ಜೋರಾಗಿದೆ ಬಿಬಿಎಂಪಿ ನೂತನ ಮೇಯರ್ ಆಯ್ಕೆ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಜು.27- ಮೇಯರ್ ಜಿ.ಪದ್ಮಾವತಿಯವರ ಅಧಿಕಾರಾವಧಿ ಸೆಪ್ಟೆಂಬರ್ 10ಕ್ಕೆ ಅಂತ್ಯಗೊಳ್ಳಲಿದ್ದು, ನೂತನ ಮೇಯರ್ ಆಯ್ಕೆ ಕಸರತ್ತು ಈಗಲೇ ಮುಂದುವರಿದಿದೆ.  ಮುಂಬರುವ ಅವಧಿಗೆ ಯಾರೇ ಮೇಯರ್ ಆದರೂ ಚುನಾವಣೆ ವರ್ಷವಾಗಿರುವುದರಿಂದ ಕೇವಲ 9 ತಿಂಗಳ ಆಡಳಿತಾವಧಿ ಮಾತ್ರ ದಕ್ಕುತ್ತದೆ. ಚುನಾವಣೆ ನೀತಿ-ಸಂಹಿತೆ ಮೂರು ತಿಂಗಳು ಜಾರಿಯಾಗುವುದರಿಂದ ಈ ಅವಧಿಯಲ್ಲಿ ಮುಂಬರುವ ಮೇಯರ್ ಅವರು ಅಧಿಕಾರ ರಹಿತರಾಗುತ್ತಾರೆ. ಹಾಗಾಗಿ ಮೇಯರ್ ಆಯ್ಕೆ ವಿಚಿತ್ರ ತಿರುವು ಪಡೆದುಕೊಂಡಿದೆ.

ಜೆಡಿಎಸ್, ಪಕ್ಷೇತರರ ಮೈತ್ರಿಯೊಂದಿಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಆಡಳಿತಾರೂಢ ಕಾಂಗ್ರೆಸ್ ಮೇಲೆ ಜೆಡಿಎಸ್‍ಗೆ ಕೋಪವಿದೆ. ಬಿಜೆಪಿ ಜತೆ ಮೈತ್ರಿಗೆ ಜೆಡಿಎಸ್ ಮುಂದಾದರೂ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮೈತ್ರಿ ಒಲವು ಹೊಂದಿಲ್ಲ. ಬಿಜೆಪಿ ಬಿಬಿಎಂಪಿ ಅಧಿಕಾರಕ್ಕಿಂತ ಮಿಷನ್-150ರತ್ತ ಚಿತ್ತ ಹರಿಸಿದೆ.

ಜೆಡಿಎಸ್ ಏನಾದರೂ ಕೈಕೊಟ್ಟರೆ ಎಂಬ ಆತಂಕದಲ್ಲಿರುವ ಕೈ ನಾಯಕರು ಬಿಬಿಎಂಪಿ ಗದ್ದುಗೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಶತಾಯ-ಗತಾಯ ಪ್ರಯತ್ನ ಮುಂದುವರಿಸಿದ್ದು, ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ಲಾಬಿ ನಡೆಸುತ್ತಿರುವುದಲ್ಲದೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಮನೆಗೂ ಎಡತಾಕುತ್ತಿದ್ದಾರೆ.

ಬಿಬಿಎಂಪಿ ಸದಸ್ಯರಾದ ಸಂಪತ್‍ರಾಜ್, ಗೋವಿಂದರಾಜ್ ಅವರ ಹೆಸರುಗಳು ಪ್ರಬಲವಾಗಿ ಮೇಯರ್ ಹುದ್ದೆಗೆ ಕೇಳಿಬಂದಿದ್ದವು. ಪ್ರಸ್ತುತ ಈಜಿಪುರದ ರಾಮಚಂದ್ರ ಅವರು ಕೂಡ ಪ್ರಬಲ ಮೇಯರ್ ಆಕಾಂಕ್ಷಿಯಾಗಿದ್ದು, ಪಟ್ಟ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗಿಂತ ಜೆಡಿಎಸ್ ನಾಯಕರ ಮನವೊಲಿಸುವ ಪ್ರಯತ್ನವನ್ನು ಹೆಚ್ಚಾಗಿ ನಡೆಸುತ್ತಿದ್ದಾರೆ. ಯಾರೇ ಮೇಯರ್ ಆದರೂ ಅವರ ಅಧಿಕಾರಾವಧಿ ಕೇವಲ 9 ತಿಂಗಳು ಮಾತ್ರ ಇರುತ್ತದೆ. ಚುನಾವಣೆ ಏಪ್ರಿಲ್‍ನಲ್ಲಿ ನಡೆಯಲಿ ಅಥವಾ ಅವಧಿ ಪೂರ್ವವಾಗಿಯೇ ನಡೆದರೂ ಮುಂಬರುವ ಮೇಯರ್ ನೀತಿ-ಸಂಹಿತೆ ಜಾರಿಯಡಿಯಲ್ಲಿ ಮೂರು ತಿಂಗಳ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ.

ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕಾಲಿಗೆ ಚಕ್ರ ಕಟ್ಟಿಕೊಂಡು ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಡಿಸೆಂಬರ್‍ನೊಳಗೆ, ಮತ್ತೆ ಕೆಲವು ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕೆಂಬ ಗಡುವನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಮುಂಬರುವ ಮೇಯರ್, ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸು, ಪಕ್ಷದ ವರ್ಚಸ್ಸನ್ನು ಹೆಚ್ಚಿಸಬೇಕು. ಜತೆಜತೆಗೆ ಪಕ್ಷವನ್ನೂ ಸಂಘಟಿಸಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಜತೆಗೆ ಮೈತ್ರಿ ಧರ್ಮವನ್ನೂ ಪಾಲಿಸಬೇಕು. ಈ ನಿಟ್ಟಿನಲ್ಲಿ ಇಷ್ಟೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಅನುಭವವಿರುವವರು ಮೇಯರ್ ಆಗಬೇಕಾಗಿದೆ.  ಈ ನಿಟ್ಟಿನಲ್ಲಿ ಸಂಪತ್‍ರಾಜ್, ಗೋವಿಂದರಾಜ್, ರಾಮಚಂದ್ರ ಅವರು ತಮ್ಮ ಪ್ರಯತ್ನ ನಡೆಸಿದ್ದಾರೆ. ಚುನಾವಣೆ ವರ್ಷವಾಗಿರುವುದರಿಂದ ಮೇಯರ್ ಹುದ್ದೆಯಲ್ಲಿ ಕುಳಿತು ಅಷ್ಟು ಸುಲಭವಾಗಿ ಅಧಿಕಾರ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮುಳ್ಳಿನ ಮೇಲಿನ ನಡಿಗೆಯಾಗುತ್ತದೆ. ಸೆಪ್ಟೆಂಬರ್ 10ರೊಳಗೆ ಏನಾಗುತ್ತದೆಯೋ ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin