ಲಿಂಗಾಯಿತ ಪ್ರತ್ಯೇಕ ಧರ್ಮದ ಮನವಿ ಬಂದಿಲ್ಲ : ಸಿಎಂ ಯೂ ಟರ್ನ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಬೆಂಗಳೂರು, ಜು.26- ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಬಗ್ಗೆ ತಮಗೆ ಯಾವುದೇ ಮನವಿ ಬಂದಿಲ್ಲ. ಮನವಿ ಬಾರದೆ ಸ್ವತಂತ್ರಧರ್ಮದ ಶಿಫಾರಸ್ಸನ್ನು ಹೇಗೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿಯವರು ಜಾತಿವಾದಿಗಳು. ಹಾಗಾಗಿ ಅವರು ಜಾತೀಯತೆಯಲ್ಲಿ ತೊಡಗಿದ್ದಾರೆ ಎಂದ ಅವರು, ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಬಗ್ಗೆ ತಮಗೆ ಇದುವರೆಗೂ ಯಾರೂ ಮನವಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲ ಸ್ವತಂತ್ರ ಧರ್ಮವಾಗಬೇಕು ಎಂಬ ಕುರಿತು ಮನವಿ ಕೊಡಲಿ ಆ ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳನ್ನು ಕೆಲವು ಮಠಾಧೀಶರು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ್ದರು. ನಂತರದಲ್ಲಿ ಬಸವರಾಜರಾಯರೆಡ್ಡಿ ಅವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿಸುವ ಕುರಿತಂತೆ ಸಾಮಾಜಿಕ, ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸುವುದೂ ಸೇರಿದಂತೆ ಜನಾಂದೋಲನ ರೀತಿ ಎಲ್ಲರನ್ನು ಒಗ್ಗೂಡಿಸುವ ದಿಸೆಯಲ್ಲೂ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸುವುದಾಗಿ ಹೇಳಿದ್ದರು.

ಈಗಾಗಲೇ ವೀರಶೈವ ಮಹಾಸಭಾ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಅದರಲ್ಲಿ ತಾವೂ ಸೇರಿದಂತೆ ಹಲವರ ಸಹಿ ಇದೆ ಎಂದು ರಾಯರೆಡ್ಡಿ ತಿಳಿಸಿದ್ದರು. ಹಾಗಿದ್ದೂ ಸಹ ಇಂದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು ತಮಗೆ ಮನವಿ ಬಂದಿಲ್ಲ ಎಂದು ಹೇಳಿರುವುದು ಗೊಂದಲ ಮೂಡಿಸಿದೆ.  ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮವಾಗಬೇಕು ಎಂಬ ಬಗ್ಗೆ ಪರ-ವಿರೋಧ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಯುಟರ್ನ್ ಹೊಡೆದಿರುವುದು ಕುತೂಹಲ ಮೂಡಿಸಿದೆ. ಪ್ರತ್ಯೇಕ ಧರ್ಮ ಕುರಿತಂತೆ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವೃತ್ತವಾಗಿದ್ದ ಸರ್ಕಾರ ವ್ಯತಿರಿಕ್ತ ಪರಿಣಾಂ ಬೀರಬಹುದೆಂಬ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ರಾಜ್ಯದಲ್ಲಿ ಸಂಚಲನ ಉಂಟು ಮಾಡಿರುವ ಈ ವಿಚಾರದ ಬಗ್ಗೆ ಲಿಂಗಾಯತ ಸಮಾಜದ ಪ್ರಮುಖ ಮಠಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಬಸವ ಪೀಠದ ಮಾತೆ ಮಹಾದೇವಿ ಮಾತ್ರ ಲಿಂಗಾಯತ ಎನ್ನುವುದು ಧರ್ಮವೇ ಆಗಬೇಕೆಂದು ವಾದಿಸಿದ್ದಾರೆ. ಇದೊಂದು ಜಾತಿಯಲ್ಲ, ಅದೊಂದು ಧರ್ಮ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ನಡೆದಿದೆ. ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳುತ್ತಿದ್ದಾರೆ.

ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ರಾಜ್ಯ ಬಿಜೆಪಿ ಸಂಸದರ ಔತಣ ಕೂಟ ಏರ್ಪಡಿಸಿದ್ದು, ಈ ವೇಳೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಯುವ ಜೊತೆಗೆ ಲಿಂಗಾಯತ ಧರ್ಮ ಘೋಷಣೆಯನ್ನೂ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇತ್ತ ಜೆಡಿಎಸ್‍ನಲ್ಲಿ ಲಿಂಗಾಯತರಿಗೆ ಸ್ವತಂತ್ರ ಧರ್ಮ ಎಂಬ ಪ್ರಸ್ತಾಪಕ್ಕೆ ಭಿನ್ನ ನಿಲುವು ವ್ಯಕ್ತವಾಗಿದೆ.

ಅರ್ಥವಿಲ್ಲ : ಡಿಕೆಶಿ

ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮವಾಗಬೇಕು ಎಂಬುದು ಇಂದು-ನಿನ್ನೆಯ ವಿಷಯವಲ್ಲ. ಬಹಳಷ್ಟು ಹಿಂದಿನಿಂದಲೂ ಈ ವಿಷಯ ಪ್ರಸ್ತಾಪವಾಗಿದೆ. ಪ್ರತ್ಯೇಕ ಧರ್ಮದ ಬೇಡಿಕೆ ಬಗ್ಗೆ ಬಿಜೆಪಿಯವರು ಈಗ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.  ಸುದ್ದಿಗಾರರೊಂದಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಒಂದು ಹಿಂದುಳಿದ ಒಂದು ವರ್ಗವನ್ನು 2ಎಗೆ ಸೇರ್ಪಡೆಗೊಳಿಸಿದ್ದರು. ವೀರಶೈವ ಹಾಗೂ ಲಿಂಗಾಯತ ಎಂದು ಪ್ರತ್ಯೇಕಿಸಿದ್ದದಾರೂ ಏಕೆ ಎಂದು ಪ್ರಶ್ನಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ತಿಳಿದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin