6ನೇ ಬಾರಿಗೆ ಬಿಹಾರದ ಸಿಎಂಆಗಿ ನಿತೀಶ್ ಪ್ರಮಾಣ, ಸುಶೀಲ್ ಮೋದಿ ಡಿಸಿಎಂ

Nirish-Kumar--01

ಪಾಟ್ನಾ, ಜು.27- ಒಂದೇ ದಿನದಲ್ಲಿ ಭಾರೀ ನಾಟಕೀಯ ಬೆಳವಣಿಗೆಗೆ ಕಾರಣವಾದ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಇಂದು ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.  ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 6ನೇ ಬಾರಿಗೆ ನಿತೀಶ್‍ಕುಮಾರ್ ಹಾಗೂ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ಅಧಿಕಾರ ಸ್ವೀಕರಿಸುವುದರೊಂದಿಗೆ ಬಿಹಾರದಲ್ಲಿ ಹೊಸ ರಾಜಕೀಯ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.

ನೂತನ ಸಿಎಂ ಹಾಗೂ ಡಿಸಿಎಂಗೆ ರಾಜ್ಯಪಾಲ ಕೇಸರಿನಾಥ್‍ತ್ರಿಪಾಠಿ ಅಧಿಕಾರ ಗೌಪ್ಯತೆ ಬೋಧಿಸಿದರು. ಸದ್ಯಕ್ಕೆ ಸಂಪುಟಕ್ಕೆ ಯಾವುದೇ ಸಚಿವರನ್ನು ತೆಗೆದುಕೊಂಡಿಲ್ಲ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಂತರ ನಿತೀಶ್‍ಕುಮಾರ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನಿತೀಶ್‍ಕುಮಾರ್‍ಗೆ ಎನ್‍ಡಿಎ ಮೈತ್ರಿಕೂಟದ ಅಂಗ ಪಕ್ಷಗಳು ಬೆಂಬಲ ನೀಡಿರುವುದರಿಂದ ಸರಳ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ ಹೊಂದಿಸುವಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ.

ಕಳೆದ ಮಧ್ಯರಾತ್ರಿಯಿಂದ ನಡೆದ ಹಲವು ನಾಟಕೀಯ ಬೆಳವಣಿಗೆಗಳ ನಡುವೆ ರಾಜ್ಯಪಾಲರು ಬೆಳಗ್ಗೆ 10 ಗಂಟೆಗೆ ಸರ್ಕಾರ ರಚಿಸಲು ಉಭಯ ಪಕ್ಷಣ ಮುಖಂಡರನ್ನು ಆಹ್ವಾನಿಸಿದ್ದರು.  ನಮ್ಮ ಪಕ್ಷ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿದ್ದರಿಂದ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಆರ್‍ಜೆಡಿ ಮುಖಂಡ ಹಾಗೂ ಮಾಜಿ ಡಿಸಿಎಂ ತೇಜಸ್ವಿಯಾದವ್ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದರು. ನಮ್ಮ ಪಕ್ಷ ಅತಿದೊಡ್ಡ ಪಕ್ಷವಾಗಿದೆ. ನಿಯಮದಂತೆ ಯಾವುದೇ ಪಕ್ಷವನ್ನು ಸರ್ಕಾರ ರಚಿಸಬೇಕಾದರೆ ದೊಡ್ಡ ಪಕ್ಷವನ್ನೇ ಆಹ್ವಾನಿಸುವುದು ಈವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಒಂದು ವೇಳೆ ರಾಜ್ಯಪಾಲರು ಆಹ್ವಾನಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಲ್ಲದೆ, ನ್ಯಾಯಾಲಯದಲ್ಲೂ ಪ್ರಶ್ನಿಸುವುದಾಗಿ ತೇಜಸ್ವಿ ಎಚ್ಚರಿಸಿದ್ದರು. ಆದರೆ, ಯಾವುದಕ್ಕೂ ಸೊಪ್ಪು ಹಾಕದ ರಾಜ್ಯಪಾಲರು ಶಾಸಕರ ಬೆಂಬಲ ಪತ್ರದ ಆಧಾರದ ಮೇಲೆ ನಿತೀಶ್‍ಗೆ ಸರ್ಕಾರ ರಚಿಸಲು ಅವಕಾಶ ನೀಡಿದರು.
ಇದರಿಂದ ಬಿಹಾರದಲ್ಲಿ ಮತ್ತೆ ನಿತೀಶ್-ಮೋದಿ ಆಡಳಿತ ಆರಂಭಗೊಂಡಿದ್ದು, ಲಾಲೂ ಪ್ರಸಾದ್‍ಯಾದವ್ ದರ್ಬಾರ್ ಸದ್ಯಕ್ಕೆ ಅಂತ್ಯಗೊಂಡಿದೆ.
ಈ ಮೊದಲು ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿಯಾಗಿತ್ತು. ತಡರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ವೇಳೆ ಬದಲಿಸಲು ತೀರ್ಮಾನಿಸಲಾಯಿತು. ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲು ಆರ್‍ಜೆಡಿಗೆ ಅವಕಾಶ ದೊರೆಯಂತೆ ಕೊನೆ ಕ್ಷಣದ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಬಂದ ನಂತರ ನಿತೀಶ್ ಅವರ ಅಧಿಕೃತ ನಿವಾಸದಲ್ಲಿ ಜೆಡಿಯು ಮತ್ತು ಬಿಜೆಪಿ ಶಾಸಕರು ಸಭೈ ನಡೆಸಿದರು. ನಿತೀಶ್ ಅವರನ್ನು ಬಿಜೆಪಿ ನೇತೃತ್ವದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಇದೇ ವೇಳೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಜೆಡಿಯುಗೆ ಬೇಷರತ್ ಬೆಂಬಲ ಘೋಷಿಸಿದರು.  ಬಳಿಕ ನಿತೀಸ್ ಮತ್ತು ಮೋದಿ ರಾಜಭವನಕ್ಕೆ ತೆರಳಿ ತಮಗೆ 132 ಶಾಸಕರ ಬೆಂಬಲ ಇದ್ದು, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಈಗ ನೂತನ ಮೈತ್ರಿಕೂಟದಲ್ಲಿ 132 ಸದಸ್ಯರಿದ್ದಾರೆ. ಜೆಡಿಯು-71, ಬಿಜೆಪಿ-53, ಆರ್‍ಎಲ್‍ಎಸ್‍ಪಿ-2, ಎಲ್‍ಜೆಪಿ-2, ಎಚ್‍ಎಎಂ-1 ಮತ್ತು ಮೂವರು ಪಕ್ಷೇತರ ಶಾಸಕರನ್ನು ಇದು ಒಳಗೊಂಡಿದೆ. ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಅಗತ್ಯವಿದ್ದು, ಹೊಸ ದೋಸ್ತಿಯಲ್ಲಿ ಅಗತ್ಯಕ್ಕಿಂತ 10 ಹೆಚ್ಚು ಶಾಸಕರನ್ನು ಹೊಂದಿದೆ.  ಮಹಾಮೈತ್ರಿ ಮುರಿದು ಬಿದ್ದು ಸಂಕಷ್ಟದಲ್ಲಿರುವ ಆರ್‍ಜೆಡಿ 81 ಶಾಸಕರನ್ನು ಹೊಂದಿದೆ. ಕಾಂಗ್ರಸ್‍ನ 27 ಶಾಸಕರು ಮತ್ತು ಸಿಪಿಐ-ಎಂಎಲ್‍ನ ಮೂವರು ತೇಜಸ್ವಿಗೆ ಬೆಂಬಲ ಘೋಷಿಸಿದ್ದಾರೆ. ಇವರೆಲ್ಲರೂ ಸೇರಿ 110 ಸದಸ್ಯ ಬಲ ಹೊಂದಿರುತ್ತಾರೆ.
ತೇಜಸ್ವಿ ಸೇರಿದಂತೆ ಲಾಲೂ ಕುಟುಂಬದ ವ್ಯಾಪಕ ಭ್ರಷ್ಟಾಚಾರ ಆರೋಪಗಳಿಂದಾಗಿ ಬೇಸತ್ತಿದ್ದ ನಿತೀಶ್ ಕುಮಾರ್ ಅಚ್ಚರಿ ವಿದ್ಯಮಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.

ಬಿಹಾರದಲ್ಲಿ ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಮಹಾಘಟ್‍ಬಂಧನ್ ಮೈತ್ರಿ ಮುರಿದು ಬಿದ್ದಿದ್ದು, ಎನ್‍ಡಿಎ ಮಿತ್ರ ಕೂಟದ ಸರ್ಕಾರ ರಚನೆಯಾಗಲಿದೆ.  ಈ ಮಧ್ಯೆ ಸರ್ಕಾರ ರಚಿಸಲು ಆರ್‍ಜೆಡಿ ಕೂಡ ಮುಂದಾಗಿದ್ದು, ರಾಜ್ಯಪಾಲರಲ್ಲಿ ಸಮಯ ಕೋರಿದೆ. ನಮ್ಮದು ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷ. ಹೀಗಾಗಿ ಸರ್ಕಾರ ರಚನೆಗೆ ನಮ್ಮನ್ನೇ ಆಹ್ವಾನಿಸಬೇಕೆಂದು ಮಹಾಮೈತ್ರಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಾಲೂ ಅವರ ಪುತ್ರ ತೇಜಸ್ವಿ ಪ್ರಸಾದ್ ಯಾದವ್ ಹೇಳಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin