ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಮೂವರು ದುರ್ಮರಣ

Accident--01

ಯಲಹಂಕ, ಜು.29- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಸರ್ವೆ ಸಾಮಾನ್ಯವಾಗಿದ್ದು, ಇಂದು ನಸುಕಿನ ಜಾವ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮುಂಜಾನೆ ಸುಮಾರು 3 ಗಂಟೆಯಲ್ಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕ್ಯಾಬ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಮುಂಭಾಗದ ಮೇಲ್ಸೇತುವೆ ಮೇಲೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಜಗದೀಶ್ (38) ಮತ್ತು ವಿಮಾನ ನಿಲ್ದಾಣದ ಖಾಸಗಿ ಸಂಸ್ಥೆ ನೌಕರ ಉಮೇಶ್‍ಕುಮಾರ್ ಮಿಶ್ರ (40) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಗದೀಶ್ ಮೂಲತಃ ಹಾಸನದವರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಉಮೇಶ್‍ಕುಮಾರ್ ಮಿಶ್ರ ಅವರು ವಿಮಾನ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದು, ಅವರು ಸಹ ಪತ್ನಿ, ಒಂದು ಮಗುವನ್ನು ಅಗಲಿದ್ದಾರೆ.   ಈ ಅಪಘಾತ ಸಂಭವಿಸಿದ ಕೂಗಳತೆ ದೂರದ ವೆಂಕಟಾಲ ಬಳಿ ಡಿವೈಡರ್‍ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಗಂಭೀರ ಗಾಯಗೊಂಡಿದ್ದು, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತರ ಹೆಸರು-ವಿಳಾಸ ತಿಳಿದುಬಂದಿಲ್ಲ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಇದೇ ಹೆದ್ದಾರಿಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಕೋಗಿಲು ಕ್ರಾಸ್ ಮೇಲ್ಸೇತುವೆ ಮೇಲೆ ಮಹೀಂದ್ರ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಈ ಮೂರು ಅಪಘಾತಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿತ್ತಲ್ಲದೆ ಕೆಲವು ಗಂಟೆ ಆತಂಕ ಸೃಷ್ಟಿಸುವುದರ ಜತೆಗೆ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು. ಯಲಹಂಕ ಸಂಚಾರಿ ಪೊಲೀಸರು ಈ ಮೂರೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin