ಶಾಸಕರ ಭವನ ಎದುರು ದೇಶದಲ್ಲೇ ಅತಿ ಎತ್ತರದ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

Vamiki

ಬೆಂಗಳೂರು, ಜು.27-ದೇಶದಲ್ಲೇ ಅತಿ ಎತ್ತರದ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಶಾಸಕರ ಭವನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕರ ಭವನ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಸುಮಾರು 12 ಅಡಿ ಎತ್ತರದ ಪ್ರತಿಮೆಯನ್ನು ಇಂದು ಪ್ರತಿಷ್ಠಾಪಿಸಲಾಯಿತು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಕಳೆದ ಒಂದು ವರ್ಷದಿಂದ ಶಿಲ್ಪಿಗಳಾದ ಜಗನ್ನಾಥ್, ಅಶೋಕ್‍ಗುರಿಕಾರ್ ಅವರು ಕಪ್ಪು ಶಿಲೆಯಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿದ್ದರು.

ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ನೇತೃತ್ವದಲ್ಲಿ ಈ ಪ್ರತಿಮೆಯನ್ನು ಇಂದು ಪುರಪ್ರವೇಶ ಮಾಡಿಕೊಳ್ಳಲಾಗಿದ್ದು, ನಂತರ ವಾಲ್ಮೀಕಿ ತಪೋವನದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಗ್ರಪ್ಪ, ಪ್ರತಿಮೆ ನಿರ್ಮಾಣಕ್ಕೆ ಸುಮಾರು 50ಲಕ್ಷ ವೆಚ್ಚವಾಗಿದ್ದು, ಇದನ್ನು ಸಮುದಾಯದಿಂದಲೇ ಭರಿಸಲಾಗಿದೆ. ಮಹರ್ಷಿ ವಾಲ್ಮೀಕಿ ತಪೋವನ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕೋಟಿ ರೂ. ಅನುದಾನ ನೀಡಿದ್ದಾರೆ. ಜತೆಗೆ ಪ್ರತಿಷ್ಠಾಪನೆಗೆ ಜಾಗವನ್ನೂ ಮಂಜೂರು ಮಾಡಿದ್ದಾರೆ ಎಂದರು.

ಪ್ರತಿಮೆ 25ಟನ್ ತೂಕವಿದ್ದು, ಪೀಠವನ್ನು ಒಳಗೊಂಡಂತೆ 20 ಅಡಿ ಎತ್ತರವಿದೆ. ಭೂ ಮಟ್ಟದಿಂದ ಪ್ರತಿಮೆ ಒಟ್ಟು 30 ಅಡಿ ಎತ್ತರವಿರಲಿದೆ. ದೇಶದಲ್ಲೇ ಇದು ಅತ್ಯಂತ ದೊಡ್ಡ ಪ್ರತಿಮೆ ಎಂದು ಉಗ್ರಪ್ಪ ಹೇಳಿದರು. ರಾಮರಾಜ್ಯದ ಕನಸನ್ನು ರಾಮಾಯಣದ ಮೂಲಕ ವಿಶ್ವಕ್ಕೆ ಕೊಟ್ಟವರು ಮಹರ್ಷಿ ವಾಲ್ಮೀಕಿ. ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದರು. ಪ್ರತಿಮೆ ಪ್ರತಿಷ್ಠಾಪನೆ ವೇಳೆ ಸಚಿವ ರಮೇಶ್‍ಚಂದ್ರ ಜಾರಕಿಹೊಳಿ, ತುಕಾರಾಂ, ಪ್ರತಾಪ್‍ಗೌಡ ಪಾಟೀಲ್ ಸೇರಿದಂತೆ 6 ಮಂದಿ ಶಾಸಕರು ಹಾಜರಿದ್ದರು. ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಸಿಡ್ಲುಕೋಣ ಗುರುಪೀಠದ ಸಂಜಯ್‍ಕುಮಾರ್ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ಕಾರ್ಯ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin