ಬೈಕ್ ನಲ್ಲಿ ಮತದಾರರ ಮನೆ ಮನೆಗೆ ತೆರಳಿ ಬಿಜೆಪಿ ಮತಬೇಟೆ ..!

ಈ ಸುದ್ದಿಯನ್ನು ಶೇರ್ ಮಾಡಿ

BJP-Bike

ಬೆಂಗಳೂರು, ಜು.28- ತಳಮಟ್ಟದಿಂದ ಪಕ್ಷವನ್ನು ವಿಸ್ತಾರಕ್ ಮೂಲಕ ಸಂಘಟಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಇನ್ನಷ್ಟು ಹುರುಪುಗೊಂಡಿದ್ದು, ಇದೀಗ ಮನೆ ಮನೆಗೆ ಬೈಕ್ ಮೂಲಕ ತೆರಳಿ ಮತದಾರರನ್ನು ಭೇಟಿ ಮಾಡಲಿವೆ. ಉತ್ತರ ಪ್ರದೇಶದಲ್ಲಿ ಅನುಸರಿಸಿದ ರಣತಂತ್ರವನ್ನೇ ರಾಜ್ಯದಲ್ಲಿ ಹೆಣೆಯಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಬೈಕ್ ಭಾಗ್ಯ ಕಲ್ಪಿಸಲಿದೆ. ಪೂರ್ಣಾವಧಿಯ ಕಾರ್ಯಕರ್ತರಿಗೆ 300ಟಿವಿಎಸ್ ಬೈಕ್(ದ್ವಿಚಕ್ರ ವಾಹನ)ಗಳನ್ನು ಖರೀದಿ ಮಾಡಲಾಗಿದ್ದು, ರಾಜ್ಯಾಧ್ಯಂತ ಈ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಹಿಂದೆ ಉತ್ತರ ಪ್ರದೇಶದಲ್ಲಿ ಚುನಾವಣೆ 6 ತಿಂಗಳು ಬಾಕಿ ಇರುವಾಗ ಈ ರೀತಿ ದ್ವಿಚಕ್ರ ವಾಹನಗಳ ಮೂಲಕ ಮನೆ ಮನೆಗೆ ತೆರಳಿ ಮತದಾರರನ್ನು ಪಕ್ಷದತ್ತ ಸೆಳೆಯುವುದು ಹಾಗೂ ಕೇಂದ್ರ ಸರ್ಕಾರದ ಸಾಧನೆಯ ಜತೆಗೆ ನರೇಂದ್ರಮೋದಿ ನಾಯಕತ್ವವನ್ನು ಮನವರಿಕೆ ಮಾಡಿಕೊಡಲಾಗಿತ್ತು.  ಇದರ ಪರಿಣಾಮವೇ ಉತ್ತರ ಪ್ರದೇಶದಲ್ಲಿ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ನರೇಂದ್ರ ಮೋದಿ ಅಮಿತ್ ಶಾ ಜೋಡಿ ಬರೋಬ್ಬರಿ 335 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯಿತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯದಲ್ಲಿ ಈ ಮಾದರಿಯನ್ನೇ ಅನುಸರಿಸುವಂತೆ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ ?:

ಉತ್ತರ ಪ್ರದೇಶ ಬಹುದೊಡ್ಡ ರಾಜ್ಯವಾಗಿದ್ದರಿಂದ ಅಲ್ಲಿ ನೂರು ಬೈಕ್‍ಗಳನ್ನು ಖರೀದಿ ಮಾಡಲಾಗಿತ್ತು. ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಿಗೂ ತಲುಪಿ ಪಕ್ಷದ ಸಂಘಟನೆ ಹಾಗೂ ದೇಶಕ್ಕೆ ಬಿಜೆಪಿ ಎಷ್ಟು ಅನಿವಾರ್ಯ ಎಂಬುದನ್ನು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಲಾಗಿತ್ತು. ಸದ್ಯಕ್ಕೆ 26 ಬೈಕ್‍ಗಳನ್ನು ಖರೀದಿ ಮಾಡಲಾಗಿದೆ. ಈ ಬೈಕ್‍ಗಳಲ್ಲಿ ಪೂರ್ಣಾವಧಿಯ ಕಾರ್ಯಕರ್ತರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಆರ್‍ಎಸ್‍ಎಸ್ ಹಾಗೂ ಬಿಜೆಪಿಯ ನಿಷ್ಠಾವಂತರನ್ನು ಮಾತ್ರ ಈ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಕೇಂದ್ರದಲ್ಲಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಸಾಧನೆಗಳು, ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲಿದ್ದಾರೆ.  ಆ.6ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಅಂದು ಅಧಿಕೃತವಾಗಿ ಬೈಕ್ ಮೂಲಕ ನಡೆಯುವ ವಿಸ್ತಾರಕ್‍ಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ಕೊಡಲಿದ್ದಾರೆ.  ಈಗಾಗಲೇ ರಾಜ್ಯದ 224 ಕ್ಷೇತ್ರಗಳಲ್ಲೂ ಪೂರ್ಣಾವಧಿಯ ಕಾರ್ಯಕರ್ತರು ವಿಸ್ತಾರಕ್‍ನಲ್ಲಿ ತೊಡಗಿಕೊಂಡಿದ್ದಾರೆ. ಅಮಿತ್ ಷಾ ಇದರ ಬಗ್ಗೆ ಪ್ರತಿ ದಿನ ವರದಿ ತರಿಸಿಕೊಳ್ಳುತ್ತಿದ್ದಾರೆ.

ವಿಸ್ತಾರಕ್‍ನ್ನು ಗಂಭೀರವಾಗಿ ಪರಿಗಣಿಸಬೇಕು. ಮನೆ ಮನೆಗೆ ತೆರಳಿ ಬಿಜೆಪಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವುದರ ಜತೆಗೆ ಸಂಘಟನೆಗೆ ಒತ್ತು ನೀಡಬೇಕೆಂದು ರಾಜ್ಯದ ಮುಖಂಡರಿಗೆ ತಾಕೀತು ಮಾಡಿದ್ದಾರೆ.  ಮುಂದಿನ ತಿಂಗಳು ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪಕ್ಷದ ಬೆಳವಣಿಗೆ, ಸಂಘಟನೆ ವಿಸ್ತಾರದ ಬಗ್ಗೆ ಪೂರ್ಣ ಮಾಹಿತಿ ಪಡೆಯಲಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆ ನಂತರ ರಾಜ್ಯದ ಬೆಳವಣಿಗೆಗಳ ಬಗ್ಗೆ ಅಮಿತ್ ಷಾ ನಿಗಾ ವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin