ಖಾಸಗಿ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲು ಮುಂದಾದ ‘ಕೈ’ಕಮಾಂಡ್ ವಿರುದ್ಧ ಶಾಸಕರು ಗರಂ

Siddaramaiaha--01

ಬೆಂಗಳೂರು, ಜು.29- ಖಾಸಗಿ ಸಂಸ್ಥೆಯ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲು ಮುಂದಾಗಿರುವ ಹೈಕಮಾಂಡ್ ಕ್ರಮಕ್ಕೆ ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ. ಜನಪ್ರಿಯತೆ ಕಳೆದುಕೊಂಡಿರುವ ಸುಮಾರು 40 ಹಾಲಿ ಶಾಸಕರಿಗೆ ಟಿಕೆಟ್ ಕೊಡಬಾರದು. ಅವರಿಗೆ ಟಿಕೆಟ್ ನೀಡಿದರೆ ಈ ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯ ಎಂಬ ಮಾಹಿತಿಯನ್ನು ಸಮೀಕ್ಷೆ ನಡೆಸಿರುವ ಸಂಸ್ಥೆ ಹೈಕಮಾಂಡ್‍ಗೆ ನೀಡಿರುವ ಹಿನ್ನೆಲೆಯಲ್ಲಿ ಅಂತಹ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲು ಮುಂದಾಗಿರುವ ಪಕ್ಷದ ಹೈಕಮಾಂಡ್ ಕ್ರಮಕ್ಕೆ ಹಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಳೆದ 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಂಬೈನ ಖಾಸಗಿ ಸಂಸ್ಥೆಯೊಂದರಿಂದ ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆ ಕೊಟ್ಟ ಮಾಹಿತಿಯಂತೆಯೇ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಬಾರಿಯೂ ಅದೇ ಸಂಸ್ಥೆಗೆ ಸಮೀಕ್ಷೆ ನಡೆಸಲು ವಹಿಸಿದ್ದು, ಹಾಲಿ ಶಾಸಕರ ಕಾರ್ಯವೈಖರಿ ಬಗ್ಗೆ ಆಯಾ ಕ್ಷೇತ್ರಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದು, ಯಾರು ಜನಪ್ರಿಯತೆ ಕಳೆದುಕೊಂಡಿದ್ದಾರೆ, ಮತ್ತೆ ಯಾರು ಜನಪ್ರಿಯತೆ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದ ಹಲವು ಶಾಸಕರು ಟಿಕೆಟ್ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಯಾವುದೇ ಕಾರಣಕ್ಕೂ ಸಮೀಕ್ಷೆಗಂಟಿಕೊಂಡು ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಬೂತ್, ಬ್ಲಾಕ್ ಮಟ್ಟದ ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಬೇಕು. ಯಾರೋ ಕೆಲವರು ಅವೈಜ್ಞಾನಿಕವಾಗಿ ಎಲ್ಲೋ ನಿಂತು ಮಾಡಿದ ಸಮೀಕ್ಷೆಯ ವರದಿಯನ್ನಾಧರಿಸಿ ಟಿಕೆಟ್ ನೀಡಬಾರದು. ಈ ರೀತಿ ಟಿಕೆಟ್ ನೀಡಿದರೆ ಕಷ್ಟವಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸಮೀಕ್ಷೆಯನ್ನೇ ನಂಬಿದರೆ ನಾವು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹಲವು ಶಾಸಕರು ನೀಡಿದ್ದಾರೆ ಎಂದು ಹೇಳಲಾಗಿದೆ.

ಟಿಕೆಟ್ ವಂಚಿಸಲು ಸಮೀಕ್ಷೆಯ ನೆಪ ಬೇಡ. ಸಮೀಕ್ಷೆ ಕೈ ಬಿಟ್ಟು ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ಪಡೆದು, ಟಿಕೆಟ್ ನೀಡಿ ಕ್ಷೇತ್ರದಲ್ಲಿ ಸೇವೆ ಮಾಡಿರುವ ನಮಗೆ ನಮ್ಮ ಜನರ ನಾಡಿ ಮಿಡಿತ ಗೊತ್ತಿರುತ್ತದೆ. ಯಾವುದೇ ಕಾರಣಕ್ಕೂ ಸಮೀಕ್ಷೆಯನ್ನೇ ಮಾನದಂಡ ಮಾಡಿಕೊಳ್ಳುವುದು ಬೇಡ ಎಂದು ಹಲವು ಶಾಸಕರು ಅಲವತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin