ರಾಜ್ಯದ 97 ತಾಲ್ಲೂಕು, 365 ಹೋಬಳಿಗಳಲ್ಲಿ ಮಳೆ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

Mansoon-Rain

ಬೆಂಗಳೂರು, ಜು.29- ಮುಂಗಾರು ಹಂಗಾಮಿನಲ್ಲಿ ಕಳೆದೆರಡು ತಿಂಗಳಿನಿಂದ ಮಳೆ ಕೊರತೆ ಮುಂದುವರೆದಿದ್ದು, ರಾಜ್ಯದ 97 ತಾಲ್ಲೂಕುಗಳು ಹಾಗೂ 365 ಹೋಬಳಿಗಳಲ್ಲಿ ಮಳೆ ಅಭಾವ ಉಂಟಾಗಿದ್ದು, ಬರದ ಛಾಯೆ ಆವರಿಸಿದೆ. ಅದರಲ್ಲೂ ರಾಜ್ಯದ 10 ತಾಲ್ಲೂಕುಗಳು ತೀವ್ರ ಸ್ವರೂಪದ ಮಳೆ ಕೊರತೆಯನ್ನು ಎದುರಿಸುತ್ತಿದೆ. ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಕೃಷಿ ಚಟುವಟಿಕೆಗಳ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗಿದೆ. ಕೆಲವೆಡೆ ಬಿತ್ತನೆಯಾಗಿದ್ದರೆ, ಮತ್ತೆ ಕೆಲವಡೆ ಬಿತ್ತನೆಯೇ ಆಗಿಲ್ಲ. ಇನ್ನೂ ಕೆಲವೆಡೆ ಬಿತ್ತನೆಯಾಗಿದ್ದರೂ ಮೊಳಕೆ ಬಂದಿಲ್ಲ. ಹಲವೆಡೆ ಬಿತ್ತಿದ ಬೆಳೆಯೂ ಬಾಡಿ ಹೋಗುತ್ತಿದೆ. ಈ ಬಾರಿಯೂ ಕೂಡ ಬರದ ಲಕ್ಷಣ ಗೋಚರಿಸತೊಡಗಿದ್ದು, ರೈತ ಸಮುದಾಯ ಆತಂಕಕ್ಕೀಡಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕಳೆದ ಜೂ.1ರಿಂದ ಇದುವರೆಗೆ ವಾಡಿಕೆ ಮಳೆ ಪ್ರಮಾಣ ರಾಜ್ಯದಲ್ಲಿ 185 ಮಿಲಿಮೀಟರ್ ಆಗಿದ್ದು, ಮಳೆ ಬಿದ್ದಿರುವುದು ಕೇವಲ 179 ಮಿಮೀ ಮಾತ್ರ. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಶೇ.36ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.15ರಷ್ಟು ಮಳೆ ಕೊರತೆ ಕಂಡು ಬಂದಿದೆ.

ಜೂ.1ರಿಂದ ಜು.22ರವರೆಗಿನ ಮಾಹಿತಿ ಪ್ರಕಾರ ಕೇವಲ 8 ತಾಲ್ಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 61 ತಾಲ್ಲೂಕುಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದು, 97 ತಾಲ್ಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಹಾವೇರಿ, ಧಾರವಾಡ, ಗದಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕೊಡುಗು ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕೊರತೆ ಉಂಟಾಗಿದೆ.

ಶೇಕಡಾವಾರು:

ಆನೇಕಲ್‍ನಲ್ಲಿ ಶೇ.55, ಬೆಂಗಳೂರು ಉತ್ತರ-53, ಬೆಂಗಳೂರು ದಕ್ಷಿಣ-50, ಬೆಂಗಳೂರು ಪೂರ್ವ-46, ದೊಡ್ಡಬಳ್ಳಾಪುರ-40, ಹೊಸಕೋಟೆ-58, ನೆಲಮಂಗಲ-39, ರಾಮನಗರ-40, ಕನಕಪುರ-46, ಮಾಗಡಿ-49, ಬಂಗಾರಪೇಟೆ-65, ಮಾಲೂರು-60, ಚಿಕ್ಕಬಳ್ಳಾಪುರ-49, ಗೌರಿಬಿದನೂರು-46, ಶಿಡ್ಲಘಟ್ಟ-39, ಚಿಕ್ಕನಾಯಕನಹಳ್ಳಿ-38, ತುರುವೇಕೆರೆ-41, ತುಮಕೂರು-43.

ಕೊರಟಗೆರೆ-46, ಕುಣಿಗಲ್-58, ಮಧುಗಿರಿ-47, ಶಿರಾ-36, ಅಳಂದ -66, ಹಿರಿಯೂರು-38, ಹೊಸದುರ್ಗ-54, ಚಾಮರಾಜನಗರ-59, ಗುಂಡ್ಲುಪೇಟೆ-31, ಕೊಳ್ಳೇಗಾಲ-64, ಯಳಂದೂರು-80, ಎಚ್.ಡಿ.ಕೋಟೆ-51, ಕೆ.ಆರ್.ನಗರ-53, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ ತಲಾ-46.
ಟಿ.ನರಸೀಪುರ-53, ಮದ್ದೂರು, ಕೆ.ಆರ್.ಪೇಟೆ-52, ಮಳವಳ್ಳಿ-74, ಮಂಡ್ಯ-69, ನಾಗಮಂಗಲ-57, ಪಾಂಡವಪುರ-48, ಶ್ರೀರಂಗಪಟ್ಟಣ-68 ಇದೇ ರೀತಿ ಇನ್ನೂ ಹಲವು ತಾಲ್ಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ.

ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ ಕೊರತೆ ಕಂಡು ಬಂದಿದೆ. ರಾಜ್ಯದ 3602 ಸಣ್ಣ ಕೆರೆಗಳ ಪೈಕಿ ಭರ್ತಿಯಾಗಿರುವುದು 17 ಕೆರೆಗಳು ಮಾತ್ರ. ಶೇ.50ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವುದು 56 ಕೆರೆಗಳು. ಉಳಿದ ಕೆರೆಗಳು ಸತತವಾಗಿ ಹಲವು ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin