ಆಪರೇಷನ್ ಕಮಲ ಭೀತಿಯಿಂದ ರಾಜ್ಯಕ್ಕೆ ಬಂದ ಗುಜರಾತ್ ಶಾಸಕರಿಗೆ ಸರ್ಪಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

Gujarat--01

ಬೆಂಗಳೂರು, ಜು.29- ಆಪರೇಷನ್ ಕಮಲ ಭೀತಿಯಿಂದ ಗುಜರಾತ್‍ನಿಂದ ರಾಜ್ಯಕ್ಕೆ ಕರೆತಂದಿರುವ 44 ಕಾಂಗ್ರೆಸ್ ಶಾಸಕರಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಹೊರಗಿನವರ ಸಂಪರ್ಕ ನಿರ್ಬಂಧಿಸಲಾಗಿದೆ. ರಾತ್ರಿಯೆಲ್ಲ ಜರ್ನಿ ಮಾಡಿ ಬಂದಿರುವ ಶಾಸಕರು ವಿಶ್ರಾಂತಿಯಲ್ಲಿದ್ದಾರೆ.
ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಶಾಸಕರ ರಕ್ಷಣೆ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಅವರ ಮೊಬೈಲ್ ಸಂಪರ್ಕಗಳನ್ನೂ ಕಡಿತ ಮಾಡಲಾಗಿದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‍ನಲ್ಲಿ ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಹೈಕಮಾಂಡ್ ತಮ್ಮ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕರ್ನಾಟಕಕ್ಕೆ ಕರೆತಂದಿದ್ದರು. ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಈ ಎಲ್ಲ ಶಾಸಕರಿಗೆ ಬಿಡದಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದ್ದು, ಆಗಸ್ಟ್ 7ರ ವರೆಗೆ ಬೆಂಗಳೂರಿನಲ್ಲಿರುವ ಅವರಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

ಮೊಬೈಲ್ ಇಂಟರ್‍ನೆಟ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಅಗತ್ಯಬಂದರೆ ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಗುಜರಾತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಶಿತ್ ವ್ಯಾಸ ಅವರ ನೇತೃತ್ವದಲ್ಲಿ 9 ಶಾಸಕರು ರಾಜ್‍ಕೋಟ್‍ನಿಂದ ಮುಂಬೈ ಮಾರ್ಗವಾಗಿ ಮತ್ತು 37ಕ್ಕೂ ಹೆಚ್ಚು ಶಾಸಕರು ಅಹಮದಾಬಾದ್‍ನಿಂದ ನೇರವಾಗಿ ಬೆಂಗಳೂರಿಗೆ ನಿನ್ನೆ ತಡರಾತ್ರಿ ಬಂದಿಳಿದಿದ್ದರು. ಶಾಸಕರ ಆತಿಥ್ಯದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಹಿಸಿದ್ದಾರೆ.

ಅಹಮದ್ ಪಟೇಲ್ ಅವರನ್ನು ಸೋಲಿಸಲೇಬೇಕು ಎಂಬ ಹಠ ತೊಟ್ಟಿರುವ ಅಮಿತ್ ಷಾ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ ಆ ಪಕ್ಷದ ಬಲ ಕುಗ್ಗಿಸುವ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರ ವಾಸ್ತವ್ಯವನ್ನು ಬೇರೆಡೆ ಸ್ಥಳಾಂತರಿಸಿದೆ.
ಗುಜರಾತ್ ವಿಧಾನಸಭೆಯ 57 ಕಾಂಗ್ರೆಸ್ ಶಾಸಕರ ಪೈಕಿ ಆರು ಮಂದಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದರು. ಕಾಂಗ್ರೆಸ್ ಮುಖಂಡ ಶಂಕರ್‍ಸಿಂಗ್ ವಘೇಲ ಅವರು ಕೂಡ ಪಕ್ಷದಿಂದ ಹೊರನಡೆದಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ಕೊಟ್ಟು ಅಹಮದ್ ಪಟೇಲ್ ಅವರಿಗೆ ಕೈಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕಾರಣಕ್ಕೆ ಮಾರು ಹೋಗಿದ್ದು, ಎಲ್ಲ ಕಾಂಗ್ರೆಸ್ ಶಾಸಕರನ್ನು ಗುಜರಾತ್‍ನಿಂದ ಕರ್ನಾಟಕಕ್ಕೆ ಕರೆತರಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin