ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಚರಿಸುವಾಗ ಹುಷಾರ್..!

Accident--01

ಯಲಹಂಕ, ಜು.30- ನಗರದ ಪ್ರತಿಷ್ಠಿತ ಹಾಗೂ ಸುಸಜ್ಜಿತ ಹೆದ್ದಾರಿ ಎಂದರೆ ಥಟ್ಟನೆ ನೆನಪಾಗುವುದು ರಾಷ್ಟ್ರೀಯ ಹೆದ್ದಾರಿ 7. ಅದು ನಾಡಪ್ರಭು ಕೆಂಪೇಗೌಡರ ಸಾಮ್ರಾಜ್ಯದಲ್ಲಿ ಹಾದು ಅವರದ್ದೇ ಹೆಸರಿನ ವಿಮಾನ ನಿಲ್ದಾಣ ಸೇರುವ ರಸ್ತೆ.  ಬೆಂಗಳೂರು – ಹೈದರಾಬಾದ್ ರಸ್ತೆ ಎಂದರೆ ಎಲ್ಲರಿಗೂ ಚಿರಪರಿಚಿತ ಹಾಗೂ ಒಮ್ಮೆ ಈ ದಾರಿಯಲ್ಲಿ ದ್ವಿಚಕ್ರ ವಾಹನದಲ್ಲೋ ಅಥವಾ ಕಾರಲ್ಲೋ 150 ರಿಂದ 200 ಕಿ.ಮೀ ವೇಗವಾಗಿ ವಾಹನ ಚಾಲನೆ ಮಾಡಲೆಬೇಕೆಂಬ ಬಹುಜನರ ಕನಸಿನ ದಾರಿ . ಈಗ ಇದು ಮೃತ್ಯು ಕೂಪವಾಗಿದೆ ಎಂದರೆ ತಪ್ಪಾಗಲಾರದು.

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವಘಡಗಳಿಗೆಲ್ಲಾ ಮುಖ್ಯ ಕಾರಣ ಮಿತಿ ಇಲ್ಲದ ವೇಗ, ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್‍ಗಳು ಇಲ್ಲದಿರುವುದು, ಕಾಮಗಾರಿ ಇನ್ನೂ ಮುಕ್ತಾಯ ಆಗದಿರುವುದು ಸೇರಿದಂತೆ ರಸ್ತೆ ನಿರ್ಮಾಣದಲ್ಲಾಗಿರುವ ಕಳಪೆ ಕಾಮಗಾರಿಗಳೇ ಇಲ್ಲಿ ನಡೆಯುವ ಅವಘಡಗಳಿಗೆ ಪ್ರಮುಖ ಕಾರಣ ಎಂದೇ ಹೇಳಬಹುದು. ರಸ್ತೆಯಲ್ಲಿನ ಉಬ್ಬು-ತಗ್ಗುಗಳು ಏರಿಳಿತದಿಂದಾಗಿ ವೇಗವಾಗಿ ಸಂಚರಿಸುವ ವಾಹನ ಚಾಲಕರಿಗೆ ಹಿಡಿತ ಸಿಗದೆ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಈ ರಸ್ತೆ ವಿಮಾನ ನಿಲ್ದಾಣಕ್ಕೆ ಮಾತ್ರ ಸೀಮಿತವಲ್ಲ ನಂದಿಬೆಟ್ಟ, ಚಿಕ್ಕಬಳ್ಳಾಪುರ, ಹಾವಲ ಬೆಟ್ಟ ಸೇರಿದಂತೆ ಚಾರಣ ಹಾಗೂ ಸೂರ್ಯೋದಯ ವೀಕ್ಷಿಸಲು ಬೆಳಗಿನ ಜಾವ ತೆರಳುವ ಯುವಕ ಯುವತಿಯರು ಮಿತಿ ಮೀರಿದ ವಾಹನ ಚಾಲನೆಗೆ ಪೊಲೀಸರು ಬ್ರೇಕ್ ಹಾಕದಿರುವುದು ಮಾತ್ರ ಶೋಚನೀಯ.
ಇನ್ನೂ ಇದೇ ದಾರಿ ಬಳ್ಳಾರಿ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಾಣಿಜ್ಯ ನಗರಿ ಹೈದರಾಬಾದ್‍ಗೂ ಇದೇ ರಸ್ತೆ ಸಂಪರ್ಕ ಕಲ್ಪಿಸಿರುವುದರಿಂದ ವಾಹನ ದಟ್ಟಣೆ ಹಾಗೂ ಬಾರಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪೊಲೀಸರ ದಿವ್ಯ ನಿರ್ಲಕ್ಷಕ್ಕೆ ಇನ್ನೆಷ್ಟು ಬಲಿ ಬೇಕೆಂದು ಗೊತ್ತಾಗದಂತಾಗಿದೆ.

ಕಳೆದ 7 ತಿಂಗಳಲ್ಲಿ ದೇವನಹಳ್ಳಿಯಿಂದ ಯಲಹಂಕ ಮಧ್ಯೆ 27 ಕೀ ಮೀಟರ್ ಅಂತರದಲ್ಲಿ ಸರಿಸುಮಾರು 87 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 65ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇಂತಹ ಅಪಘಾತಗಳಿಂದಾಗಿ ಈ ಮಾರ್ಗವಾಗಿ ತೆರಳುವವರು ಹಾಗೂ ಸ್ಥಳೀಯರು ಭಯದಿಂದಲೇ ಸಂಚಾರ ನಡೆಸುವಂತಾಗಿದೆ. ನಾವು ಸರಿದಾರಿಯಲ್ಲಿದ್ದರೂ ಯಾರು ಎಲ್ಲಿಂದ ಬಂದು ಗುದ್ದುತ್ತಾರೆ ಎಂಬ ಭಯ ಮಾತ್ರ ಜನರಿಗೆ ಕಾಡದೇ ಇರದು.
ಆಶ್ಚರ್ಯದ ವಿಷಯವೆಂದರೆ ಅಪಘಾತಕ್ಕೊಳಗಾದ ಹಾಗೂ ಅಪಘಾತ ಮಾಡಿದ ವಾಹನ ಚಾಲನೆ ಮಾಡುವವರಲ್ಲಿ ಸುಮಾರು ಶೇ.80ರಷ್ಟು ಹದಿಹರೆಯದವರು ಇದ್ದು ಇವರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಬೆಳವಣಿಗೆ.

ಹುಚ್ಚು ಆವೇಶಗಳಲ್ಲಿ ಮಿತಿ ಮೀರಿದ ವೇಗ, ಡ್ರ್ಯಾಗ್, ರೇಸ್, ನೈಟ್ ಔಟ್ ಸೇರಿದಂತೆ ಹೆದ್ದಾರಿಯಲ್ಲಿನ ಹಾವಳಿಗಳಿಗೆ ಪೊಲೀಸರಸು ಕಡಿವಾಣ ಹಾಕದಿದ್ದಲ್ಲಿ ಮತ್ತಷ್ಟು ಜೀವಗಳು ಈ ರಸ್ತೆಗೆ ಬಲಿಯಾಗುವುದು ಮಾತ್ರ ಖಚಿತ.  ಈ ಹೆದ್ದಾರಿಗೆ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳು ಬರುತ್ತಿದ್ದು ಅದರಲ್ಲೂ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಯಲಹಂಕ ಮತ್ತು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಆದರೆ ಇಲ್ಲಿ ಪೊಲೀಸರು ಮಾತ್ರ ಪೊಲೀಸ್ ಠಾಣೆ ಮುಂಭಾಗದ ಹೊಂಗೆ ಮರದ ನೆರಳಲ್ಲಿ ನಿಂತು ಹಾದು ಹೋಗುವ ದ್ವಿಚಕ್ರ ವಾಹನ ಸವಾರರ ತಪಾಸಣೆ ಮಾಡುವಲ್ಲೆ ನಿರತರಾಗಿರುತ್ತಾರೆ ಹೊರತು ಯಾರಾದರೂ ವಿಐಪಿ ಗಳು ಬಂದಾಗ ಮಾತ್ರ ಹೆದ್ದಾರಿಯತ್ತ ಕಾಲಿಡುತ್ತಾರೆ.

ಇನ್ನೂ ಹೈವೇ ಪಾಟ್‍ರೋಲ್ ಮತ್ತು ಇಂಟರ್‍ಸೆಪ್ಟರ್‍ಗಳು ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿದ್ದರೂ ಇವರು ಮಾತ್ರ ಇನ್ನೂ ಹೆಲ್ಮೆಟ್ ಸವಾರರು, ನೋ ಪಾಕಿಂಗ್‍ನಲ್ಲಿ ನಿಲ್ಲಿಸುವ ವಾಹನಗಳನ್ನು ತಂದು ದಂಡ ವಸೂಲಿ ಮಾಡುವುದರಲ್ಲಿ ನಿರತರಾಗಿದ್ದಾರೆ.  ಅಜಾಗರೂಕತೆ, ಸಮಯ ಪ್ರಜ್ಞೆ ಇಲ್ಲದ ಬೇಜವಾಬ್ದಾರಿಯ ವಾಹನ ಚಾಲನೆಯಿಂದಾಗಿ ಆಗುವ ಅನಾಹುತಗಳಿಗೆ ಇನ್ನೆಷ್ಟು ಜೀವಗಳು ನೋವು ಅನುಭವಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಕಣ್ಣೆದುರು ಇಂತಹ ಅಪಘಾತಗಳನ್ನು ನೋಡಿರುವವರು ನಮಗಲ್ಲದಿದ್ದರೂ ನಮ್ಮನ್ನು ನಂಬಿರುವವರಿಗಾದರೂ ಬದುಕ ಬೇಕೆಂಬ ಕಾರಣಕ್ಕಾಗಿ ವಾಹನ ಚಾಲನೆ ವೇಳೆ ಮುನ್ನೆಚ್ಚರಿಕೆ ವಹಿಸುವ ಅತ್ಯಗತ್ಯವಿದೆ. ಕಾಫಿ ಡೆ ಮುಂಭಾಗ ನಡೆದ ಅಪಘಾತ, ವೆಂಕಟಾಲ ಡಿವೈಡರ್‍ಗೆ ಬೈಕ್ ಡಿಕ್ಕಿ , ನೈಟ್‍ರೈಡ್‍ಗಾಗಿ ದ್ವಿಚಕ್ರ ವಾಹನದಲ್ಲಿ ಬಂದ ಯುವಕರ ದುರ್ಮರಣ, ನಂದಿ ಬೆಟ್ಟದಿಂದ ಹಿಂದಿರುಗಿ ಬರುತ್ತಿದ್ದ ಯುವಕರು ತುಂಬಿದ್ದ ಕಾರು ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ನಾಲ್ವರ ಸಾವು ಇಂತಹ ಅದೆಷ್ಟೋ ಘಟನೆಗಳು ಒಂದರ ಹಿಂದೆ ಒಂದು ಘಟಿಸುತ್ತಿದ್ದರೂ ಈ ಬಗ್ಗೆ ಯುವ ಜನತೆಯು ಎಚ್ಚೆತ್ತುಕೊಳ್ಳುತ್ತಿಲ್ಲ. ಇತ್ತ ಪೊಲೀಸರು ಹೆಚ್ಚಿನ ಬಂದೋಬಸ್ತ್ ಮಾಡಿ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಇದಕ್ಕೆಲ್ಲಾ ಶಾಶ್ವತ ಪರಿಹಾರ ಹುಡುಕದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಾವಿನ ದಾರಿ ಎಂದೆ ಕುಖ್ಯಾತಿ ಹೊಂದುವುದು ಮಾತ್ರ ಸತ್ಯ. ಇದಕ್ಕೆ ಸ್ಥಳೀಯವಾಗಿ ಪೊಲೀಸರ ನಿರ್ಲಕ್ಷ ಸೇರಿದಂತೆ ಟೋಲ್ ಸಂಗ್ರಹಿಸುತ್ತಿರುವ ಖಾಸಗಿ ಒಡಂಬಡಿಕೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಕ್ರಮ ಕೈಗೊಳ್ಳಬೇಕಿದ್ದು, ಗುಣಮಟ್ಟದ ಕಾಮಗಾರಿ, ರಸ್ತೆಗಳಲ್ಲಿ ಸಿ.ಸಿ ಟಿ,ವಿ ಕ್ಯಾಮೆರಾಗಳು, ಸೇರಿದಂತೆ ಸಾರ್ವಜನಿಕರ ರಕ್ಷಣೆಗೆ ಬೇಕಾದ ಕ್ರಮಗಳನ್ನೂ ಕೈಗೊಳ್ಳಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin