ಐಟಿ ಹೆಚ್ಚುವರಿ ಆಯುಕ್ತರ ವಿವೇಕ್ ಬಾತ್ರಾ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

ಈ ಸುದ್ದಿಯನ್ನು ಶೇರ್ ಮಾಡಿ

CBI--01

ಮುಂಬೈ,ಜು.29-ಭಾರೀ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮುಂಬೈನ ಆದಾಯ ತೆರಿಗೆ (ಐಟಿ) ಇಲಾಖೆ ಹೆಚ್ಚುವರಿ ಆಯುಕ್ತ ವಿವೇಕ್ ಬಾತ್ರಾ, ಅವರ ಪತ್ನಿ ಪ್ರಿಯಾಂಕಾ ಹಾಗೂ ಇತರ ಮೂವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣಗಳನ್ನು ದಾಖಲಿಸಿದೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 10 ನಗರಗಳಲ್ಲೂ ಶೋಧ ಮುಂದುವರಿದಿದೆ. ಬಾತ್ರಾ ಮತ್ತು ಅವರ ಪತ್ನಿಯೊಂದಿಗೆ ಮುಂಬೈ ಮೂಲದ ಲೆಕ್ಕಪರಿಶೋಧಕ ಶಿರಿಷ್ ಶಾ, ವಿರಾಜ್ ಪ್ರೊಫೈಲ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕುಮಾರ್, ಹಾಗೂ ಅಲೋಕ್ ಇಂಡಸ್ಟ್ರೀಸ್‍ನ ನಿರ್ದೇಶಕ ದಿಲೀಪ್ ಜೀವರ್‍ಜಿಕಾ ವಿರುದ್ಧ ಸಿಬಿಐ ಕೇಸ್ ದಾಖಲಿಸಿದೆ.

1992ರ ಬ್ಯಾಚ್‍ನ ಇಂಡಿಯನ್ ರೆವಿನ್ಯೂ ಸರ್ವಿಸ್ (ಆರ್‍ಆರ್‍ಎಸ್) ಅಧಿಕಾರಿ ವಿವೇಕ್ ಬಾತ್ರಾ ಅವರ ಮೇಲೆ ಸಿಬಿಐ ಕಳೆದ ಒಂದು ವರ್ಷದಿಂದ ನಿಗಾ ಇಟ್ಟಿತ್ತು. ಇತರ ಆರೋಪಿಗಳು ಭಾರೀ ಪ್ರಮಾಣದ ಅಕ್ರಮ ಆಸ್ತಿ ಗಳಿಸಲು ಬಾತ್ರ ಅವರಿಗೆ ಸಹಾಯ ಮಾಡಿದ್ದರು ಎಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ.  ಕಳೆದ ಒಂಭತ್ತು ವರ್ಷಗಳಿಂದ ಬಾತ್ರಾ ಮತ್ತು ಅವರ ಪತ್ನಿ ಪ್ರಿಯಾಂಕಾ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಭಾರೀ ಪ್ರಮಾಣದ ಸ್ಥಿರ ಮತ್ತು ಚರಾಸ್ತಿಗಳನ್ನು ಅಕ್ರಮವಾಗಿ ಸಂಪಾದಿಸಿದ್ದು, ಅವರ ಆದಾಯಕ್ಕಿಂತ ಅನೇಕ ಪಟ್ಟು ಸ್ವತ್ತುಗಳು ಪತ್ತೆಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

2008 ರಿಂದ 2017ರವರೆಗೆ ಬಾತ್ರಾ ಅವರ ಆದಾಯ 1.43 ಕೋಟಿ ರೂ.ಗಳಾಗಿದ್ದರೆ, ಅವರ ಅಕ್ರಮ ಆಸ್ತಿಯು 6.79 ಕೋಟಿ ರೂ.ಗಳಷ್ಟಿವೆ. ಈ ಸಂಬಂಧ ದೆಹಲಿ, ಮುಂಬೈ, ಥಾಣೆ, ಗೋವಾ ಸೇರಿದಂತೆ 10 ನಗರಗಳಲ್ಲಿ ಶೋಧ ಮುಂದುವರಿದಿದ್ದು, ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin