ರಾಜ್ಯದಲ್ಲಿ ಜೆಡಿಎಸ್ ಅನಿವಾರ್ಯ : ಕುಮಾರಸ್ವಾಮಿ ಭವಿಷ್ಯ

Kumaraswamy--01

ತಿರುಪತಿ, ಜು.28- ರಾಜ್ಯದ ಜನರ ಹಾಗೂ ರೈತರ ಹಿತಾಸಕ್ತಿ ರಕ್ಷಣೆ ಮಾಡುವಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವಿಫಲವಾಗಿದ್ದು, ಜೆಡಿಎಸ್ ಅನಿವಾರ್ಯ ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡತೊಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ತಿರುಮಲದಲ್ಲಿ ವೆಂಕಟೇಶ್ವರ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಮಾಡಲಾಗಿದೆ ಎಂಬ ಪ್ರಕರಣಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜನರು ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಹೋಲಿಸಿದಾಗ ಜೆಡಿಎಸ್ ಉತ್ತಮ ಎಂಬ ವಾತಾವರಣ ರಾಜ್ಯದಲ್ಲಿ ಉಂಟಾಗುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತ ಮತ್ತು ನಡವಳಿಕೆಗಳಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯದ ಜನರ ಮತ್ತು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ.

ನಾಡಿನ ಜನರು ಹಾಗೂ ರೈತರು ನೆಮ್ಮದಿಯ ಬದುಕನ್ನು ನಡೆಸಬೇಕೆಂಬ ಆಶೀರ್ವಾದ ಮಾಡುವಂತೆ ಬಾಲಾಜಿಯಲ್ಲಿ ಪ್ರಾರ್ಥಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದರು. ಇದಕ್ಕೆ ಪ್ರಕೃತಿಯೂ ಪೂರಕವಾದ ಸಹಕಾರ ನೀಡಲಿ ಎಂದರು. ಬಹಳ ದಿನಗಳಿಂದ ಶ್ರೀನಿವಾಸನ ದರ್ಶನ ಪಡೆಯಬೇಕೆಂಬ ಅಪೇಕ್ಷೆಯಿತ್ತು. ಹಾಗಾಗಿ ಇಂದು ದೇವರ ದರ್ಶನ ಪಡೆದಿರುವುದಾಗಿ ತಿಳಿಸಿದ ಅವರು, ತಿರುಪತಿ ಭೇಟಿಗೆ ಬೇರೆ ರೀತಿಯ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin