ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್, ಲಾಲೂಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Nitish-Kumar--01

ಪಾಟ್ನಾ, ಜು.28- ಲಾಲು ಪ್ರಸಾದ್ ಯಾದವ್‍ರ ಆರ್‍ಜೆಡಿ ಸಖ್ಯ ತೊರೆದು ಎನ್‍ಡಿಎ ಮೈತ್ರಿಕೂಟದೊಂದಿಗೆ ಹೊಸ ಸರ್ಕಾರ ರಚನೆಗಾಗಿ ಕೈಜೋಡಿಸಿ ಆರನೇ ಬಾರಿ ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಅವರು 131 ಸದಸ್ಯರ ಬಹುಮತ ಸಾಬೀತು ಮಾಡಿದ್ದಾರೆ.  ವಿಧಾನಸಭೆಯ ಹೊರೆಗೆ ಇಂದು ಆರ್‍ಜೆಡಿ ಸದಸ್ಯರ ಭಾರೀ ಪ್ರತಿಭಟನೆ ನಡುವೆ ಸದನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ನಿತೀಶ್ ಕುಮಾರ್ ಅವರಿಗೆ 131 ಮತಗಳು ಲಭಿಸಿದವು. ಇದರಿಂದಾಗಿ ಆರ್‍ಜೆಡಿ ಪರಮೋಚ್ಚ ನಾಯಕ ಲಾಲು ಪ್ರಸಾದ್ ಯಾದವ್‍ರಿಗೆ ಮುಖಭಂಗವಾಗಿದೆ.

ವಿಶೇಷ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ವಿಜಯ್ ಕುಮಾರ್ ಚೌಧರಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಆರ್‍ಜೆಡಿ ಸದಸ್ಯರು ಭಾರೀ ಗದ್ದಲ-ಕೋಲಾಹಲ ಸೃಷ್ಟಿಸಿದರು. ಉಪ ಮುಖ್ಯಮಂತ್ರಿಯಾಗಿದ್ದ ಆರ್‍ಜೆಡಿ ನಾಯಕ ತೇಜಸ್ವಿ ಪ್ರಸಾದ್, ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದರು. ಜೆಡಿಯು ಮತ್ತು ಬಿಜೆಪಿ ಪಿತೂರಿ ನಡೆಸಿ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ನಿತೀಶ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಮೋದಿಯನ್ನು ಟೀಕಿಸಿದಾಗ ಭಾರೀ ವಾದ-ವಾಗ್ವಾದ ನಡೆಯಿತು.

ಇವೆಲ್ಲದರ ನಡುವೆ ನಿತೀಶ್ ವಿಶ್ವಾಸ ಮತ ಯಾಚನೆ ಮಾಡಿದರು. ಎನ್‍ಡಿಎ ಮೈತ್ರಿಕೂಟದ ಪರವಾಗಿ 131 ಮತಗಳು ಹಾಗೂ ವಿರುದ್ಧವಾಗಿಉ 108 ಮತಗಳು ಚಲಾವಣೆಯಾದವು.   ಕಳೆದ ಬುಧವಾರ ಒಂದೇ ದಿನದಲ್ಲಿ ಭಾರೀ ನಾಟಕೀಯ ಬೆಳವಣಿಗೆಗೆ ಕಾರಣವಾದ ಬಿಹಾರದಲ್ಲಿ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನಿನ್ನೆ ವೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

ರಾಜಧಾನಿ ಪಾಟ್ನಾದಲ್ಲಿ ಮೊನ್ನೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಆರ್‍ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‍ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಬಂದ ನಂತರ ನಿತೀಶ್ ಅವರ ಅಧಿಕೃತ ನಿವಾಸದಲ್ಲಿ ಜೆಡಿಯು ಮತ್ತು ಬಿಜೆಪಿ ಶಾಸಕರು ಸಭೆ ನಡೆಸಿದರು. ನಿತೀಶ್ ಬಿಜೆಪಿ ನೇತೃತ್ವದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಇದೇ ವೇಳೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಜೆಡಿಯುಗೆ ಬೇಷರತ್ ಬೆಂಬಲ ಘೋಷಿಸಿದರು.

ಬಳಿಕ ನಿತೀಶ್ ಮತ್ತು ಸುಶೀಲ್ ಮೋದಿ ರಾಜಭವನಕ್ಕೆ ತೆರಳಿ ತಮಗೆ 132 ಶಾಸಕರ ಬೆಂಬಲ ಇದ್ದು, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ನೂತನ ಮೈತ್ರಿಕೂಟದಲ್ಲಿ 132 ಸದಸ್ಯರಿದ್ದಾರೆ. ಜೆಡಿಯು-71, ಬಿಜೆಪಿ-53, ಆರ್‍ಎಲ್‍ಎಸ್‍ಪಿ-2, ಎಲ್‍ಜೆಪಿ-2, ಎಚ್‍ಎಎಂ-1 ಮತ್ತು ಮೂವರು ಪಕ್ಷೇತರ ಶಾಸಕರನ್ನು ಇದು ಒಳಗೊಂಡಿದೆ. ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಅಗತ್ಯವಿದ್ದು, ಹೊಸ ದೋಸ್ತಿಯಲ್ಲಿ ಅಗತ್ಯಕ್ಕಿಂತ 10 ಹೆಚ್ಚು ಶಾಸಕರ ಬೆಂಬಲವಿತ್ತು.

ತೇಜಸ್ವಿ ಸೇರಿದಂತೆ ಲಾಲು ಕುಟುಂಬದ ವ್ಯಾಪಕ ಭ್ರಷ್ಟಾಚಾರ ಆರೋಪಗಳಿಂದಾಗಿ ಬೇಸತ್ತಿದ್ದ ನಿತೀಶ್ ಕುಮಾರ್ ಅಚ್ಚರಿ ವಿದ್ಯಮಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಅದಾದ 14 ಗಂಟೆಗಳ ಒಳಗೆ ಮತ್ತೆ ಬಿಹಾರ ಸಿಎಂ ಆದರು.
ಬಿಹಾರದಲ್ಲಿ ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಮಹಾಘಟ್‍ಬಂಧನ್ ಮೈತ್ರಿ ಮುರಿದು ಬಿದ್ದಿದ್ದು, ಎನ್‍ಡಿಎ ಮಿತ್ರ ಕೂಟದ ಸರ್ಕಾರ ರಚನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin