ಇನ್ನು ಮುಂದೆ ರೈಲಿನ ಎಸಿ ಕೋಚ್ ಪ್ರಯಾಣಿಕರಿಗೆ ಬ್ಲಾಂಕೆಟ್‍ಗಳು ಸಿಗಲ್ಲ

Train--Blanket

ನವದೆಹಲಿ, ಜು. 30- ಇತ್ತೀಚಿನ ದಿನಗಳಲ್ಲಿ ದೇಶಾದಾದ್ಯಂತ ರೈಲ್ವೆ ಇಲಾಖೆಯ ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿರುವುದು ಸುದ್ದಿಗೆ ಗ್ರಾಸವಾಗಿರುವಾಗಲೇ ಇಲಾಖೆಯು ಮತ್ತೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಲಿದೆ. ದೇಶದಲ್ಲಿರುವ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆ, ಆಹಾರ ಶುಚಿತ್ವ ಸೇರಿದಂತೆ ಮುಂತಾದವುಗಳು ಕಳಪೆ ಮಟ್ಟದಿಂದ ಕೂಡಿರುತ್ತವೆ ಎಂದು ಆಪಾದಿಸಲಾಗುತ್ತಿದ್ದು ಈಗ ರೈಲುಗಳಲ್ಲಿನ ಎಸಿ ಕೋಚ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒದಗಿಸುತ್ತಿದ್ದ ಬ್ಲಾಂಕೆಟ್ (ರಗ್ಗು)ಗಳು ಕೂಡ ಕೊಳಕಿನಿಂದ ಕೂಡಿರುತ್ತವೆ ಎಂಬ ದೂರುಗಳು ಕೇಳಿ ಬಂದ ಬೆನ್ನ ಹಿಂದೆಯೇ ಆ ಸೌಲಭ್ಯ (ಬ್ಲಾಂಕೆಟ್ ನೀಡಿಕೆ)ವನ್ನು ಸ್ಥಗಿತಗೊಳಿಸಲಾಗಿದೆ.

ರೈಲುಗಳಲ್ಲಿ ಇದುವರೆಗೂ ಎಸಿ ಕೋಚ್‍ಗಳಲ್ಲಿ 24 ಡಿಗ್ರಿ ಸೆಲ್ಷಿಯಸ್ ಹವಾಮಾನವಿರುವಂತೆ ನೋಡಿಕೊಳ್ಳಲಾಗುತ್ತಿದ್ದು ಈಗ 19 ಡಿಗ್ರಿ ಸೆಲ್ಷಿಯನ್‍ಗೆ ಇಳಿಸಿರು ವುದರಿಂದ ಪ್ರಯಾಣಿಕರು ಬ್ಲಾಂಕೆಟ್‍ಗಳ ಮೊರೆ ಹೋಗುತ್ತಿ ದ್ದಾರೆ. ಇದರಿಂದ ಬ್ಲಾಂಕೆಟ್‍ಗಳು ಬಲು ಬೇಗ ಕೊಳೆ ಆಗುತ್ತವೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ಸ್ವಚ್ಛತೆಯ ಹೊರೆ:

ಎಸಿ ಕೋಚ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೆರವಾಗಲೆಂದು ರೈಲ್ವೆ ಇಲಾಖೆಯಿಂದ ಬ್ಲಾಂಕೆಟ್‍ಗಳನ್ನು ವಿತರಿಸುತ್ತಿದ್ದು ಇದಕ್ಕಾಗಿ ಪ್ರಯಾಣಿಕರಿಂದ 22 ರೂ.ಗಳನ್ನು ಪಡೆಯಲಾಗುತ್ತಿದೆ, ಆದರೆ ಇದರ ಸ್ವಚ್ಛತೆಗೆ 55 ರೂ. ಗಳ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಐಆರ್‍ಸಿಟಿಸಿ ವೈಬ್‍ಸೈಟ್‍ನಿಂದ ತಿಳಿದು ಬಂದಿದೆ.
ಅಲ್ಲದೆ ಕೆಲವು ಪ್ರಯಾಣಿಕರು ತಮ್ಮ ಪಯಣ ಮುಗಿದ ನಂತರ ಬೆಡ್ ರೋಲ್ ಕಿಟ್‍ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದೂ ತಿಳಿದು ಬಂದಿದೆ. ಒಂದು ಬೆಡ್ ರೋಲ್‍ನಲ್ಲಿ ಎರಡು ಕಾಟನ್ ಬೆಟ್‍ಶೀಟ್‍ಗಳು ಹಾಗೂ ಒಂದು ತಲೆದಿಂಬು ಇದ್ದು ಅದರ ವೆಚ್ಚ 140 ರೂ.ಗಳಾಗುತ್ತದೆ, ಎರಡನೇ ದರ್ಜೆಯ ಕಿಟ್ ಒಂದು ಬ್ಯಾಂಕೆಟ್ ಹೊಂದಿದ್ದು ಅದರ ಬೆಲೆ 110 ರೂ.ಗಳಾಗಿರುತ್ತದೆ.

ಕೆಲ ಪ್ರಯಾಣಿಕರು ಪಯಣ ಮುಗಿದ ನಂತರ ಕಿಟ್‍ಗಳನ್ನು ಕದ್ದೊಯ್ಯುವುದರಿಂದ ಇಲಾಖೆಗೆ ಭಾರೀ ನಷ್ಟವಾಗಲಿರುವುದರಿಂದ ಇನ್ನು ಮುಂದೆ ಎಸಿ ಕೋಚ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಬ್ಲಾಂಕೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin