ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ಅವರ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

BB-Shivappa--01

ಬೆಂಗಳೂರು, ಜು.29-ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.ಕಳೆದ ಹಲವು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿರುವ ಬಿ.ಬಿ.ಶಿವಪ್ಪ ಸದ್ಯ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಿಜೆಪಿ ಡೈನಾಮಿಕ್ ಲೀಡರ್ ಎಂದೇ ಹೆಸರಾಗಿದ್ದ ಬಿ.ಬಿ.ಶಿವಪ್ಪ ಸಕಲೇಶಪುರದಲ್ಲಿ 1994 ಮತ್ತು 1999ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಬಿ.ಶಿವಪ್ಪ ಅವರು ಹಂತ ಹಂತವಾಗಿ ರಾಜ್ಯದಲ್ಲಿ ಪಕ್ಷವನ್ನು ಬೆಳೆಸಿದವರಲ್ಲಿ ಪ್ರಮುಖರು.   1980ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನೆಲೆ ಇಲ್ಲದ ಬಿಜೆಪಿ ಆಗ ಶೇ.28.1ರಷ್ಟು ಮತಗಳನ್ನು ಮಾತ್ರ ಗಳಿಸಿತ್ತು.

1989ರ ವಿಧಾನಸಭೆ ಚುನಾವಣೆಯಲ್ಲಿ ಸೋಮವಾರಪೇಟೆಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಶೇ.22ರಷ್ಟು ಬಿಜೆಪಿ ಮತ ಪಡೆಯಲು ಕಾರಣರಾಗಿದ್ದರು.
ಮತ್ತೆ 1991ರ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಸತತ ಸೋಲುಗಳಿಂದ ಕಂಗೆಡದ ಬಿ.ಬಿ.ಶಿವಪ್ಪ ಅವರು ಪಕ್ಷ ಸಂಘಟಿಸಿ 1994ರಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮತ್ತೆ 1999ರ ಚುನಾವಣೆಯಲ್ಲೂ ಸಕಲೇಶಪುರದಿಂದ ಮರು ಆಯ್ಕೆಯಾಗಿದ್ದರು. ಪಕ್ಷದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದಾಗ 2004ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಚುನಾವಣೆಗೆ ಸ್ಪರ್ಧಿಸಿದರಾದರೂ ಗೆಲುವು ಕಾಣಲಿಲ್ಲ. ಮತ್ತೆ ಬಿ.ಬಿ.ಶಿವಪ್ಪ ಬಿಜೆಪಿಗೆ ವಾಪಾಸಾದರು. ಹಲವು ರಾಜಕೀಯ ಏಳು-ಬೀಳುಗಳ ನಡುವೆ ಆಕರ್ಷಕ ವ್ಯಕ್ತಿತ್ವ ಅವರದ್ದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin