ಅಜಾತಶತ್ರುವಾಗಿ ಧರ್ಮಸಿಂಗ್ ಸಿಂಗ್ ನಡೆದು ಬಂದ ದಾರಿ

ಈ ಸುದ್ದಿಯನ್ನು ಶೇರ್ ಮಾಡಿ

Dharma-Sing--0002

ಬೆಂಗಳೂರು, ಜು.27- ತೀವ್ರ ಹೃದಯಾಘಾತದಿಂದ ಇಂದು ನಿಧನರಾದ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಕಾಂಗ್ರೆಸ್‍ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು.  1960ರಲ್ಲಿ ಗುಲ್ಬರ್ಗ ನಗರ ಪಾಲಿಕೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಧರ್ಮಸಿಂಗ್, ಅಲ್ಲಿಂದ 2008ರವರೆಗೆ ಹಿಂದಿರುಗಿ ನೋಡಲೇ ಇಲ್ಲ.  ಆನೆ ನಡೆದದ್ದೇ ದಾರಿ ಎಂಬಂತೆ ಒಂದು ಬಾರಿ ನಾಮಪತ್ರ ಸಲ್ಲಿಸಿದರೆ ಸಾಕು ಕ್ಷೇತ್ರದ ಜನತೆ ಅವರನ್ನು ಹಾರಿಸಿ ಕಳುಹಿಸುತ್ತಿದ್ದರು. ಗುಲ್ಬುರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನೇಲೋಗಿ ಗ್ರಾಮದಲ್ಲಿ 1936 ಡಿಸೆಂಬರ್ 25ರಂದು ಜನಿಸಿದ್ದರು. [ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ ]

ಮಾಜಿ ಪ್ರಧಾನಮಂತ್ರಿ ದಿ.ಇಂದಿರಾಗಾಂಧಿ ಅವರ ನಾಯಕತ್ವಕ್ಕೆ ಆಕರ್ಷಿತರಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ ಧರ್ಮಸಿಂಗ್ ಪುನಃ ಹಿಂದಿರುಗಿ ನೋಡಲಿಲ್ಲ.
1960ರಲ್ಲಿ ಗುಲ್ಬರ್ಗ ನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಆರಂಭಿಸಿದ ಧರ್ಮಸಿಂಗ್ ಮೊದಲಬಾರಿಗೆ 1978ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಹಾರಿಸಿಬಂದರು. ಅಲ್ಲಿಂದ ನಿರಂತರವಾಗಿ ಸತತ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ, 1980 ಹಾಗೂ 2009ರಲ್ಲಿ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ವಿಜೇತರಾಗಿದ್ದರು.

ಪಕ್ಷ ನಿಷ್ಟೆ:

ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿಷ್ಟರಾಗಿದ್ದ ಧರ್ಮಸಿಂಗ್ ಅವರು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಪರಮಾಪ್ತ ಸಿ.ಎಂ.ಸ್ಟೆಫನ್ ಅವರಿಗಾಗಿ ತಮ್ಮ ಸಂಸತ್ ಸ್ಥಾನವನ್ನೇ ತ್ಯಾಗ ಮಾಡಿದ್ದರು.  ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಸಿ.ಎಂ.ಸ್ಟೆಫನ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಇಂದಿರಾಗಾಂಧಿ ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಧರ್ಮಸಿಂಗ್ ಅವರನ್ನು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿದ್ದರು.
ಹಿಂದು-ಮುಂದು ನೋಡದ ಧರ್ಮಸಿಂಗ್ ಮರು ಯೋಚಿಸದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಧಿಕಾರ ತ್ಯಾಗ ಮಾಡಿದ್ದರು. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಮೇಲೆ ಅವರಿಗೆ ನಿಷ್ಟೆ ಇತ್ತು.

ಅತ್ಯುತ್ತಮ ವಾಕ್‍ಪಟು ಎನಿಸಿಕೊಂಡಿದ್ದ ಧರ್ಮಸಿಂಗ್ ಅವರನ್ನು ಮೊದಲ ಬಾರಿಗೆ ಗುರುತಿಸಿದ್ದು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು. ಹೀಗೆ ಹಂತ ಹಂತವಾಗಿ ತಮ್ಮ ರಾಜಕೀಯ ಉತ್ತುಂಗಕ್ಕೆ ಹೋದ ಧರ್ಮಸಿಂಗ್ ಬಳಿಕ ಆರ್.ಗುಂಡೂರಾವ್, ಎಸ್.ಬಂಗಾರಪ್ಪ, ಎಂ.ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ ಅವರಗಳು ಮುಖ್ಯಮಂತ್ರಿಯಾಗಿದ್ದ ವೇಳೆ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಸಮಾಜ ಕಲ್ಯಾಣ, ಅಬಕಾರಿ, ಗೃಹ, ನಗರಾಭಿವೃದ್ಧಿ, ಕಂದಾಯ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1990ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಈ ವೇಳೆ ಧರ್ಮಸಿಂಗ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ ಎಐಸಿಸಿ ಅಧ್ಯಕ್ಷರಾಗಿ ಸೀತಾರಾಂ ಕೇಸರಿ ಇದ್ದರು. ಆದರೆ, ಕೂದಲೆಳೆ ಅಂತರದಲ್ಲಿ ಅವರಿಗೆ ಅದೃಷ್ಟ ಕೈಕೊಟ್ಟಿತ್ತು.

1999ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದಾಗ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಹೆಸರೇ ಧರ್ಮಸಿಂಗ್ ಅವರದ್ದು. ಆದರೆ, ಪಾಂಚಜನ್ಯ ಮೊಳಗಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಕೃಷ್ಣ ಅವರಿಗೆ ಸಹಜವಾಗಿ ಸಿಎಂ ಹುದ್ದೆ ಒಲಿಯಿತು. 2004ರಲ್ಲಿ ವಿಧಾನಸಭೆ ಚುನಾವಣೆ ಜರುಗಿದಾಗ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆ ವೇಳೆ ಮುಖ್ಯಮಂತ್ರಿ ಹುದ್ದೆಗೆ ಹಲವು ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೆಂಬಲ ಧರ್ಮಸಿಂಗ್ ಅವರಿಗೆ ಸಿಕ್ಕಿದ ಪರಿಣಾಮ 2004 ಮೇ 28ರಂದು ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಪಕ್ಷ ನಿಷ್ಠೆ, ಸ್ವಸಾಮರ್ಥ್ಯದಿಂದಲೇ ಮೇಲೇರಿದ ಅಜಾತಶತ್ರು : 

ಬೆಂಗಳೂರು, ಜು.27- ಯಾವುದೇ ಪ್ರಭಾವಿ ಜನಾಂಗದ ಬೆಂಬಲವಿಲ್ಲದೆ ಪಕ್ಷನಿಷ್ಠೆ ಹಾಗೂ ಸತತ ಪರಿಶ್ರಮದಿಂದ ಮುಖ್ಯಮಂತ್ರಿ ಗಾದಿಗೇರಿದವರು ಧರಂಸಿಂಗ್ ಅವರು.  ಪ್ರಸ್ತುತ ಮುಖ್ಯಮಂತ್ರಿ ಹುದ್ದೆಗೇರಲು ಸಮುದಾಯಗಳ ಬೆಂಬಲವಿರಬೇಕು. ಧರಂಸಿಂಗ್ ಅವರು ರಜಪೂತ್ ಸಮುದಾಯದವರು. ಬೆರಳೆಣಿಕೆಯಷ್ಟು ಮಂದಿ ಮಾತ್ರ ನಮ್ಮ ರಾಜ್ಯದಲ್ಲಿದ್ದಾರೆ. ಆದರೆ, ಅಜಾತಶತ್ರುವಾಗಿ ಕಾಂಗ್ರೆಸ್ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಮುಖ್ಯಮಂತ್ರಿ ಹುದ್ದೆಗೇರಿದ್ದು ಹೆಮ್ಮೆಯ ವಿಷಯ.

ಕೆಪಿಸಿಸಿ ಅಧ್ಯಕ್ಷರಾಗಿಯೂ ಕೂಡ ಸಮರ್ಥವಾಗಿ ಧರಂಸಿಂಗ್ ಅವರು ಕಾರ್ಯನಿರ್ವಹಿಸಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾದಾಗ ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಧರಂಸಿಂಗ್ ಅವರು ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್ ಬೆಂಬಲ ನೀಡುವುದಾಗಿ ಹೇಳಿದ್ದರು. ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿತು. ಅಷ್ಟರ ಮಟ್ಟಿನ ಸೌಹಾರ್ದತೆಯನ್ನು ವಿಪಕ್ಷಗಳೊಂದಿಗೆ, ಹೈಕಮಾಂಡ್‍ನೊಂದಿಗೆ ತಮ್ಮ ಅಂತ್ಯಕಾಲದವರೆಗೂ ಧರಂಸಿಂಗ್ ಇಟ್ಟುಕೊಂಡಿದ್ದರು.
ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಇವರು ಸತತ ಏಳು ಬಾರಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. ಒಟ್ಟಾರೆ ಕಾಂಗ್ರೆಸ್‍ನಲ್ಲಿ ಧರಂಸಿಂಗ್ ಅವರು ಅಚ್ಚಳಿಯದೆ ಉಳಿದ ನಾಯಕರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin