11 ವರ್ಷಗಳಾದರೂ ಮಿಥಾಲಿಗೆ ಮಂಜೂರಾಗದ ನಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

Mithali-Raj--1

ಹೈದ್ರಾಬಾದ್, ಜು. 28- ವಿವಿಧ ಕ್ರೀಡಾಕ್ಷೇತ್ರಗಳಲ್ಲಿ ದೇಶವನ್ನು ಪ್ರದರ್ಶಿಸಿ ಪದಕವನ್ನು ಗೆಲ್ಲುವ ಮೂಲಕ ನಾಡಿಗೆ ಕೀರ್ತಿ ತಂದರೆ, ಅಂತಹ ಕ್ರೀಡಾಪಟುಗಳಿಗೆ ಆಯಾ ರಾಜ್ಯ ಸರ್ಕಾರಗಳು ಗೌರವಿಸುವುದು ಹೆಮ್ಮೆಯ ಸಂಗತಿ. ಆದರೆ ಇಲ್ಲೊಬ್ಬ ಕ್ರೀಡಾಪಟು ಅಂತಹ ಸಾಧನೆಯನ್ನು ಮಾಡಿ ಆ ರಾಜ್ಯದ ಮುಖ್ಯಮಂತ್ರಿಯಿಂದ ವಸತಿ ಸ್ಥಳ ನೀಡುವ ಆಶ್ವಾಸನೆಯನ್ನು ಪಡೆದಿದ್ದರೂ 11 ವರ್ಷಗಳಾದರೂ ಕೂಡ ವಸತಿ ಸ್ಥಳ ನೀಡದಿರುವುದು ನಿಜಕ್ಕೂ ದುರದೃಷ್ಟವೇ ಸರಿ.

ಆ ಕ್ರೀಡಾಪಟು ಬೇರ್ಯಾರು ಅಲ್ಲ ಇತ್ತೀಚೆಗೆ ಮಹಿಳಾ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾಯಕಿ ಮಿಥಾಲಿ ರಾಜ್. ಮಿಥಾಲಿ 2005ರ ವಿಶ್ವಕಪ್‍ನ ಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತಂಡ ರನ್ನರ್ ಅಪ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಿಥಾಲಿಗೆ ಅಂದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್‍ರೆಡ್ಡಿ, ಮಿಥಾಲಿಗೆ 5 ಲಕ್ಷ ನಗದು ನೀಡಿ ಪುರಸ್ಕರಿಸಿದ್ದೇ ಅಲ್ಲದೆ 500 ಅಡಿ ವಿಸ್ತೀರ್ಣದ ಫ್ಲಾಟ್ ನೀಡುವುದಾಗಿ ಭರವಸೆ ನೀಡಿದ್ದರು.

ಅಂದಿನಿಂದ ಮಿಥಾಲಿ ಪೋಷಕರಾದ ದೊರೈರಾಜ್ ಮತ್ತು ಲೀಲಾ ರಾಜ್ ಅವರು ನಿವೇಶನಕ್ಕಾಗಿ ಅಲೆದರೂ ಕೂಡ ಅವರಿಗೆ ಆ ಸೌಲಭ್ಯ ದೊರಕಿಸಿಕೊಡುವತ್ತ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಇದರ ಬಗ್ಗೆ ಚಕಾರವೆತ್ತದಿರುವುದು ಬೇಸರದ ಸಂಗತಿ. ಈಗ ಮತ್ತೊಮ್ಮೆ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡು ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಆಗಿರುವ ತಂಡದ ಆಟಗಾರ್ತಿಯರಿಗೆ ಆಯಾ ರಾಜ್ಯದ ಮುಖ್ಯಮಂತ್ರಿಗಳು ಭಾರೀ ಮೊತ್ತದ ನಗದು, ಉನ್ನತ ಸರ್ಕಾರಿ ಹುದ್ದೆಗಳನ್ನು ನೀಡುವ ಮೂಲಕ ಪುರಸ್ಕರಿಸಿದ್ದರೆ, ಅದರಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್‍ರಾವ್ ಅವರು ತಮ್ಮ ನಾಡಿನ ಮಣ್ಣಿನ ಮಗಳ ಸಾಧನೆಯನ್ನು ಪುರಸ್ಕರಿಸಿ ಗೌರವಿಸಿದೆ.

ಆದರೆ ಚೊಚ್ಚಲ ವಿಶ್ವಕಪ್‍ನಲ್ಲಿ ಆಂಧ್ರ ಸರ್ಕಾರ ನೀಡಿದ್ದ 500 ಚದರ ಅಡಿ ವಿಸ್ತೀರ್ಣದ ನಿವೇಶನ ಇಂದಿಗೂ ದೊರೆಯದಿರುವುದು ತುಂಬಾ ಬೇಸರ ತಂದಿದೆ ಎಂದು ಮಿಥಾಲಿರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗಳಿಸಿಕೊಟ್ಟ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧುಗೆ 5 ಕೋಟಿ ಬಹುಮಾನ ಹಾಗೂ 1000ಚದರ ಅಡಿ ವಿಸ್ತೀರ್ಣದ ಭೂಮಿ ಹಾಗೂ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರ ಸಾಧನೆಗೆ ಮೆಚ್ಚಿ 2 ಕೋಟಿ ರೂ.ಗಳನ್ನು ನೀಡಿ ಪುರಸ್ಕರಿಸಿರುವ ಆಂಧ್ರ ಸರ್ಕಾರವು ಮಿಥಾಲಿಗೆ ನೀಡಿರುವ ಆಶ್ವಾಸನೆಯನ್ನು 11 ವರ್ಷಗಳಾದರೂ ಪೂರೈಸಲು ಮೀನಾಮೇಷ ಎಣಿಸುತ್ತಿರುವುದು ಸರಿಯೇ?
ಇನ್ನಾದರೂ ಕ್ರಿಕೆಟ್ ಕ್ಷೇತ್ರದಲ್ಲಿ ಮಿಥಾಲಿ ರಾಜ್ ಅವರು ತೋರಿರುವ ಸಾಧನೆಯನ್ನು ಪರಿಗಣಿಸಿ ಅಂದಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ಅವರು ನೀಡಿರುವ ಆಶ್ವಾಸನೆಯನ್ನು ಈಗಿನ ಕೆ. ಚಂದ್ರಶೇಖರ್ ಅವರ ಸರ್ಕಾರವಾದರೂ ಪೂರೈಸುವಂತಾಗಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin