ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‍ ಶಾಸಕರು ಹೇಳೋದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Gujarat--01

ಬೆಂಗಳೂರು, ಜು.30- ನಾವು ಯಾರ ಒತ್ತಾಯಕ್ಕೂ ಮಣಿದು ಬಂದಿಲ್ಲ. ಸ್ವಯಂಪ್ರೇರಣೆಯಿಂದ ರಾಜ್ಯಕ್ಕೆ ಆಗಮಿಸಿದ್ದೇವೆ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಬಿಡದಿ ಬಳಿ ರೆಸಾಟ್ರ್ಸ್‍ನಲ್ಲಿ ಕಳೆದೆರಡು ದಿನಗಳಿಂದ ವಾಸ್ತವ್ಯ ಹೂಡಿರುವ ಗುಜರಾತ್‍ನ ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ.
ನಮ್ಮ ಶಾಸಕರೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೂ ಗೊಂದಲ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಕ್ತಿಸಿಂಗ್ ಗೋಯಲ್ ಹಾಗೂ ಶಾಸಕರು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದ್ದು, ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ವಿವರಗಳನ್ನೂ ತಿಳಿಸುವುದಾಗಿ ಹೇಳಿದ್ದಾರೆ.
ಆಪರೇಷನ್ ಕಮಲ ಭೀತಿಯಿಂದ ಗುಜರಾತ್‍ನಿಂದ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಶಾಸಕರಿಗೆ ಈಗಲ್‍ಟನ್ ರೆಸಾರ್ಟ್‍ನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆತಿಥ್ಯದ ನೇತೃತ್ವ ವಹಿಸಿದ್ದು, ಯಾರೂ ಕೈಕೊಡದಂತೆ ಎಚ್ಚರ ವಹಿಸಿದ್ದಾರೆ. ಶಾಸಕರ ಮೊಬೈಲ್‍ಗಳನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲ ಐಷಾರಾಮಿ ವ್ಯವಸ್ಥೆಗಳನ್ನು ರೆಸಾರ್ಟ್‍ನಲ್ಲಿ ಮಾಡಲಾಗಿದೆ. ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಲ್ಯಾಂಡ್‍ಲೈನ್‍ನಿಂದ ಫೋನ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕಾಂಗ್ರೆಸ್ ಶಾಸಕರನ್ನು ಪಕ್ಷದ ಹೈಕಮಾಂಡ್ ಹೈಜಾಕ್ ಮಾಡಿ ಸ್ಥಳಾಂತರ ಮಾಡಿದೆ. ಜನಪ್ರತಿನಿಧಿಗಳು ಮುಕ್ತವಾಗಿ ಕೆಲಸ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಅದೇ ರೀತಿ ಎಐಸಿಸಿ ಮುಖಂಡರಾದ ಗುಲಾಮ್‍ನಬಿ ಆಜಾದ್ ಅವರ ನೇತೃತ್ವದಲ್ಲಿ ಗುಜರಾತ್, ಬಿಹಾರ, ಉತ್ತರ ಪ್ರದೇಶಗಳಲ್ಲಿ ಶಾಸಕರ ವಿಧಾನ ಪರಿಷತ್ ಸದಸ್ಯರ ಕುದುರೆ ವ್ಯಾಪಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಗುಜರಾತ್‍ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಲ್ಲಿನ ಜನಪ್ರತಿನಿಧಿಗಳು ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತರು ಸಂಕಷ್ಟದಲ್ಲಿದ್ದು, ಅವರಿಗೆ ಸ್ಪಂದಿಸಲು ತೆರಳಬೇಕೆಂದು ಕೆಲವರು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದರಾದರೂ ರಾಜ್ಯಸಭೆ ಚುನಾವಣೆ ಮುಗಿಯುವವರೆಗೂ ಯಾರೂ ಎಲ್ಲೂ ಹೋಗುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ಶಾಸಕರು ವಾಸ್ತವ್ಯ ಮುಂದುವರಿಸಲಿದ್ದು, ಮಡಿಕೇರಿ, ತಿರುಪತಿ ಮತ್ತಿತರೆಡೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin