಶ್ವಿನ್ ಉತ್ಸುಕರಾಗಿದ್ದಾರೆ.

ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಸಾಧನೆ:

ಬ್ಯಾಟಿಂಗ್: 49 ಪಂದ್ಯಗಳು, 69 ಇನ್ನಿಂಗ್ಸ್ , 1903, 124 ಸರ್ವಶ್ರೇಷ್ಠ , 10 ಅರ್ಧಶತಕ, 4 ಶತಕ.  ಬೌಲಿಂಗ್: 49 ಪಂದ್ಯ, 92 ಇನ್ನಿಂಗ್ಸ್ , 6937 ರನ್, 275 ವಿಕೆಟ್, 7/59 ಸರ್ವಶ್ರೇಷ್ಠ ಪ್ರದರ್ಶನ. 7 ಬಾರಿ ಪಂದ್ಯವೊಂದಲ್ಲಿ 10 ವಿಕೆಟ್ ಪಡೆದ ಸಾಧನೆ ಹಾಗೂ 25 ಬಾರಿ 5 ವಿಕೆಟ್ ಪಡೆದ ಸಾಧನೆಯನ್ನು ಅಶ್ವಿನ್ ಮಾಡಿದ್ದಾರೆ.

ಡ್ರೆಸಿಂಗ್ ರೂಮ್‍ನಲ್ಲಿ ಉತ್ತಮ ವಾತಾವರಣ :

ರವಿಶಾಸ್ತ್ರಿಯವರು ಭಾರತ ತಂಡದ ತರಬೇತುದಾರರಾದ ಡ್ರೆಸಿಂಗ್ ರೂಮ್‍ನಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗಲಿದೆ ಎಂದು ರವಿಚಂದ್ರನ್ ಅಶ್ವಿನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.  ಅನಿಲ್‍ಕುಂಬ್ಳೆ ತರಬೇತುದಾರ ರಾಗಿದ್ದಾಗ ಇದ್ದ ಒತ್ತಡಗಳು ಈಗಿಲ್ಲದಿರುವುದರಿಂದ ಶ್ರೀಲಂಕಾ ವಿರುದ್ಧ ಸರಣಿ ಗೆಲ್ಲುವ ಹುಮ್ಮಸ್ಸು ಬಂದಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin