ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗೋ ಲಕ್ಷಣಗಳಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--CM

ಬೆಂಗಳೂರು, ಜು.30- ಸಚಿವ ಸಂಪುಟ ವಿಸ್ತರಣೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದೇ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.  ಎಚ್.ಎಸ್.ಮಹದೇವ ಪ್ರಸಾದ್ ಅವರ ನಿಧನ ಹಾಗೂ ಎಚ್.ವೈ.ಮೇಟಿ, ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿತ್ತಾದರೂ ಈ ಮೂರು ಸ್ಥಾನಗಳಿಗೆ ಆಡಳಿತದ ಕೊನೆ ಅವಧಿಯಲ್ಲಿ ಯಾರನ್ನು ಮಾಡಬೇಕು, ಯಾರನ್ನು ಬಿಡಬೇಕು ಎಂಬ ಜಿಜ್ಞಾಸೆಯೊಂದಿಗೆ ಸಚಿವ ಸಂಪುಟ ವಿಸ್ತರಣೆ ಮಾಡದಿರುವುದೇ ಲೇಸು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

ಉಪರಾಷ್ಟ್ರಪತಿ ಚುನಾವಣೆ ವರೆಗೆ ಹೈಕಮಾಂಡ್ ನಾಯಕರು ಬಿಜಿಯಾಗಿದ್ದಾರೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್‍ನಲ್ಲಿ ಆಪರೇಷನ್ ಕಮಲ ಜೋರಾಗಿದ್ದು, ಈ ತಂತ್ರಕ್ಕೆ ಕಾಂಗ್ರೆಸ್, ಹೈಕಮಾಂಡ್ ನಾಯಕರು ತತ್ತರಿಸಿದ್ದಾರೆ.  ಹಾಗಾಗಿ ರಾಜ್ಯದ ಸಚಿವ-ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಸಂಪುಟ ವಿಸ್ತರಣೆ ಮರೀಚಿಕೆಯಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಮೂವರ ರಾಜೀನಾಮೆಯಿಂದ ತೆರವಾದ ಆ ಸ್ಥಾನಗಳಿಗೆ ಅದೇ ಸಮುದಾಯದವರನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾತಿವಾರು ಭೌಗೋಳಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿತ್ತು. ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚಾಗಿತ್ತು.  ದೆಹಲಿಯಲ್ಲಿ ಲಾಬಿಯನ್ನು ಕೂಡ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಜುಲೈ ಅಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಮೂವರು ಹೊಸಬರನ್ನು ಸೇರ್ಪಡೆ ಮಾಡಿಕೊಂಡು ಕೆಲವರ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ ಇದುವರೆಗೂ ಯಾವುದೇ ಅಂತಹ ಪ್ರಕ್ರಿಯೆಗಳು ನಡೆದಿಲ್ಲದಿರುವುದರಿಂದ ಸಂಪುಟ ವಿಸ್ತರಣೆ ನಡೆಯುತ್ತದೆಯೋ, ಇಲ್ಲವೋ ಎಂಬ ಅನುಮಾನ ದಟ್ಟವಾಗಿದೆ.

ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆ ವಹಿಸಿಕೊಳ್ಳಲು ಸಂಪುಟದ ಹಲವು ಹಿರಿಯರು ಹಿಂದೇಟು ಹಾಕಿದ್ದಾರೆ. ಹಿರಿಯ ಸಚಿವರಾದ ರಮಾನಾಥ ರೈ ಈ ಖಾತೆ ವಹಿಸಿಕೊಳ್ಳುವ ಆಸಕ್ತಿ ತೋರಿದರಾದರೂ ಮುಖ್ಯಮಂತ್ರಿಗಳಿಗೆ ಈ ಜವಾಬ್ದಾರಿಯನ್ನು ಅವರಿಗೆ ವಹಿಸುವ ಮನಸ್ಸಿಲ್ಲ. ಹಿರಿಯ ಸಚಿವರಾದ ದೇಶಪಾಂಡೆ, ರಾಮಲಿಂಗಾರೆಡ್ಡಿ, ರಮೇಶ್‍ಕುಮಾರ್ ಈ ಮೂವರಲ್ಲಿ ಯಾರಿಗಾದರೂ ಈ ಖಾತೆ ವಹಿಸುವ ಅಭಿಲಾಷೆ ಮುಖ್ಯಮಂತ್ರಿಗಿತ್ತಾದರೂ ಇವರಾರೂ ಈ ಜವಾಬ್ದಾರಿ ನಿಭಾಯಿಸಲು ಮುಂದಾಗದ ಕಾರಣ ವಿಸ್ತರಣೆ ಸದ್ಯಕ್ಕೆ ಸ್ಥಗಿತವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಶಾಸಕರು ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಂಪುಟಕ್ಕೆ ಸೇರುವ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin