ಗ್ರಾಮದಲ್ಲಿ ಕೌತುಕ ಹುಟ್ಟಿಸುತ್ತಿದೆ ಈ ನರಿಮರಿ ..!

ಈ ಸುದ್ದಿಯನ್ನು ಶೇರ್ ಮಾಡಿ

Nari--01

ಕಡೂರು, ಜು.29- ನರಿಯ ಮುಖ ನೋಡಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಾಣ್ಣುಡಿಯಿದೆ. ಕೆಲವರು ನರಿ ಮುಖ ನೋಡಲು ಹುಡುಕಿಕೊಂಡು ಹೋಗುವ ಪ್ರಸಂಗವೂ ಇದೆ. ಆದರೆ ನರಿಮರಿಯೇ ಬಂದು ನಿತ್ಯ ದರ್ಶನ ನೀಡುತ್ತಿರುವ ಪ್ರಸಂಗ ಮಲ್ಲೇಶ್ವರ ಗ್ರಾಮದಲ್ಲಿ ನಡೆಯುತ್ತಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ರಾಮೇಗೊಂದಿ ದೇವಾಲಯದ ಕಡೆಯಿಂದ ಬಂದ ಸುಮಾರು ಮೂರು ತಿಂಗಳ ನರಿಮರಿಯೊಂದು ಮಲ್ಲೇಶ್ವರ ಗ್ರಾಮದ ಕೆರೆಏರಿಯ ಪಕ್ಕದಲ್ಲಿರುವ ಈಶ್ವರ ಮತ್ತು ಆಂಜನೇಯಸ್ವಾಮಿ ದೇವಾಲಯದ ಬಳಿ ತಿರುಗಾಡುತ್ತಾ ಅಲ್ಲೇ ವಾಸವಾಗಿದೆ.

ದೇವಾಲಯದ ಪಕ್ಕದಲ್ಲೇ ಇರುವ ಬಿಳುವಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಸಿ. ಬಸವರಾಜಪ್ಪ ಅವರ ಮನೆಯವರು ಕರೆದರೆ ಬರುವ ಈ ನರಿಯು ಹಾಲನ್ನು ಕುಡಿಯುತ್ತದೆ. ಬಿಸ್ಕತ್ ಮತ್ತು ಕಾಯಿಚೂರುಗಳನ್ನು ತಿನ್ನುತ್ತದೆ, ಮನೆಯವರು ಎತ್ತಿಕೊಳ್ಳಲು ಹೋದರೆ ಗದರುತ್ತದೆ. ಆದರೆ ಮನೆಯವರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ನಿತ್ಯ ಬೆಳಿಗ್ಗೆ ಆರು ಗಂಟೆಗೆ ಬಸವರಾಜಪ್ಪ ಅವರ ದನದ ಕೊಟ್ಟಿಗೆಗೆ ಬರುವ ನರಿಯ ಮರಿ ಹಾಲು ಕುಡಿದು ಎರಡೂ ದೇವಾಲಯಗಳಲ್ಲಿ ಅಡ್ಡಾಡುತ್ತಾ ಬರುವ ಭಕ್ತರಿಗೆ ದರ್ಶನ ನೀಡುತ್ತಿದೆ. ಸಂಜೆ ಏಳು ಗಂಟೆಗೆ ಮತ್ತೆ ಅದೇ ಶಿಕ್ಷಕರ ಮನೆಯಲ್ಲಿ ಹಾಲು ಕುಡಿದು ಈಶ್ವರ ದೇವಾಲಯದ ಮುಂಭಾಗ ಇರುವ ಬೆಲ್ಲದ ಮರದಡಿ ಇರುವ ಚಪ್ಪಡಿ ಕಲ್ಲುಗಳ ಸಂದಿನಲ್ಲಿ ವಿಶ್ರಮಿಸಿಕೊಳ್ಳುತ್ತದೆ.

ಬಸವರಾಜಪ್ಪ ಅವರ ಹಿರಿಯ ಸಹೋದರ ಎಂ.ಸಿ. ಲೋಕೇಶ್ ಮಾಧ್ಯಮಗಳೊಂದಿಗೆ ಮಾತನಾಡಿ ಈ ನರಿಯ ಮರಿ ಕಳೆದ ಒಂದೂವರೆ ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟು ಈ ದಾರಿಯಲ್ಲಿ ಬಂದಿರಬಹುದು. ಈ ಸ್ಥಳ ಅದಕ್ಕೆ ಸುರಕ್ಷಿತ ಎಂದು ಅನಿಸಿರುವುದರಿಂದ ಇಲ್ಲೇ ವಾಸ ಮಾಡುತ್ತಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ ಜನರೂ ಕೂಡ ನರಿಯ ಮುಖವನ್ನು ನೋಡಲು ದೇವಾಲಯಗಳಿಗೆ ಬಂದು ಹೋಗುತ್ತಿದ್ದಾರೆ ಎಂದರು.

ಶಿಕ್ಷಕ ಬಸವರಾಜಪ್ಪ ಅವರ ಮಗ ಮಲ್ಲಿಕಾರ್ಜುನ್ ಮಾತನಾಡಿ ಈ ನರಿ ನನಗೆ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ ನನ್ನ ಜೊತೆ ಒಡನಾಟ ಇಟ್ಟುಕೊಂಡಿದೆ ನಾನು ಕರೆದಾಗ ಬರುತ್ತದೆ. ಪ್ರತಿದಿನ ಇದಕ್ಕೆ ಹಾಲು ಮತ್ತಿತರ ಆಹಾರ ಪದಾರ್ಥಗಳನ್ನು ನಾನೇ ನೀಡುತ್ತೇನೆ ಎಂದು ಹೇಳುತ್ತಾನೆ. ಒಟ್ಟಿನಲ್ಲಿ ಪಟ್ಟಣಕ್ಕೆ ಕೇವಲ ಎರಡು ಕಿ.ಮೀ. ಅಂತರದಲ್ಲಿರುವ ಮಲ್ಲೇಶ್ವರ ಗ್ರಾಮದಲ್ಲಿ ನರಿಯ ಕೌತುಕ ಮುಂದುವರೆದಿದೆ. ದೇವಾಲಯಗಳ ಆಶ್ರಯದಲ್ಲಿ ಈ ನರಿ ಇರುವುದು ಜನರಿಗೂ ಕುತೂಹಲ ತಂದಿದೆ ಒಟ್ಟಿನಲ್ಲಿ ನಮ್ಮ ಗ್ರಾಮಕ್ಕೆ ಒಳ್ಳೆಯದಾದರೆ ಸಾಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin