ಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭಾರತಕ್ಕೆ 304 ರನ್ ಗಳ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Team-India
ರಾಲೆ, ಜು.29- ಅಶ್ವಿನ್ ಮತ್ತು ಜಡೇಜಾ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಪ್ರಥಮ ಟೆಸ್ಟ್‍ನಲ್ಲಿ ಭಾರತದ ವಿರುದ್ಧ ಸೋಲನುಭವಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ ಮೂರನೆ ದಿನದಲ್ಲೇ ವಿರಾಟ್ ಕೊಹ್ಲಿ ಪಡೆ ಅಮೋಘ ಜಯ ಸಾಧಿಸಿದ್ದು, ಆತಿಥೇಯ ಲಂಕಾ ಮುಖಭಂಗ ಅನುಭವಿಸಿ ಸರಣಿ 1-0 ಅಂತರದಲ್ಲಿ ಹಿಂದೆ ಬಿದ್ದಿದೆ. ಇಂದು ಬೆಳಗ್ಗೆ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ತನ್ನ ದ್ವಿತೀಯ ಇನ್ನಿಂಗ್ಸ್‍ಅನ್ನು 240 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡ ಭಾರತ ಲಂಕಾಗೆ 550 ರನ್‍ಗಳ ಬೃಹತ್ ಮೊತ್ತದ ಗೆಲುವಿನ ಗುರಿಯನ್ನು ಮುಂದಿಟ್ಟಿತ್ತು.

ಇಂದು ಭೋಜನ ವಿರಾಮದ ನಂತರ ಸವಾಲನ್ನು ಬೆನ್ನಟ್ಟಿದ ಲಂಕಾ ಬಹುಬೇಗನೆ ತರಂಗ ಮತ್ತು ಗುಣತಿಲಕ ಅವರ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು.  ಇದಾದ ಸ್ವಲ್ಪ ಸಮಯದಲ್ಲೇ ಅನುಭವಿ ಆಟಗಾರ ಮ್ಯಾಥ್ಯೂಸ್ ಅವರು ಕೂಡ ಕೇವಲ 2 ರನ್ ಗಳಿಸಿ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದಾಗ ಲಂಕಾ ಪಾಳಯದಲ್ಲಿ ಆತಂಕ ಶುರುವಾಯಿತು.

ಆದರೆ, ಆರಂಭಿಕ ಆಟಗಾರ ಕರುಣಾರತ್ನೆ ಅವರ ತಾಳ್ಮೆಯ ಆಟ ಮತ್ತು ಡಿಕ್ವಿಲಾ ಅವರ ಜವಾಬ್ದಾರಿಯುತ ಆಟದಿಂದ ಸ್ವಲ್ಪ ಮಟ್ಟಿನ ಹೋರಾಟ ಕಂಡುಬಂತು.
ನಂತರ ಬಂದಂತಹ ಡಿಕ್ವಿಲಾ ಕರುಣಾರತ್ನೆ ಜತೆಗೂಡಿ ರನ್ ಕಲೆ ಹಾಕಿ ತಂಡವನ್ನು ಅಪಾಯದಿಂದ ಪಾರು ಮಾಡಲು ಸಾಕಷ್ಟು ಪ್ರಯಾಸಪಟ್ಟರು. ಈ ಜೋಡಿಯನ್ನು ಮುರಿಯುವಲ್ಲಿ ಜಡೇಜಾ ಯಶಸ್ವಿಯಾದರು.  ನಂತರ ಬಂದ ಡಿಕ್ವಿಲಾ ಅರ್ಧ ಶತಕ ಸಿಡಿಸಿ ಕರುಣಾರತ್ನೆಗೆ ಒಳ್ಳೆಯ ಸಾಥ್ ನೀಡಿದರು.ನೋಡನೋಡುತ್ತಿದ್ದಂತೆಯೇ ಲಂಕಾದ ಮೊತ್ತ 200ರ ಗಡಿ ದಾಟಿತು.

ಲಯ ಕಂಡುಕೊಂಡಿದ್ದ ಲಂಕಾ ಬ್ಯಾಟ್ಸ್‍ಮನ್‍ಗಳನ್ನು ಪೆವಿಲಿಯನ್‍ಗಟ್ಟಲು ಕೊಹ್ಲಿ ನಾನಾ ತಂತ್ರಗಳನ್ನು ಹೆಣೆದು ಸ್ಪಿನ್ನರ್‍ಗಳಿಗೆ ಚೆಂಡು ನೀಡಿದರು.
ತಂಡದ ಮೊತ್ತ 215 ರನ್‍ಗಳಾಗಿದ್ದಾಗ ಎಚ್ಚರ ತಪ್ಪಿದ ಡಿಕ್ವಿಲಾ (67)ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಕೀಪರ್ ಸಹಾಗೆ ಕ್ಯಾಚ್ ನೀಡಿ ಔಟಾಗಿ ನಿರಾಸೆಯಿಂದ ಹೊರನಡೆದರು. ನಂತರ ನಡೆದದ್ದು ಸ್ಪಿನ್ ಮೋಡಿ. ಅಶ್ವಿನ್ ಮತ್ತು ಜಡೇಜಾ ಅವರ ನಿರೀಕ್ಷೆಯಂತೆ ಚೆಂಡು ಸಾಕಷ್ಟು ಗಿರಕಿ ಹೊಡೆದು ಲಂಕಾ ಬ್ಯಾಟ್ಸ್‍ಮನ್‍ಗಳನ್ನು ಪರದಾಡುವಂತೆ ಮಾಡಿತು.

ಇದರ ಫಲವಾಗಿ ಬಾಲಂಗೋಚಿಗಳಾದ ಪ್ರದೀಪ್, ಕುಮಾರ ಮತ್ತಿತರರು ಖಾತೆ ತೆರೆಯದೆಯೇ ವಿಕೆಟ್ ಒಪ್ಪಿಸಿ ಒಬ್ಬರ ನಂತರ ಒಬ್ಬರು ಔಟಾಗಿ ಪೆವಿಲಿಯನ್ ಸೇರಿದರು. ಪರೇರಾ 21 ರನ್ ಗಳಿಸಿ ಅಜೇಯರಾಗಿ ಉಳಿದರು.  ಅಂತಿಮವಾಗಿ ಲಂಕಾ 76.5 ಓವರ್‍ಗಳಲ್ಲಿ 245 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನು ಅಪ್ಪಿಕೊಂಡಿತು.  ಅಂತಿಮವಾಗಿ ಭಾರತ 340 ರನ್‍ಗಳ ಬೃಹತ್ ಮೊತ್ತದ ಅಂತರದಿಂದ ಜಯ ಸಾಧಿಸಿತು.  ದ್ವಿತೀಯ ಇನ್ನಿಂಗ್ಸ್‍ನಲ್ಲಿ ಅಶ್ವಿನ್ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದರೆ, ಮಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ- ಪ್ರಥಮ ಇನ್ನಿಂಗ್ಸ್ 600 ರನ್
ದ್ವಿತೀಯ ಇನ್ನಿಂಗ್ಸ್ 240ಕ್ಕೆ 3 ಡಿಕ್ಲೇರ್
ಶ್ರೀಲಂಕಾ- ಪ್ರಥಮ ಇನ್ನಿಂಗ್ಸ್ 291
ದ್ವಿತೀಯ ಇನ್ನಿಂಗ್ಸ್ 245

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin