ಮಳೆಗಾಲದಲ್ಲಿ ನಾನಾ ಆರೋಗ್ಯ ತೊಂದರೆಗಳಿಂದ ದೂರವಿರುವುದು ಹೇಗೆ..?

Health-Rain

ಮಳೆಗಾಲದಲ್ಲಿ ನಾವು ಜಿನುಗುವ ಮಳೆಯನ್ನು ಅನುಭವಿಸಿದರಷ್ಟೇ ಸಾಲದು, ಈ ಸಮಯದಲ್ಲಿ ಆರೋಗ್ಯವಾಗಿರುವುದಕ್ಕೆ ಸೂಕ್ತ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳೂ ಹಲವಾರಿರುತ್ತವೆ. ಬೆಂಗಳೂರಿನಲ್ಲಿ ಮಳೆ ಉತ್ತಮ ಪ್ರಮಾಣದಲ್ಲಿ ಆಗುವುದರಿಂದ ಈ ಸಂದರ್ಭದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಗಮನದಲ್ಲಿರಿಸಿಕೊಳ್ಳಬೇಕು. ನೀರಿನಿಂದ ಹರಡುವ ರೋಗಗಳಾದ ಡಯೇರಿಯಾ, ಕಾಲರಾ, ಜಠರ ಸಮಸ್ಯೆ, ಬೇಧಿ ಹಾಗೂ ಸಾಮಾನ್ಯ ಶೀತ, ಜ್ವರ ಮತ್ತು ಸೊಳ್ಳೆಗಳಿಂದ ಉಂಟಾಗುವ ಡೆಂಘೀ ಮತ್ತು ಮಲೇರಿಯಾ ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಹೀಗಾಗಿ ಸೋಂಕಿನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ವೈಟ್‍ಫೀಲ್ಡ್ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಆಂತರಿಕ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಡಾ.ವಿನೋದ್‍ಕುಮಾರ್ ರೆಡ್ಡಿ ಹೇಳಿದ್ದಾರೆ.

ನೀರಿನಿಂದ ಉಂಟಾಗುವ ಸೋಂಕುಗಳು: ಬಳಲಿಕೆ, ತೀವ್ರ, ಕಿಬ್ಬೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಚರ್ಮ ಪೇಲವವಾಗುವುದು
ಸೊಳ್ಳೆಯಿಂದ ಹರಡುವ ರೋಗಗಳು:   ವಿಪರೀತ ಜ್ವರ, ಚರ್ಮದ ಮೇಲೆ ದದ್ದುಗಳು, ತಲೆನೋವು, ನೋವಿನಿಂದ ಕೂಡಿದ ಕಣ್ಣುಗಳು, ಹಸಿವು ಕಡಿಮೆಯಾಗುವುದು ಮತ್ತು ಮಾಂಸಖಂಡ ನೋವು
ಸಾಂಕ್ರಾಮಿಕ ಜ್ವರ:   ಮೂಗು ಸೋರುವುದು, ಗಂಟಲು ನೋವು, ಮಾಂಸಖಂಡ ನೋವು ಮತ್ತು ತಲೆನೋವು.

ಮುನ್ನೆಚ್ಚರಿಕೆಗಳು ಕ್ರಮಗಳು : 

ಸರಿಯಾದ ಆಹಾರ ಸೇವಿಸಿ: ಹೊರಗಿನ ಆಹಾರ ಹಾಗೂ ಜಂಕ್‍ಫುಡ್ ಸೇವಿಸಬೇಡಿ ಮತ್ತು ನಿಮ್ಮ ದೇಹದ ರೋಗನಿರೋಧಕತೆ ಹೆಚ್ಚಿಸಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ರೋಗಾಣುಗಳ ಬಾಧೆ ನಿವಾರಿಸಲು ಬೇಯಿಸುವ ಮುನ್ನ ಸೊಪ್ಪುಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ತೊಳೆಯಿರಿ.

ಶುದ್ಧೀಕರಿಸಿದ ನೀರು ಸೇವಿಸಿ:  ನೀರಿನ ಬಾಟಲಿ ಹಿಡಿದುಕೊಂಡೇ ಎಲ್ಲಿಗಾದರೂ ತೆರಳಿ ಮತ್ತು ಹೊರಗಿನ ನಲ್ಲಿ ನೀರನ್ನು ಸೇವಿಸಬೇಡಿ. ಇದರಿಂದ ನೀರಿನಿಂದ ಉಂಟಾಗುವ ರೋಗಗಳನ್ನು ನಿವಾರಿಸಲು ಸಹಾಯವಾಗುತ್ತದೆ.

 ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ:  ಇದರಿಂದ ಒಣ ಕಣ್ಣು, ಸ್ಟೈ, ಕಂಜಕ್ಟಿವೈಟೀಸ್ ಅಥವಾ ಕಾರ್ನಿಯಲ್ ಅಲ್ಸರ್‍ಗಳಿಗೆ ಕಾರಣವಾಗುತ್ತದೆ.

ಆಗಾಗ್ಗೆ ಕೈತೊಳೆದುಕೊಳ್ಳುತ್ತಿರಿ:  ನೀವು ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುತ್ತಿರಿ ಅಥವಾ ಕೈ ಸ್ವಚ್ಛವಾಗಿರಿಸಿಕೊಳ್ಳಲು ಸ್ಯಾನಿಟೈಸರ್ ಬಳಸಿ ಮತ್ತು ಕೆಲಸ ಡೆಸ್ಕ್ ಅನ್ನು ಸ್ವಚ್ಛವಾಗಿರಿಸಿಕೊಳ್ಳಿ. ಬಹುತೇಕ ಸಂದರ್ಭದಲ್ಲಿ ಸೋಂಕುಗಳು ಕೊಳೆಯಾದ ಕೈಗಳ ಮೂಲಕವೇ ಹರಡುವುದರಿಂದ ಇದು ಅತ್ಯಂತ ಪ್ರಮುಖವಾಗಿದೆ.

ಸಂಪೂರ್ಣ ಕೈತೋಳಿನ ಬಟ್ಟೆ ಧರಿಸಿ:  ಸಂಪೂರ್ಣ ತೋಳು ಇರುವ ಬಟ್ಟೆ ಧರಿಸುವುದರಿಂದ ಸೊಳ್ಳೆಗಳು ಕಚ್ಚುವ ಸಮಸ್ಯೆ ನಿವಾರಣೆಯಾಗುತ್ತದೆ.

ಸೊಳ್ಳೆ ರಿಪೆಲೆಂಟ್ ಬಳಸಿ: ಕೆಲಸಕ್ಕಾಗಿ ಮನೆಯನ್ನು ಬಿಡುವ ಮುನ್ನ ಸೊಳ್ಳೆ ರಿಪೆಲೆಂಟ್‍ಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖ ಮುನ್ನೆಚ್ಚರಿಕೆ ಕ್ರಮವಾಗಿದೆ.

ಸುತ್ತಲಿನ ಪ್ರದೇಶ ಸ್ವಚ್ಛವಾಗಿರಿಸಿಕೊಳ್ಳಿ: ಮಳೆಗಾಲದಲ್ಲಿ ಸೋಂಕುಗಳು ಮತ್ತು ರೋಗಗಳನ್ನು ದೂರವಿಡಲು ಸ್ವಚ್ಛತೆ ಅತ್ಯಂತ ಪ್ರಮುಖವಾಗಿದೆ.. ಹಾಗೆಯೇ, ನಿಮ್ಮ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲಲು ಅವಕಾಶ ನೀಡಬೇಡಿ. ಇದರಿಂದ ಸೊಳ್ಳೆಗಳ ಉತ್ಪತ್ತಿ ತಡೆಯಬಹುದಾಗಿದೆ.

ಮನೆಯಿಂದ ಸೊಳ್ಳೆಗಳನ್ನು ದೂರವಿಡಿ: ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ ಅಥವಾ ಕಿಟಕಿಗಳಿಗೆ ಸೊಳ್ಳೆ ಬಲೆಯನ್ನು ಹಾಕಿ, ಮನೆಗೆ ಸೊಳ್ಳೆ ಪ್ರವೇಶಿಸದಂತೆ ತಡೆಯಿರಿ.

ಮನೆಯನ್ನು ತೇವವಾಗಿರಿಸಬೇಡಿ:   ಉಸಿರಾಟ ಸಮಸ್ಯೆಯನ್ನು ಹೊಂದಿರುವವರಿಗೆ,   ಗೋಡೆಗಳು ಒದ್ದೆಯಾಗುವುದರಿಂದ ಸಮಸ್ಯೆ ಉಂಟಾಗಬಹುದು. ಯಾಕೆಂದರೆ ಒದ್ದೆಯಾದ ಗೋಡೆಗಳು ಫಂಗಸ್ ಬೆಳವಣಿಗೆ ಹೆಚ್ಚಿಸುವ ಅಪಾಯ ಹೊಂದಿರುತ್ತವೆ. ಹೀಗಾಗಿ ಗೋಡೆ ಒದ್ದೆಯಾಗದಂತೆ ನೋಡಿಕೊಳ್ಳಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin