2000 ರೂ. ನೋಟು ಮುದ್ರಣ ಸ್ಥಗಿತ, ಮುಂದಿನ ತಿಂಗಳು 200 ರೂ. ನೋಟು ಮಾರುಕಟ್ಟೆಗೆ

ಈ ಸುದ್ದಿಯನ್ನು ಶೇರ್ ಮಾಡಿ

2000-Notes

ನವದೆಹಲಿ, ಜು.26- ಭಾರತೀಯ ರಿಸರ್ವ್ (ಆರ್‍ಬಿಐ) ಬ್ಯಾಂಕ್ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಪುನಃ ಈ ಮೊತ್ತದ ನೋಟುಗಳ ಮುದ್ರಣವನ್ನು ಮುಂದುವರೆಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಬರುವ ಆಗಸ್ಟ್ ತಿಂಗಳಲ್ಲಿ 200 ರೂ. ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಆರ್‍ಬಿಐ ಅಧಿಕಾರಿಗಳು ತಿಳಿಸಿದ್ದಾರೆ. 200ರೂ. ಮುಖಬೆಲೆಯ ನೋಟುಗಳ ಮುದ್ರಣ ಈಗಾಗಲೇ ಆರಂಭಗೊಂಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ನೋಟುಗಳು ಮುದ್ರಣಗೊಂಡಿವೆ. ಇನ್ನೂ ಕೂಡ ಮುದ್ರಣ ಕಾರ್ಯ ಮುಂದುವರೆದಿದೆ.

ಸುಮಾರು 7.4 ಲಕ್ಷ ಕೋಟಿ ರೂ. ಮೊತ್ತದ 3.7 ಬಿಲಿಯನ್ (ಶತಕೋಟಿ) ಮೌಲ್ಯದ 2 ಸಾವಿರ ರೂ. ನೋಟುಗಳನ್ನು ಮುದ್ರಿಸಿದೆ. ಇದು, ಅಮಾನ್ಯಗೊಂಡಿರುವ 1 ಸಾವಿರ ರೂ. ಮುಖಬೆಲೆಯ 6.3 ಬಿಲಿಯನ್ ನೋಟುಗಳಿಗಿಂತ ಅಧಿಕವಾಗಿದೆ. ಕೇಂದ್ರ ಸರ್ಕಾರ ಕಳೆದ 2016ರ ನವೆಂಬರ್ 8ರಂದು 1 ಸಾವಿರ ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಗ್ರಾಹಕರಿಗೆ ಅನುಕೂಲವಾಗುವಂತೆ, ಮಾರುಕಟ್ಟೆಯಲ್ಲಿ ಸುಲಭವಾಗಿ ಜನರ ಕೈಗೆ ಎಟಕುವಂತೆ ಕರೆನ್ಸಿ ಚಲಾವಣೆ ಮಾಡಲು ನಿರ್ಧರಿಸಿರುವ ಆರ್‍ಬಿಐ, ಈಗಾಗಲೇ 200 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಪ್ರಾರಂಭಿಸಿದ್ದು, ಬಹುತೇಕ ಈ ಹೊಸ ನೋಟುಗಳು ಆಗಸ್ಟ್ ತಿಂಗಳಿನಲ್ಲಿ ಚಲಾವಣೆಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಟು ಅಮಾನೀಕರಣಕ್ಕೆ ಮುಂಚೆ ಚಲಾವಣೆಯಲ್ಲಿದ್ದ ಶೇ. 3.8ರಷ್ಟು ನೋಟುಗಳ ಬದಲಿಗೆ ಪ್ರಸ್ತುತ ಹೊಸ ನೋಟುಗಳ (2000 ರೂ ನೋಟು) ಚಲಾವಣೆ ಅಧಿಕವಾಗಿದ್ದು, ಶೇ. 5.4ರಷ್ಟಿದೆ ಎಂದು ಆರ್‍ಬಿಐ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಇದಕ್ಕೆ ನಿದರ್ಶನವಾಗಿ ದೇಶದ ಸಾವಿರಾರು ಎಟಿಎಂಗಳಲ್ಲಿ ಸುಲಭವಾಗಿ ಹಣ ದೊರೆಯುವುದಲ್ಲದೆ ಚಲಾವಣೆಗಿಂತ ಹೆಚ್ಚಿನ ಹಣ ಎಟಿಎಂಗಳಲ್ಲಿ ಉಳಿದಿದೆ. ಹೊಸ 2 ಸಾವಿರ ರೂ. ನೋಟುಗಳು ಮತ್ತು 500 ರೂ. ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಜನರ ಕೈಗೆ ದೊರೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರ ನವೆಂಬರ್ 8ರಂದು ರಾತ್ರಿ 2 ಸಾವಿರ ಮತ್ತು 500 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಿದ ಹೊಸತರಲ್ಲಿ ಕಂಡು ಬರುತ್ತಿದ್ದ ಹಣ ಚಲಾವಣೆಯ ಅಭಾವ ಈಗ ಇಲ್ಲ. ಜನರ ಬಳಿ ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಾಗುತ್ತಿದೆ. ಮುಂದಿನ ತಿಂಗಳಿನಿಂದ 200 ರೂ ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದರೆ ಯಾವುದೇ ರೀತಿ ನಗದು ವ್ಯವಹಾರದ ಬಿಕ್ಕಟ್ಟು ಇರುವುದಿಲ್ಲ ಎಂದು ಆರ್‍ಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin