ಬಿಬಿಎಂಪಿ ಪಾಲಿಗೆ ರಸವಾಗಲಿದೆ ಕಸ, ತ್ಯಾಜ್ಯ ನಿರ್ವಹಣೆಗೆ ಬರುತ್ತಿದೆ ಹೊಸ ಕೋಶ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು,ಜು.26- ಕಸ ಬಿಬಿಎಂಪಿ ಪಾಲಿಗೆ ರಸ ಇದ್ದಂತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.  ಅಸಮರ್ಪಕ ಕಸ ವಿಲೇವಾರಿ ಮಾನದಂಡವಾಗಿಟ್ಟುಕೊಂಡು ಕಸ ನಿರ್ವಹಣೆಗೆ ಘನ ತಾಜ್ಯ ನಿರ್ವಹಣೆ ಕೋಶ ಸ್ಥಾಪನೆ ಸೇರಿದಂತೆ ನೂರಾರು ನಿವೃತ್ತ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ.   ಹಸಿ ಮತ್ತು ಒಣ ತಾಜ್ಯವನ್ನು ಮೂಲದಲ್ಲೇ ಸಂಸ್ಕರಿಸಿ ನೀಡಬೇಕು. ಘನತಾಜ್ಯ ಸಂಗ್ರಹಣೆ, ಸಾಗಾಣಿಕೆ, ಸಂಸ್ಕರಣೆಯನ್ನು ವೈಜ್ಞಾನಿಕವಾಗಿ ವ್ಯವಸ್ಥಿತವಾಗಿ ನೀಡಬೇಕೆಂಬ ಉದ್ದೇಶದಿಂದ ಹೊಸ ಕೋಶ ಸ್ಥಾಪನೆ ಮಾಡುವ ಸಂಬಂಧ ಇದೇ 28 ರಂದು ನಡೆಯಲಿರುವ ಮಾಸಿಕ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ಘನ ತಾಜ್ಯ ನಿರ್ವಹಣೆಯನ್ನು ಆಯಾ ವಾರ್ಡ್ ವ್ಯಾಪ್ತಿಯ ಅಭಿಯಂತರರೇ ನಿರ್ವಹಿಸುತ್ತಿದ್ದರು. ಇದೀಗ ಅವರ ಕಾರ್ಯ ಒತ್ತಡ ಹೆಚ್ಚಾಗಿರುವುದನ್ನು ಅರಿತು ಕೇಂದ್ರ ತಾಂತ್ರಿಕ ಕೋಶ ಸ್ಥಾಪಿಸಲು ನಿರ್ಧರಿಸಲಾಗಿದೆ.  ಅಪರ ಜಂಟಿ ಆಯುಕ್ತರ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಈ ಕೋಶ ರಚನೆಯಾಗಲಿದ್ದು, ಇದರಲ್ಲಿ ಒಬ್ಬ ಮುಖ್ಯ ಅಭಿಯಂತರರು, ಮೂವರು ಕಾರ್ಯಪಾಲಕ ಅಭಿಯಂತರರು, ಮೂವರು ಎಇಆರ್, ಮೂವರು ಪರಿಸರ ಅಭಿಯಂತರರು, ಲೆಕ್ಕ ಅಧೀಕ್ಷಕರು ಒಬ್ಬರು, ಇಬ್ಬರು ಎಫ್‍ಡಿಸಿ, ನಾಲ್ಕು ಎಸ್‍ಡಿಸಿ, ಒಬ್ಬ ಶೀಘ್ರಲಿಪಿಗಾರ, ಆರು ಡಿಗ್ರೂಪ್ ನೌಕರರು ಇರಲಿದ್ದಾರೆ.

ಅದೇ ರೀತಿ ವಲಯ ಮಟ್ಟದಲ್ಲಿ ಎರಡು ಅನುಷ್ಠಾನ ಕೋಶ ಮಾಡಲಾಗುತ್ತದೆ. ಒಂದು ವಾರ್ಡ್ ಮಟ್ಟದ ತ್ಯಾಜ್ಯ ನಿರ್ವಹಣೆ ಕೋಶ ಇರಲಿದೆ. ಇದರಲ್ಲಿ 198 ಕಿರಿಯ ಆರೋಗ್ಯ ಪರಿವೀಕ್ಷಕರು ಇರಲಿದ್ದಾರೆ. 85 ಪರಿಸರ ಅಭಿಯಂತರರು, 8 ಅಧೀಕ್ಷಕ ಅಭಿಯಂತರರು ಇರಲಿದ್ದಾರೆ. ಅದೇ ರೀತಿ ಬೃಹತ್ ಸಗಟು ತ್ಯಾಜ್ಯ ಉತ್ಪಾದಕರ ನಿರ್ವಹಣಾ ಕೋಶ ಸ್ಥಾಪನೆಯಾಗಲಿದೆ. ಇದರಲ್ಲಿ 78 ಅಧಿಕಾರಿಗಳು ಇರುತ್ತಾರೆ. ಪರಿಸರ ಅಭಿಯಂತರರ ಸಂಖ್ಯೆ ಸೇರಿದಂತೆ ಕೊರತೆ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ.

ಅಲ್ಲದೆ ಆರೋಗ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 365 ಸಂಪರ್ಕ ಕಾರ್ಯಕರ್ತರಿದ್ದು, ಇವರನ್ನು ಮನೆ, ಮನೆಗೆ ತೆರಳಿ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಲು ಸೂಚಿಸಲಾಗುತ್ತದೆ. ಇದರ ಜತೆಗೆ 2000ಕ್ಕೂ ಹೆಚ್ಚು ಶುಚಿಮಿತ್ರರ ನೇಮಕ ಮಾಡಲಾಗುತ್ತದೆ. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವ ಉದ್ದೇಶದಿಂದ ನಿವೃತ್ತ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಇವರಿಗೆ ಪ್ರತಿ ತಿಂಗಳು 63 ಲಕ್ಷ ವೇತನ ನೀಡಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಉದ್ದೇಶವಿದ್ದು, ಸರ್ಕಾರದ 604 ಕೋಟಿ ರೂ. ಅನುದಾನದಲ್ಲಿ ಅವಶ್ಯವಿರುವ ವಾಹನ, ಸಾಧನಾ ಸಲಕರಣೆಗಳನ್ನು ಖರೀದಿ ಮಾಡುವುದು ಈ ಯೋಜನೆಯಲ್ಲಿ ಸೇರಿದೆ.

ನಿವೃತ್ತಿ ಹೊಂದಿದ ಅಧಿಕಾರಿಗಳನ್ನು ಮತ್ತೆ ನೇಮಕ ಮಾಡಿಕೊಳ್ಳಬಾರದೆಂಬ ನಿಯಮವಿದ್ದರೂ ಕಾನೂನುಬಾಹಿರವಾಗಿ ಇಂತವರನ್ನು ನೇಮಕ ಮಾಡಿಕೊಳ್ಳಲು ಪಾಲಿಕೆ ನಿರ್ಧರಿಸಿದ್ದು, ಈ ವಿಚಾರ ಮುಂದಿನ ಸಭೆಯಲ್ಲಿ ಪ್ರತಿಪಕ್ಷಗಳ ವಾಕ್‍ಸಮರಕ್ಕೆ ಎಡೆಮಾಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin