ಮುಗುಳುನಗೆ ಬೀರಲು ಗಣೇಶ್ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

Mugulunage-01

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷೆಯ ಚಿತ್ರ ಮುಗುಳುನಗೆ ಭಾರೀ ಸದ್ದು ಮಾಡುತ್ತಿದೆ. ಗೋಲ್ಡನ್‍ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯಲ್ಲಿ ಬರುತ್ತಿರುವ ಈ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಮುಂಗಾರು ಮಳೆ, ಗಾಳಿಪಟ ಚಿತ್ರವಾದ ಮೇಲೆ 9 ವರ್ಷಗಳ ಗ್ಯಾಪ್ ನಂತರ ಈ ಜೋಡಿ ಮತ್ತೆ ಒಂದಾಗಿ ಮುಗುಳು ನಗೆ ಬೀರುತ್ತಿದ್ದಾರೆ.  ನಾಯಕ ಗಣೇಶ್ ಈ ಚಿತ್ರದಲ್ಲಿ ವಿಭಿನ್ನವಾದಂಥ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಮೂಲ್ಯ ಹಾಗೂ ಅಪೂರ್ವ ಸೇರಿ ನಾಲ್ವರು ನಾಯಕಿಯರು ಈ ಚಿತ್ರದಲ್ಲಿ ಗಣೇಶ್ ಜೊತೆ ಹೆಜ್ಜೆ ಹಾಕಿದ್ದಾರೆ.

ಪ್ರತಿಯೊಬ್ಬರೂ ಒಂದೊಂದು ಟ್ರ್ಯಾಕ್‍ನಲ್ಲಿ ಬಂದು ಹೋಗುತ್ತಾರೆ. ಈ ಚಿತ್ರವನ್ನು ಮೊದಲು ಹೈದರಾಬಾದ್ ಮೂಲದ ನಿರ್ಮಾಪಕರೊಬ್ಬರು ಆರಂಭಿಸಿದ್ದರು. ನಂತರದಲ್ಲಿ ಅದು ಜÁಕ್ ಮಂಜು, ಸೈಯದ್ ಸಲಾಂ ಕೈ ಸೇರಿತು. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಒಂದೊಂದು ಹಾಡನ್ನೂ ಬೇರೆಬೇರೆ ಕಡೆ ಬಿಡುಗಡೆಗೊಳಿಸುವ ವಿನೂತನ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಅದರಂತೆ ಈಗಾಗಲೇ ಮೈಸೂರು, ಹುಬ್ಬಳ್ಳಿ ನಗರಗಳಲ್ಲಿ 2 ಹಾಡನ್ನು ರಿಲೀಸ್ ಮಾಡಲಾಗಿದೆ. ಮೂರನೇ ಹಾಡನ್ನು ಶಿಲ್ಪಾ ಗಣೇಶ್‍ರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗಿತ್ತು. ಈಗ ನಾಲ್ಕನೇ ಹಾಡನ್ನು ಬೆಂಗಳೂರಿನ ಕೋರಮಂಗಲದ ಜ್ಯೋತಿನಿವಾಸ್ ಮಹಿಳಾ ಕಾಲೇಜಿನಲ್ಲಿ ಅನಾವರಣಗೊಳಿಸಲಾಯಿತು. ಕಾಲೇಜಿನ ಸುಂದರ ಕನ್ಯೆಯರ ನಡುವೆ ಮುಗುಳುನಗೆ ಚಿತ್ರತಂಡ ಈ ಹಾಡನ್ನು ಹೊರತಂದಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಚಾರಿಟಿ ಸಾಂಸ್ಕøತಿಕ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು. ಹೀಗೆ ಒಂದೊಂದು ಹಾಡನ್ನು ಒಂದೊಂದು ಜಾಗದಲ್ಲಿ ಬಿಡುಗಡೆ ಮಾಡುವ ಮೂಲಕ ಭಾರೀ ಸದ್ದನ್ನೇ ಮಾಡುತ್ತಿದೆ.

ಚಿತ್ರದ ನಿರ್ಮಾಪಕ ಸೈಯದ್ ಸಲಾಂ, ನಿರ್ದೇಶಕ ಯೋಗರಾಜ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಾಯಕನಟ ಗಣೇಶ್, ನಾಯಕಿ ಆಶಿಕಾ ರಂಗನಾಥ್, ಹಿರಿಯ ನಟಿ ಶೃತಿ ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದರು. ನಿರ್ದೇಶಕ ಯೋಗರಾಜ ಭಟ್ ಮಾತನಾಡುತ್ತ ಈಗಾಗಲೇ ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ 2 ಹಾಡುಗಳನ್ನು ರಿಲೀಸ್ ಮಾಡಿದ್ದೇವೆ. ನಾವು ಹೋದ ಕಡೆಯಲ್ಲೆಲ್ಲ ಜನರು ಚಿತ್ರ ಯಾವಾಗ ರಿಲೀಸ್ ಅಂತ ಕೇಳುತ್ತಿದ್ದಾರೆ ಎಂದು ಹೇಳಿದರು.

ನಂತರ ಗಣೇಶ್ ಮಾತನಾಡಿ, ನಾನು ಈ ಕಾಲೇಜಿಗೆ ಬರಲು ಅವಕಾಶವಾಗಿರಲಿಲ್ಲ. ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದಿವೆ. ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದೇ ರೀತಿ ಎಲ್ಲರೂ ಪ್ರೋತ್ಸಾಹಿಸಿ ಎಂದು ಹೇಳಿದರು. ನಾಯಕಿ ಆಶಿಕಾ ಮಾತನಾಡಿ, ನಾನು ಇದೇ ಕಾಲೇಜಿನಲ್ಲಿ ಓದಿದ್ದೆ, ಈಗ ನನ್ನ ಸಿನಿಮಾದ ಹಾಡು ಇಲ್ಲೇ ಬಿಡುಗಡೆಯಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು. ನಂತರ ನಟಿ ಶೃತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದಷ್ಟು ಹಿತವಚನಗಳನ್ನು ಹೇಳಿದರು. ಇಡೀ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಮುಗುಳು ನಗೆ ಚಿತ್ರದ ಕಂಟೆಂಟ್ ಬಗ್ಗೆ ಹೇಳುವುದಾದರೆ ಹುಟ್ಟಿದಾಗಿನಿಂದಲೂ ಎಂದೂ ಅಳದ ಹುಡುಗನೊಬ್ಬನಿಗೆ ಒದಗುವ ಸಂದರ್ಭವೊಂದರಲ್ಲಿ ಒಂದು ಹನಿ ಆನಂದಭಾಷ್ಪ ಬೀಳುವಂತಾಗುತ್ತದೆ. ಸಂದರ್ಭ ಏನೆಂದು ಹೇಳುವುದೇ ಮುಗುಳುನಗೆ ಚಿತ್ರದ ಟರ್ನಿಂಗ್ ಪಾಯಿಂಟ್.

ನಿರ್ದೇಶಕ ಯೋಗರಾಜ್ ಭಟ್ಟರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರಚಿಸಿದ್ದಾರೆ. ನಟ ಜಗ್ಗೇಶ್ ಹಾಗೂ ಅನಂತ್‍ನಾಗ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್‍ಕುಮಾರ್ ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಪುಲ್ಕೇಶಿ ಎಂಬ ಸದಾ ಹಸನ್ಮುಖಿ ಯುವಕನ ಪಾತ್ರದಲ್ಲಿ ಗೋಲ್ಡನ್‍ಸ್ಟಾರ್ ಗಣೇಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದು, ಎಲ್ಲಾ ಹಾಡುಗಳು ಸಂದರ್ಭಕ್ಕನುಸಾರವಾಗಿ ಮೂಡಿಬಂದಿವೆ.
ಇಡೀ ಚಿತ್ರವನ್ನು ಸುಜ್ಞಾನ್‍ಮೂರ್ತಿ  ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಮುಂದಿನ ತಿಂಗಳು ಮುಗುಳುನಗೆ ಬೆಳ್ಳಿ ಪರದೆ ಮೇಲೆ ಬೀರಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin