ಜಾನಪದ ಜಂಗಮ ರತ್ನ ಕರೀಮಜ್ಜ ನಮ್ಮನ್ನಗಲಿ 11 ವರ್ಷ

Janapada

– ಬಿ.ಆರ್.ಲಕ್ಷ್ಮೀಪತಿ

ಜಾನಪದ ಜಂಗಮರೆಂದೆ ಖ್ಯಾತರಾದ ಎಸ್.ಕೆ ಕರೀಂಖಾನ್ ಪ್ರೀತಿ-ಗೌರವದ ಪ್ರತೀಕವಾಗಿದ್ದವರು.ಅವರ ಔದಾರ್ಯದ ಗುಣದಿಂದಲೇ ದ್ವೇಷ ಅಸೊಯೆಯನ್ನು ಮೆಟ್ಟಿ ನಿಂತು ಜನಮಾನದಲ್ಲಿ ಕರೀಮಜ್ಜನಾಗಿದ್ದವರು.  ಅಪ್ರತಿಮ ಪಾಂಡ್ಯಿತ್ಯದಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಅವರು ನಾಡಿನಾದ್ಯಂತ ಪಸರಿಸಿದ್ದ ಜಾನಪದ ಗೀತೆಗಳನ್ನು ಒಗ್ಗೂಡಿಸಿದ್ದಲ್ಲದೆ ಹಲವಾರು ನಾಟಕಗಳು, ಚಲನಚಿತ್ರಗೀತೆಗಳ ಮೂಲಕ ಮನೆ ಮಾತಾಗಿದ್ದ ಕರೀಂಖಾನ್ ಅವರು ನಮ್ಮನ್ನಗಲಿ ಇಂದಿಗೆ ಹನ್ನೊಂದು ವರ್ಷಗಳು ಕಳೆದಿವೆ.  ಕರೀಂಖಾನ್ ಅವರು ಜನಿಸಿದ್ದು ಹಾಸನ ಜಿಲ್ಲೆಯ ಸಕಲೇಶಪುರ, ತಂದೆ ಅಬ್ದುಲ್ ರೆಹಮಾನ್ ಆಫ್ಘಾನಿಸ್ತಾನದ ಕಾಬೂಲಿನ ವೀರಯೋಧ. ತಾಯಿ ಜೈನಾಬಿ ಅರಬ್ಬಿ ಮೂಲದವರು.

ಕರೀಂಖಾನ್ ಓದಿದ್ದು ಕೇವಲ ಎಂಟನೆ ತರಗತಿ ಆದರೆ ಅನುಭವ ಪಾಂಡಿತ್ಯ ಅಪಾರ.ಇವರಿಗೆ ಕನ್ನಡ, ಸಂಸ್ಕøತಿ ಭಾಷೆಯನ್ನು ಹೃದಯ ತುಂಬಿ ಧಾರೆ ಎರೆದವರು ಸಮತಾವಾದಿ ಅಚ್ಚಂಗಿ ನಾರಾಯಣ ಶಾಸ್ತ್ರಿಗಳು. ಮನೆಯ ಮುಂದೆ ಬಯಲಿನಲ್ಲಿ ಬಂಡಿಗಳ ಸಮೇತ ರಾತ್ರಿ ಸಮಯದಲ್ಲಿ ತಂಗುತ್ತಿದ್ದ ಅಲೆಮಾರಿಗಳಾದ ಕಂಚುಗಾರರು(ಅಕ್ಕಸಾಲಿಗಳು) ಹಾಡುತ್ತಿದ್ದ ಜಾನಪದ ಗೀತೆಗಳಿಂದ ಆಕರ್ಷಿತರಾಗಿ ಕರೀಂಖಾನ್‍ರವರು ಕಾಲ್ನಡಿಗೆಯಲ್ಲೇ ಹಳ್ಳಿ-ಹಳ್ಳಿಗಳಿಗೆ ತೆರಳಿ 200ಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಸಂಗ್ರಹಿಸಿದರು.

ಈ ಮಧ್ಯೆ ಗಾಂಧೀಜಿಯವರ ಕರೆಗೆ ಓಗೂಟ್ಟು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ ಅವರು ಏಳೆಂಟು ಸಲ ಸೆರೆವಾಸ ಅನುಭವಿಸಿದ್ದರು.ನಂದಿ ಬೆಟ್ಟದಲ್ಲಿ ಗಾಂಧೀಜಿಯವರೊಂದಿಗೆ ಉಳಿದುಕೊಳ್ಳುವ ಸೌಭಾಗ್ಯ ಇವರದಾಗಿತ್ತು.ಜೈಲಿನಲ್ಲೂ ಇವರ ಗೀತೆಗಳನ್ನು ಕೇಳಲು ಚಳುವಳಿಗಾರರುಗುಂಪು ಕೂಡುತ್ತಿದ್ದರು.
ಗಾಂದೀಜಿಯವರ ತತ್ವಗಳ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಇವರು, ಹಳ್ಳಿಗಳಲ್ಲಿ ಗೀತೆಗಳನ್ನು ಹಾಡಿ ಜನರಿಗೆ ಕಾಂಗ್ರೆಸ್ ಸದಸ್ಯತ್ವದ ಫಾರಂಗಳನ್ನು ಹಂಚುತ್ತಿದ್ದರು.ಸೇವಾದಳದಲ್ಲಿ ದುಡಿಸಿಕೊಂಡು ಸಂಭಾವನೆ ನೀಡದೆ ವಂಚಿಸಿದಾಗ ರಾಜಕಾರಣದಿಂದ ದೂರ ಉಳಿದರು.

ಜೀವನೋಪಾಯಕ್ಕಾಗಿ 80 ಕಂಪೆನಿ ನಾಟಕಗಳನ್ನು ಬರೆದರು.ಮಧುಮೋಹನ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.ಇವರ ನಿರ್ದೇಶನದಲ್ಲಿ ಡಾ.ರಾಜ್‍ಕುಮಾರ್ ಅವರೂ ಅಭಿನಯಿಸಿದ್ದರು.ಹುಮಾಯೂಮ್,ಶ್ರೀ ಕೃಷ್ಣಲೀಲಾ ಲೈಲಾಮಜ್ನು,ಮಹಾಪ್ರಭು ಮಾಗಡಿ ಕೆಂಪೇಗೌಡ ಮುಂತಾದವು ಇವರ ನಾಟಕಗಳು .ಬಲಿದಾನ ,ಹುಸೇನ್ ,ಮಾತೃಶಾಪ,ಸಮೀರ,ಮುಷಿರ,ಹೀಗೆ ಅನೇಕ ಕಾದಂಬರಿಗಳಲ್ಲದೇ ನೀವಾರ, ನಿಹಾರ ಮೊದಲಾದ ಕಥಾ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದವರು ಇವರು.

ನಂತರ ಮದರಾಸಿನಲ್ಲಿ ಅಂದರೆ ಇಂದಿನ ಚೆನ್ನೈನಲ್ಲಿ ಚಲನಚಿತ್ರರಂಗದಲ್ಲಿ ಹತ್ತು ವರ್ಷಗಳ ಕಾಲ ಸತತ ಸೇವೆ ಮಾಡಿದ್ದರು. ಹಣ ಕೊಡದೆ ಕೇವಲ ಊಟ ಕೊಟ್ಟು ಗೀತೆ, ಕಥೆಗಳನ್ನು ಬರೆಸಿಕೊಂಡವರೇ ಹೆಚ್ಚು. 200ಕ್ಕೂ ಹೆಚ್ಚು ಕನ್ನಡ ಚಲನಚಿತ್ರ ಗೀತೆಗಳನ್ನು ರಚಿಸಿರುವುದೇ ಅಲ್ಲದೆ ಸಂಭಾಷಣೆ, ಗೀತರಚನೆಯನ್ನೂ ಮಾಡಿ ಕನ್ನಡ ಚಿತ್ರಗಳನ್ನು ಶ್ರೀಮಂತಗೊಳಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ತಮ್ಮ ಸುಮಧುರ ಗೀತೆಗಳಿಂದ ಕನ್ನಡಿಗರ ಜನಮನ ಗೆದ್ದ ಇವರು ಸ್ವರ್ಣಗೌರಿ ಕನ್ನಡ ಚಿತ್ರಕ್ಕೆ ಪ್ರಪ್ರಥಮವಾಗಿ ರಾಷ್ಟ್ರ ಪ್ರಶಸ್ತಿ ದೊರಕಿಸಿಕೊಟ್ಟ ಧೀಮಂತ ಕಲಾಭೀಷ್ಮ ಎಸ್.ಕರೀಂಖಾನ್.

ಇಂದಿಗೂ ಕನ್ನಡಿಗರ ನಾಲಿಗೆಗಳಲ್ಲಿ ನಲಿದಾಡುವ ಗೀತೆಗಳೆಂದರೆ, ನಟವರ ಗಂಗಾಧರ. ಇದನ್ನು ಡಾ.ಬಾಲಮುರಳಿಕೃಷ್ಣ ಅವರು ಹಾಡಿದ್ದು, ಜಯತೇ ಸತ್ಯಮೇವ ಜತೆ, ವನಮಾಲಿ ವೈಕುಂಠಪತೇ ಜಗದೀಶನಾಡುವ, ಜಯಗೌರಿ ಜಗದೀಶ್ವರಿ ನುಡಿ ಮನ ಶಿವಗುಣ ಸಂಕೀರ್ತನ, ಬಾರೇ ನೀ ಚೆಲುವೆ, ಚಿಲಿಪಿಲಿಗುಟ್ಟುವ ಹಕ್ಕಿಯ ಕೊರಳಲಿ- ಇಂತಹ ನೂರಾರು ಅಚ್ಚಕನ್ನಡದ ಗೀತೆಗಳು, ಹಿಂದೂ ಪುರಾಣಗಳ ಕಾವ್ಯ ಚಿತ್ರಗಳು ಅರಳಿದ್ದು ಎಸ್.ಕೆ.ಕರೀಂಖಾನ್ ಎಂಬ ಸಹೃದಯವಂತನ ಅಂತರಾಳದಿಂದ.

ಕರೀಂಖಾನ್‍ರವರು ಜಾನಪದ ಗೀತೆಗಳನ್ನು ಹಾಡುತ್ತಿದ್ದರೆ ಹೆಣ್ಣು ಮಕ್ಕಳ ಕಣ್ಣಲ್ಲಿ ಕಣ್ಣೀರ ಧಾರೆ ಹರಿಯುತ್ತಿತ್ತು. ಧಾರವಾಡದ ಲೋಕಮಿತ್ರ, ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರೂ ಆಗಿದ್ದ ಕರೀಂಖಾನ್ ಅವರು ರಾಯಲ್ ಇಂಡಿಯನ್ ನೇವಿಯಲ್ಲೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ 8000ಕಿಮೀ ದೂರವನ್ನು ಬಸ್‍ನಲ್ಲಿ ಪ್ರಯಾಣಿಸಿ ಜಾನಪದ ಪ್ರದರ್ಶಕರ ಕಲೆಗಳ ಕುರಿತ ಅತ್ಯಮೂಲ್ಯ 2540 ಗಂಟೆಗಳ ವಿಡಿಯೋ ಚಿತ್ರಣ ನಡೆಸಿ ವಿಶೇಷ ಗಿರಿಜನ ಪ್ರಶಸ್ತಿ ಸ್ಥಾಪಿಸಿ ಗಿರಿಜನರ ಕುರಿತ ಅಧ್ಯಯನಕ್ಕೂ ಒತ್ತು ಕೊಟ್ಟರು.

ಕರೀಂಖಾನ್‍ರವರು ಗಳಿಸಿದ ಪ್ರಶಸ್ತಿಗಳು:

1989ರಲ್ಲಿ ಗುಲ್ಬರ್ಗ ವಿವಿಯ ಗೌರವ ಡಾಕ್ಟರೇಟ್, ಅಕಾಡೆಮಿಗಳಿಂದ ಬಂದ ಅಭಿನಂದನೆಗಳಿಗೆ ಲೆಕ್ಕವಿಲ್ಲ. 1995ರಲ್ಲಿ ಎಚ್.ಡಿ.ದೇವೇಗೌಡರಿಂದ ಜಾನಪದ ಶ್ರೀ ಪ್ರಶಸ್ತಿ, 1995ರಲ್ಲಿ ಜೀಶಂ ಪ್ರಶಸ್ತಿ, 1997ರಲ್ಲಿ ನಾಡೋಜ ಪ್ರಶಸ್ತಿ, 2000ರಲ್ಲಿ ಚಿ.ಉದಯಶಂಕರ್ ಚಿತ್ರ ಸಾಹಿತ್ಯ ಪ್ರಶಸ್ತಿ, 2003ರಲ್ಲಿ ಡಾ.ಎಲ್.ಬಸವರಾಜು ಪ್ರಶಸ್ತಿ ಮುಂತಾದವು ಮೂಡಲ ಸೀಮೆಯ ಕನ್ನಡಿಗರಿಂದ ಸಂದ ಗೌರವ.

2004ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಹಂಸರತ್ನ, ಜಾನಪದ ಜಂಗಮ ಹಾಗೂ ಇತ್ತೀಚೆಗೆ ಸಂದ ಚಲನಚಿತ್ರರಂಗದ ಜೀವಮಾನ ಪ್ರಶಸ್ತಿಗಳಲ್ಲದೆ ಹೀಗೆ ಕರೀಂ ಅಜ್ಜನಿಗೆ ಸಂದಿರುವ ಪ್ರಶಸ್ತಿಗಳಿಗೆ ಬರವಿಲ್ಲ. 2006ರ ಜೂನ್ 10ರಂದು ಆಗಿನ ಮೇಯರ್ ಮುಮ್ತಾಜ್ ಬೇಗಂ ಕೆಂಪೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಆ.10, 2006ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕ ಶ್ರೇಷ್ಠ ಮಾನವ ರತ್ನಶ್ರೀ ಮರಣೋತ್ತರ ಪ್ರಶಸ್ತಿ ಲಭಿಸಿತು. ಈ ಜಾನಪದ ಸಂತ ಜುಲೈ 29, 2006ರಂದು ಇಹ ಜೀವನ ವಿರಮಿಸಿದರು.

ಸಂಪಿಗೆ ಹೂವು ಅರಳಿ ಬಾಡಿ ಉದುರಿ ಹೋದರೂ ಅದರ ಪರಿಮಳ ಹಾಗೇ ಇರುತ್ತದೆ. ಅದೇ ರೀತಿ ನಮ್ಮ ನಾಡಿನ ಪ್ರೀತಿಯ ಕರೀಂ ಅಜ್ಜ ನಮ್ಮನ್ನು ಅಗಲಿದರೂ ಅವರ ಜಾನಪದ ಗೀತೆಗಳ ಸಂಗ್ರಹ ಹಾಗೂ ಅವರು ರಚಿಸಿದ ಸುಮಧುರ ಚಿತ್ರಗೀತೆಗಳಲ್ಲಿ ಅವರು ಎಂದೆಂದಿಗೂ ಅಮರರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin