ಮುರಿದು ಬಿತ್ತು ಮಾಹಾಘಟ್ಬಂಧನ್ : ನಿತೀಶ್ ರಾಜೀನಾಮೆ, ಬಿಹಾರದಲ್ಲಿ ಹೈಡ್ರಾಮಾ,

ಈ ಸುದ್ದಿಯನ್ನು ಶೇರ್ ಮಾಡಿ

Nitish-Kumar--------01

ಬಿಹಾರ. ಜು.26 : ಬಿಹಾರ ರಾಜಕಾರಣದಲ್ಲಿ ಹೈಡ್ರಾಮಾ ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿಯಾದವ್ ರಾಜೀನಾಮೆ ನೀಡುವುದಿಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.   ಇಂದು ಸಂಜೆ ನಿತೀಶ್ ಕುಮಾರ್ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂದು ಮಾಧ್ಯಮಗಳಿಗೆ ನಿತೀಶ್ ತಿಳಿಸಿದ್ದಾರೆ.

ಕಳೆದ 20 ತಿಂಗಳಿನಿಂದ ಬಿಹಾರದಲ್ಲಿ ಮಹಾಮೈತ್ರಿಯ ಸರ್ಕಾರವಿತ್ತು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಧ್ಯವಾದಷ್ಟೂ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನಾವಳಿಗಳಿಂದ ಮಹಾಮೈತ್ರಿ ಮುಂದುವರೆಸುವ ಸಾಧ್ಯತೆಗಳು ಇರಲಿಲ್ಲ. ಈ ಪರಿಸ್ಥಿತಿಯಲ್ಲಿ ಜನರಿಗೆ ಉತ್ತರಿಸಲು ಸಾಧ್ಯವಿರಲಿಲ್ಲ, ಅಂತರಾತ್ಮದ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ, ಮೈತ್ರಿಕೂಟದ ನಿಯಮ ಉಲ್ಲಂಘಿಸಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ತೇಜಸ್ವಿ ಯಾದವ್ ಅವರು, ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಈ ಬಗ್ಗೆ ಆರ್ ಜೆಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಈ ಹಿಂದೆ ನಿತೀಶ್, ಲಾಲೂ ಅವರಿಗೆ 72 ಗಂಟೆಗಳ ಗಡುವು ನೀಡಿದ್ದರು. ಆದರೆ, ಆ ಗಡುವಿಗೆ ಲಾಲು ಯಾವುದೇ ಸೊಪ್ಪು ಹಾಕಲಿಲ್ಲ. ಇದು ನಿತೀಶ್, ಲಾಲೂ ನಡುವಿನ ವಿರಸ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಜುಲೈ 26ರಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಲಾಲೂ, ತಮ್ಮ ಪುತ್ರ ರಾಜೀನಾಮೆ ಸಲ್ಲಿಸಬೇಕೆಂದು ಯಾರೂ ಹೇಳಿಲ್ಲ ಎನ್ನುವ ಮೂಲಕ, ತಮ್ಮ ಪುತ್ರನ ರಾಜೀನಾಮೆ ಸಾಧ್ಯತೆಯನ್ನು ತಳ್ಳಿಹಾಕಿದ್ದರು.  ಬಿಹಾರದಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿದ್ದು, ನಿತೀಶ್ ಕುಮಾರ್ ಗೆ ಬಿಜೆಪಿ ಬೆಂಬಲ ನೀಡಲಿದ್ದು, ಈ ಕುರಿತಾಗಿ ಚರ್ಚಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಲಾಗಿದೆ.

ಮೋದಿ ಟ್ವೀಟ್ :

ನಿತೀಶ್ ರಾಜೀನಾಮೆ ನಂತರ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿಯವರು, ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ನಮ್ಮ ಜೊತೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು, ಬಿಹಾರದ ಉಜ್ವಲ ಭವಿಷ್ಯಕ್ಕಾಗಿ ರಾಜಕೀಯ ಮತಬೇಧವನ್ನು ಮರೆತು ಭ್ರಷ್ಟಾಚಾರದ ವಿರುದ್ಧ ಒಂದಾಗಿ ಹೋರಾಡಬೇಕಾಗಿರುವುದು ಇಂದು ಅವಶ್ಯಕತೆಯಿದೆ. ನಿತೀಶ್ ನಿರ್ಧಾರವನ್ನೂ ದೇಶದ ಜನ ಸ್ವಾಗತಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Facebook Comments

Sri Raghav

Admin