ಇಂದಿನಿಂದ 3 ತಿಂಗಳ ಕಾಲ ಪ್ರೊ ಕಬ್ಬಡಿ ಖದರ್

ಈ ಸುದ್ದಿಯನ್ನು ಶೇರ್ ಮಾಡಿ

Pro-Kabaddi--01

ಹೈದ್ರಾಬಾದ್, ಜು. 28- ಕಳೆದ ಎರಡು ತಿಂಗಳಿನಿಂದ ಚಾಂಪಿಯನ್ಸ್ ಟ್ರೋಫಿ, ಮಹಿಳಾ ವಿಶ್ವಕಪ್‍ನ ಗುಂಗಿನಲ್ಲಿದ್ದ ಕ್ರೀಡಾ ಪ್ರೇಮಿಗಳ ಎದೆಯಲ್ಲಿ ಇಂದಿನಿಂದ 3 ತಿಂಗಳ ಕಾಲ ಕಬ್ಬಡಿ ಖದರ್ ಮನೆ ಮಾಡಲಿದೆ.  ಇಂದು ಹೈದ್ರಾಬಾದ್‍ನ ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ 5ನೆ ಆವೃತ್ತಿಯ ಪ್ರೊ ಕಬ್ಬಡಿಯ ಮೊದಲ ಪಂದ್ಯದಲ್ಲೇ ರಾಹುಲ್ ಚೌದರಿ ನಾಯಕತ್ವದ ತೆಲುಗು ಟೈಟಾನ್ ಹಾಗೂ ತಮಿಳು ತಲೈವಾಸ್ ತಂಡಗಳು ಕ್ರೇಜ್ ಮೂಡಿಸಿದರೆ, ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಅನುಪ್‍ಕುಮಾರ್ ಸಾರಥ್ಯದ ಯು ಮುಂಬಾ ಹಾಗೂ ಪುಣೇರಿ ಪಲ್ಟನ್ಸ್ ತಂಡಗಳ ನಡುವಿನ ಪಂದ್ಯವು ಜಿದ್ದಾಜಿದ್ದಿನಿಂದ ಕುತೂಹಲ ಕೆರಳಿಸಿದೆ.

ಕಳೆದ 4 ಆವೃತ್ತಿಗಳಂತೆ ಈ ಬಾರಿಯ ಟೂರ್ನಿಯನ್ನು ನಡೆಸದೆ ಗುಂಪು ಹಂತಗಳಲ್ಲಿ ನಡೆಯಲಿದ್ದು ಒಟ್ಟು 12 ತಂಡಗಳು ಸೆಣಸಲಿದ್ದು ಫೈನಲ್ ಸೇರಿದಂತೆ ಒಟ್ಟು 138 ಪಂದ್ಯಗಳು ಜರುಗಲಿವೆ. ಕಳೆದ 2 ಆವೃತ್ತಿಯಲ್ಲೂ ಚಾಂಪಿಯನ್ಸ್ ಆಗಿರುವ ಪಟ್ನಾ ಪೈರೇಟ್ಸ್ ತಂಡವು ಹ್ಯಾಟ್ರಿಕ್ ಸಾಧನೆ ಮಾಡಲು ಹಾತೊರೆಯುತ್ತಿದೆ.

ಕ್ರೇಜ್ ಹುಟ್ಟಿಸಿರುವ ಸ್ಟಾರ್ ಆಟಗಾರರು:

ಐಪಿಎಲ್ ಆಟಗಾರರಂತೆ ಭಾರೀ ರೊಕ್ಕವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿರುವ ಸ್ಟಾರ್ ಆಟಗಾರರು ಈ ಬಾರಿಯ ಪ್ರೊ ಕಬ್ಬಡಿಯ ರಂಗನ್ನು ಹೆಚ್ಚಿಸಲು ಕಾತರದಿಂದ ಇದ್ದಾರೆ. ಮುಖ್ಯವಾಗಿ 93 ಲಕ್ಷಕ್ಕೆ ಬಿಕರಿಯಾಗಿರುವ ನಿತಿನ್ ತೋಮರ್ (ಉತ್ತರ ಪ್ರದೇಶ) ಮುಖ್ಯ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ, ಬೆಂಗಳೂರು ಬುಲ್ಸ್‍ನ ನಾಯಕ ಹಾಗೂ ಸೂಪರ್ ರೈಡರ್ ರೋಹಿತ್‍ಕುಮಾರ್ 81 ಲಕ್ಷಕ್ಕೆ ಬಿಕರಿಯಾಗಿರುವುದರಿಂದ ಅವರ ಮೇಲೂ ಉತ್ಸಾಹ ಹೆಚ್ಚಿದೆ.

ಇನ್ನುಳಿದಂತೆ ಅಲ್‍ರೌಂಡರ್ ಹಾಗೂ ಜೈಪುರ್ ಪಿಂಕ್ ಪ್ಯಾಂಥ್ಯಾರ್ಸ್‍ನ ನಾಯಕ ಮಂಜಿತ್ ಚಿಲ್ಲರ್, ಮುಂಬೈ ತಂಡದ ನಾಯಕ ಅನುಪ್‍ಕುಮಾರ್, ಕಾಶಿಲಿಂಗ ಅಡಕೆ, ಜಾಂಗ್‍ಕುಂಗ್ ಲೀ, ಮೀರಜ್ ಶೇಖ್‍ರಂತಹ ಆಟಗಾರರ ಆಟವನ್ನು ಕಣ್ಣು ತುಂಬಿಸಲು ಕಬ್ಬಡಿ ಪ್ರಿಯರು ಕಾತರದಿಂದಿದ್ದಾರೆ.

ಪ್ರಶಸ್ತಿ ಗೆಲ್ಲುವುದೇ ಬೆಂಗಳೂರು ಬುಲ್ಸ್..?

2015ರ ಆವೃತ್ತಿಯಲ್ಲಿ ಮಂಜಿತ್ ಚಿಲ್ಲಾರ್ ನಾಯಕತ್ವದಲ್ಲಿ ಬಿಟ್ಟರೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸದಿದ್ದ ಬೆಂಗಳೂರು ಬುಲ್ಸ್ ತಂಡವು ಈ ಬಾರಿ ಹೊಸ ಹುರುಪಿನಲ್ಲಿದೆ. ಹಿಂದಿನ ಆವೃತ್ತಿಗಳ ಕಹಿಯನ್ನು ಮರೆತು ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಸ್ಟಾರ್ ರೈಡರ್ ಹಾಗೂ ನಾಯಕ ರೋಹಿತ್‍ಕುಮಾರ್ ಮೇಲೆ ಹೆಚ್ಚಿನ ಹೊಣೆಯಿದ್ದು ಅದನ್ನು ನಿಭಾಯಿಸಿ ಎದುರಾಳಿ ತಂಡಕ್ಕೆ ಸೋಲು ಕಾಣಿಸುವ ಆಟಗಾರರ ಪಡೆಯೇ ತಂಡದಲ್ಲಿದೆ.
ಮುಖ್ಯವಾಗಿ ಕನ್ನಡಿಗ ಹರೀಶ್ ನಾಯಕ್ ಮೇಲೂ ಎಲ್ಲರ ಕಣ್ಣು ನಿಟ್ಟಿದೆ. ಅಲ್ಲದೆ ಅಜಯ್‍ಕುಮಾರ್, ಗುರ್ವಿಂದರ್ ಸಿಂಗ್, ಅಶಿಶ್ ಕುಮಾರ್, ಪ್ರೀತಂ ಚಿಲ್ಲಾರ್‍ರಂತಹ ಸ್ಟಾರ್ ಆಟಗಾರರು ಅಖಾಡಕ್ಕಿಳಿಯಲಿರುವುದರಿಂದ ಬೆಂಗಳೂರು ಬುಲ್ಸ್ ಕೂಡ ಪ್ರಶಸ್ತಿ ಗೆಲ್ಲುವ ತಂಡವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವನ್ನು ಮೂಡಿಸಿದೆ.

ಪ್ರಶಸ್ತಿಗಳ ಮೊತ್ತ:

ಈ ಬಾರಿಯ ಪ್ರೊ ಕಬ್ಬಡಿಯಲ್ಲಿ ಒಟ್ಟು 8 ಕೋಟಿ ಬಹುಮಾನ ಮೊತ್ತವನ್ನು ಮೀಸಲಿಟ್ಟಿದೆ. ವಿಜೇತ ತಂಡಕ್ಕೆ 3 ಕೋಟಿ ಲಭಿಸಿದರೆ, ರನ್ನರ್‍ಅಪ್ ಆದ ತಂಡಕ್ಕೆ 1.8 ಕೋಟಿ, ಮೂರನೇ ತಂಡಕ್ಕೆ 1.2 ಕೋಟಿ ಬಹುಮಾನ ದೊರೆಯಲಿದೆ.

ಆತಿಥ್ಯ ವಹಿಸಿರುವ ನಗರಗಳು:

ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣವು ಪ್ರೊ ಕಬ್ಬಡಿಯ ಅತಿಥ್ಯದಿಂದ ದೂರ ಉಳಿದಿರುವುದು ಸಿಲಿಕಾನ್ ಸಿಟಿ ಮಂದಿಗೆ ಬೇಸರ ಮೂಡಿಸಿದೆ.
ಆದರೆ ಮುತ್ತಿನ ನಗರಿ ಹೈದ್ರಾಬಾದ್, ನಾಗ್ಪುರ, ಅಹಮದಾಬಾದ್, ಲಖನೌ, ಮುಂಬಯಿ, ಕೋಲ್ಕೊತ್ತಾ, ಸೋನೆಪತ್, ರಾಂಚಿ, ಹೊಸ ದಿಲ್ಲಿ, ಚೆನ್ನೈ , ಜೈಪುರ, ಪುಣೆ ನಗರಗಳಲ್ಲಿ ನಡೆಯಲಿದ್ದು . ಎಲ್ಲ ಪಂದ್ಯಗಳು ಸ್ಟಾರ್ ಸ್ಪೋಟ್ರ್ಸ್ ಸೇರಿದಂತೆ ಆಯಾ ಸ್ಥಳೀಯ ಮುಖ್ಯ ಚಾನೆಲ್‍ಗಳಲ್ಲಿ ಪ್ರಸಾರವಾಗಲಿದೆ.

ಪ್ರೊ ಕಬ್ಬಡಿಯಲ್ಲಿ ಸ್ಟಾರ್‍ಗಳ ಮಹಾದಂಡು : 

ಐಪಿಎಲ್‍ನಂತೆಯೇ ಭಾರೀ ಕ್ರೇಜ್ ಹುಟ್ಟಿಸಿರುವ ಪ್ರೊ ಕಬ್ಬಡಿಗೆ ಇಂದಿನಿಂದ ಚಾಲನೆ ದೊರೆಯಲಿದ್ದು ಉದ್ಘಾಟನಾ ಪಂದ್ಯದ ಆಕರ್ಷಣೆ ಅನ್ನು ಹೆಚ್ಚಿಸಲು ಸಿನಿಮಾ ಹಾಗೂ ಕ್ರೀಡಾ ಜಗತ್ತಿನ ಮಹಾಸಂಗಮವೇ ಸಮ್ಮಿಲನಗೊಳ್ಳಲಿದೆ. ಇಂದು ರಾತ್ರಿ 8 ಗಂಟೆಗೆ ಆರಂಭಗೊಳ್ಳುವ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಖರೀದಿಸಿರುವ ತಮಿಳು ತಲೈವಾಸ್ ತಂಡಗಳ ನಡುವಿನ ಆರಂಭಕ್ಕೆ ಹೈದ್ರಾಬಾದ್‍ನ ಗಚ್ಚಿಬೋವೈ ಕ್ರೀಡಾಂಗಣವು ಸಜ್ಜುಗೊಂಡಿದೆ.

ಪಂದ್ಯದ ಆರಂಭಕ್ಕೂ ದೇಶಕ್ಕೆ ಗೌರವ ಸಲ್ಲಿಸುವ ಆಡಲಾಗುವ ರಾಷ್ಟ್ರಗೀತೆಯನ್ನು ಬಾಲಿವುಡ್‍ನ ಸೂಪರ್ ಸ್ಟಾರ್ ಅಕ್ಷಯ್‍ಕುಮಾರ್ ಹಾಡಲಿದ್ದಾರೆ.
ಅಲ್ಲದೆ ಉದ್ಘಾಟನಾ ಸಮಾರಂಭವನ್ನು ಮತ್ತಷ್ಟು ರಂಗೇರಿಸಲು ಬಾಹುಬಲಿ ಯ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ, ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್, ಭಾರತೀಯ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದ ಪಿ.ವಿ.ಸಿಂಧು , ತರಬೇತುದಾರ ಪುಲ್ಲೇಲ ಗೋಪಿಚಂದ್ ಅಲ್ಲದೆ ತೆಲುಗು ಚಿತ್ರರಂಗದ ತಾರೆಗಳಾದ ಅಲ್ಲು ಅರ್ಜುನ್, ಚಿರಂಜೀವಿ ಸೇರಿದಂತೆ ಮತ್ತಿತರರ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ.

ಜೋನ್ ಮಾದರಿಯಲ್ಲಿ ಪಂದ್ಯಗಳ ಆಯೋಜನೆ : 

ಇದೇ ಮೊದಲ ಬಾರಿಗೆ ವಿವೋ ಕಬ್ಬಡಿಯೂ ಐಪಿಎಲ್ ಮಾದರಿಯಂತೆಯೇ ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಿರುವುದೇ ಅಲ್ಲದೆ ವಿಶ್ವಕಪ್‍ನ ಮಾದರಿಯಲ್ಲೇ ಗುಂಪುಗಳ ಮಾದರಿಯಲ್ಲಿ ನಡೆಯಲಿದೆ. ಪ್ರೊ ಕಬ್ಬಡ್ಡಿಯ 5ನೆ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು ಮೂರು ತಿಂಗಳ ಕಾಲ ಪ್ರಶಸ್ತಿಗಾಗಿ ತಂಡಗಳು ಸೆಣಸಲಿವೆ.  ಕಳೆದ ಬಾರಿ ಭಾರೀ ಕುತೂಹಲ ಹುಟ್ಟಿಸಿದ್ದ ಪ್ರೀತಂ ಚಿಲ್ಲರ್ ನಾಯಕತ್ವದ ನಮ್ಮ ಸ್ಥಳೀಯ ತಂಡವಾದ ಬೆಂಗಳೂರು ಬುಲ್ಸ್ ತಂಡವು ಈ ಬಾರಿ ಹೊಸ ಹುರುಪಿನಿಂದ ಅಂಕಣಕ್ಕೆ ಇಳಿಯಲಿದೆ.

ಶ್ರೇಷ್ಠ ರೈಡರ್ ಎಂದು ಗುರುತಿಸಿಕೊಂಡಿರುವ ರೋಹಿತ್‍ಕುಮಾರ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಬೆಂಗಾಲ್ ವಾರಿಯರ್ಸ್, ಕಳೆದ ಬಾರಿಯ ಚಾಂಪಿಯನ್ಸ್ ಪಟನಾ ಪೈರೇಟ್ಸ್ , ತಮಿಳು ತಲೈವಾಸ್, ತೆಲುಗು ಟೈಟನ್ಸ್ , ಯು.ಪಿ. ಯೋಧಾ ತಂಡಗಳು ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಿ ಗುಂಪಿಗೆ ಹೋಲಿಸಿದರೆ ಎ ಗುಂಪಿನಲ್ಲಿ ಬಹುತೇಕ ಬಲಿಷ್ಠ ತಂಡಗಳೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡವೆನಿಸಿಕೊಂಡಿರುವ ಅನುಪ್‍ಕುಮಾರ್ ಸಾರಥ್ಯದ ಯುಮುಂಬಾ ಅಲ್ಲದೆ ಮಂಜಿತ್ ಚಿಲ್ಲಾರ್‍ನಾಯಕತ್ವದ ಜೈಪುರ್ ಪಿಂಕ್‍ಪ್ಯಾಂಥರ್ಸ್, ದಬಾಂಗ್ ಡೆಲ್ಲಿ , ಗುಜರಾತ್ ಫಾರ್ಚೂನ್‍ಜಯಂಟ್ಸ್ , ಹರಿಯಾಣ ಸಕ್ಟೀಲರ್ಸ್, ಪುಣೇರಿ ಪಲ್ಟನ್ ತಂಡಗಳು ಕೂಡ ಸ್ಥಾನವನ್ನು ಅಲಂಕರಿಸಿಕೊಂಡಿದೆ.

ಚಾಂಪಿಯನ್ಸ್

2014ರಲ್ಲಿ ಶುಭಾರಂಭಗೊಂಡ ಪ್ರೊ ಕಬ್ಬಡಿಯಲ್ಲಿ ಜಸ್ವೀರ್ ಸಿಂಗ್ ನಾಯಕತ್ವದ ಜೈಪುರ್ ಪಿಂಕ್ ಪ್ಯಾಂಥಾರ್ಸ್ ಯು ಮುಂಬಾ ತಂಡದ ವಿರುದ್ಧ 11 ಅಂಕಗಳ ಅಂತರದಿಂದ ಗೆದ್ದು ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರೆ, 2015ರಲ್ಲಿ ಅನುಪ್‍ಕುಮಾರ್ ಸಾರಥ್ಯದ ಯು-ಮುಂಬಾ ತಂಡವು ಮಂಜಿತ್ ಚಿಲ್ಲಾರ್‍ರ ನಾಯತ್ವದ ಬೆಂಗಳೂರು ಬುಲ್ಸ್ ತಂಡದ ವಿರುದ್ಧ 6 ಅಂಕಗಳಿಂದ ಗೆದ್ದು ಬೀಗಿದರೆ. ಪ್ರೊ ಕಬ್ಬಡಿಯ ಇತಿಹಾಸದಲ್ಲೇ 2016ರಲ್ಲಿ 2 ಬಾರಿ ಸರಣಿ ನಡೆದಿದ್ದು ಎರಡು ಬಾರಿಯೂ ಪಟ್ನಾ ಪೈರೇಟ್ಸ್ ತಂಡವು ಕ್ರಮವಾಗಿ ಯುಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥ್ಯಾರ್ಸ್ ತಂಡಗಳ ವಿರುದ್ಧ 3 ಹಾಗೂ 8 ಅಂಕಗಳಿಂದ ಗೆದ್ದು ಬೀಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin