ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಲು ರಾಜ್ಯಕ್ಕೆ ಬರುತ್ತಿದ್ದಾರೆ ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು, ಜು.29- ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಬಿಜೆಪಿಗೆ ಹಿನ್ನಡೆಯುಂಟು ಮಾಡುವುದನ್ನು ತಡೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದು, ಅದಕ್ಕಾಗಿ ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ್ದಾರೆ.  ಅಭ್ಯರ್ಥಿಗಳ ಆಯ್ಕೆ ಬದಲು ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ಪ್ರವಾಸ ವನ್ನು ಶಾ ಸೀಮಿತಗೊಳಿಸುತ್ತಿದ್ದಾರೆ. ಹೌದು, ರಾಜ್ಯ ಬಿಜೆಪಿ ನಾಯಕರ ಮನವಿ ಮೇರೆಗೆ ಆಗಸ್ಟ್ 12 ರಂದು ನಗರಕ್ಕೆ ಬರಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮತಿಸಿದ್ದು, ಮೂರು ದಿನಗಳ ಕಾಲ ರಾಜ್ಯದಲ್ಲೇ ಬೀಡು ಬಿಡಲಿದ್ದಾರೆ.

ಟಿಕೆಟ್ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೈ ನಡೆಸಲು ಮೊದಲು ನಿರ್ಧರಿಸಲಾಗಿತ್ತಾದರೂ ಇದೀಗ ಅದನ್ನು ಬದಲಿಸಲಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನಿಂದ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್‍ಗೆ ಮೊದಲ ಆದ್ಯತೆ ನೀಡಿದ್ದಾರೆ. ಹಾಗಾಗಿ ಈ ಭೇಟಿ ವೇಳೆ ಟಿಕೆಟ್ ಹಂಚಿಕೆ ಸಂಬಂಧ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಆದರೆ, ಈ ಪ್ರವಾಸದ ಭೇಟಿ ವೇಳೆ ದಲಿತರ ಟ್ರಂಪ್ ಕಾರ್ಡ್ ಮುಂದುವರೆಸಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ರಾಜ್ಯ ಪ್ರವಾಸ ಮಾಡಿದ್ದ ಬಿಜೆಪಿ ನಾಯಕರು ಇದೀಗ ಶಾ ಭೇಟಿ ವೇಳೆಯಲ್ಲಿಯೂ ದಲಿತ ಮನೆಯಲ್ಲಿ ಉಪಹಾರದ ತಂತ್ರವನ್ನು ಮುಂದುವರೆಸಲಿದ್ದಾರೆ. ಶಾ ಕೂಡ ದಲಿತರ ಮನೆಯಲ್ಲಿ ಉಪಹಾರ ಸವಿಯಲಿದ್ದಾರೆ ಎನ್ನಲಾಗುತ್ತಿದೆ.

ಮೂರು ದಿನವೂ ಸಂಪೂರ್ಣವಾಗಿ ಪಕ್ಷ ಸಂಘಟನೆಗೆ ಒತ್ತು ನೀಡಲಿರುವ ಶಾ, ಮೊದಲ ದಿನ ರಾಜ್ಯ ಬಿಜೆಪಿ ಸಮನ್ವಯ ಸಮಿತಿ ಸಭೆ ನಡೆಸಲಿದ್ದಾರೆ. ಎರಡನೇ ದಿನ ರಾಜ್ಯ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದು, ಪದಾಧಿಕಾರಿಗಳ ಅಭಿಪ್ರಾಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜನ್ಮ ಶತಾಬ್ದಿ ಸಂದರ್ಭದಲ್ಲಿ ಸ್ವಂತ ಜಿಲ್ಲಾ ಕಾರ್ಯಾಲಯಕ್ಕೆ ಒತ್ತು ನೀಡುವ ಕುರಿತು ರಾಜ್ಯ ಭೇಟಿ ವೇಳೆ ವರದಿ ಪಡೆಯಲಿದ್ದಾರೆ. ರವಿಶಂಕರ್ ಗುರೂಜಿ ಸೇರಿದಂತೆ ಪ್ರಮುಖ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಲಿದ್ದು, ಬೆಂಗಳೂರಿನ ಪ್ರಮುಖ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.

ಸಂಘಟನಾತ್ಮಕ ಪ್ರವಾಸದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮ ಬೇಡ ಎಂದು ಸೂಚನೆ ನೀಡಿರುವ ಅಮಿತ್ ಶಾ ಬೂತ್ ಸಮಿತಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.  ಈಗಾಗಲೇ ಉತ್ತರ ಪ್ರದೇಶದಿಂದ 50 ದ್ವಿಚಕ್ರ ವಾಹನಗಳನ್ನು ತರಿಸಿಕೊಳ್ಳಲಾಗಿದ್ದು, ಮಲ್ಲೇಶ್ವರಂ ಕಚೇರಿಯಲ್ಲಿ ಇಡಲಾಗಿದೆ. ಲಕ್ಕಿ ಬೈಕ್‍ಗಳು ಎನ್ನುವ ಕಾರಣಕ್ಕೆ ರಾಜ್ಯ ಚುನಾವಣೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪಕ್ಷದ ವಿಸ್ತಾರಕರಾಗಿ ಕೆಲಸ ಮಾಡುವವರಿಗೆ ಈ ಬೈಕ್‍ಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ. ರಾಜ್ಯ ಭೇಟಿ ವೇಳೆ ಅಮಿತ್ ಶಾ ವಿಸ್ತಾರಕರಿಗೆ ಈ ಬೈಕ್ ಗಳನ್ನು ಹಸ್ತಾಂತರ ಮಾಡಲಿದ್ದಾರೆ.

ಮೂರು ದಿನಗಳ ಭೇಟಿ ಬಳಿಕ ರಾಜ್ಯ ಬಿಜೆಪಿ ಘಟಕದ ಸಂಪೂರ್ಣ ಮಾಹಿತಿಯೊಂದಿಗೆ ಅಮಿತ್ ಶಾ ರಾಜಧಾನಿಗೆ ಹಿಂದಿರುಗಲಿದ್ದು, ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಲಿಂಗಾಯತ ಧರ್ಮದ ಕೂಗಿನ ಇಂಪ್ಯಾಕ್ಟ್ ಬಿಜೆಪಿ ಮೇಲೆ ಆಗದಂತೆ ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಲಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin