ಟಿಎ-ಡಿಎ ದುರ್ಬಳಕೆ : 8 ಮೇಲ್ಮನೆ ಸದಸ್ಯರ ವಿಳಾಸ ಪತ್ತೆ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

8-Members--01

ಬೆಂಗಳೂರು, ಜು.27-ಟಿಎ, ಡಿಎ ದುರ್ಬಳಕೆ ಆರೋಪಕ್ಕೆ ಗುರಿಯಾಗಿರುವ ಎಂಟು ವಿಧಾನಪರಿಷತ್ ಸದಸ್ಯರ ಮನೆ, ವಿಳಾಸ ಪತ್ತೆ ಕಾರ್ಯವನ್ನು ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್‍ನ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ, ರಘುಆಚಾರ್, ಬೋಸರಾಜ್, ಎಂ.ಡಿ.ಲಕ್ಷ್ಮೀನಾರಾಯಣ, ರವಿ ಹಾಗೂ ಜೆಡಿಎಸ್‍ನ ಅಪ್ಪಾಜಿಗೌಡ, ಮನೋಹರ್ ಅವರು ಕಳೆದ ಎರಡು ಬಾರಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬೆಂಗಳೂರಿನ ನಿವಾಸಿಗಳೆಂದು ಗುರುತಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.

ಮತದಾನ ಮುಗಿದ ನಂತರ ತಮ್ಮ ಸ್ವಂತ ಗ್ರಾಮಗಳಿಂದ ವಿಧಾನಪರಿಷತ್ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿ 35 ಲಕ್ಷಕ್ಕೂ. ಹೆಚ್ಚು ಪ್ರಯಾಣ ಭತ್ಯೆಯನ್ನು ಪಡೆದುಕೊಂಡಿದ್ದರು. ಈ ಎಂಟು ಸದಸ್ಯರ ವರ್ತನೆ ವಿರುದ್ಧ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ದೂರು ನೀಡಿ ತಪ್ಪು ಮಾಹಿತಿ ನೀಡಿರುವ ಈ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸುವಂತೆ ಮನವಿ ಮಾಡಿಕೊಂಡಿದ್ದರು.

ಹಾಗಾಗಿ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಎಂಟು ಸದಸ್ಯರ ವಿಳಾಸ ಮತ್ತಿತರ ವಿವರ ರವಾನಿಸುವಂತೆ ಸೂಚಿಸಿತ್ತು. ಮುಖ್ಯ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಆಯಾ ವಿಭಾಗದ ಎಆರ್‍ಒಗಳಿಗೆ ಆದೇಶ ನೀಡಿ ಈ ಎಂಟು ಸದಸ್ಯರ ವಿವರ ಸಂಗ್ರಹಿಸಿ ನೀಡುವಂತೆ ತಿಳಿಸಿದ್ದರು.

ಈ ಆದೇಶದ ಮೇರೆಗೆ ಎಂಟು ಸದಸ್ಯರ ವಿಳಾಸ ಸಂಗ್ರಹಕ್ಕೆ ಸಹಾಯಕ ಕಂದಾಯ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಇಂದು ಘಾಳಿ ಆಂಜನೇಯ ದೇವಸ್ಥಾನದ ಸಮೀಪ ಇರುವ ಜೆಡಿಎಸ್ ಮೇಲ್ಮನೆ ಸದಸ್ಯ ಅಪ್ಪಾಜಿಗೌಡ ಅವರ ಮನೆಗೆ ತೆರಳಿದ ಕಂದಾಯ ಅಧಿಕಾರಿಗಳು ಪರಿಶೀಲಿಸಿ ವಿವರ ಪಡೆದುಕೊಂಡಿದ್ದಾರೆ. ಅದೇ ರೀತಿ ಉಳಿದ ಏಳು ಸದಸ್ಯರ ವಿವರ ಸಂಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮಾಹಿತಿ ನೀಡಲಿದ್ದಾರೆ.

ಸೆಪ್ಟೆಂಬರ್‍ನಲ್ಲಿ ಮುಂದಿನ ಮೇಯರ್ ಆಯ್ಕೆಗೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಂಟು ಸದಸ್ಯರ ಮನೆ, ವಿಳಾಸ ಪತ್ತೆ ಕಾರ್ಯ ನಡೆಸುತ್ತಿರುವುದರಿಂದ ಈ ಬಾರಿಯೂ ಮೇಯರ್ ಚುನಾವಣೆಯಲ್ಲಿ ಈ ಸದಸ್ಯರು ಮತದಾನ ಮಾಡುತ್ತಾರೋ ಅಥವಾ ಮತದಾನದಿಂದ ಹೊರಗುಳಿಯಲಿದ್ದಾರೋ ಎಂಬುದು ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin