ಅಮಿತ್ ಶಾ ರಕ್ಷಣಾ ಸಚಿವರಾಗಲಿದ್ದಾರೆಯೇ… ?

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ನವದೆಹಲಿ, ಜು.31- ಬಿಜೆಪಿಯ ಚಾಣಕ್ಯ ಎಂದೇ ಗುರುತಿಸಿ ಕೊಂಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ರಕ್ಷಣಾ ಸಚಿವರಾಗಲಿದ್ದಾರೆಯೇ ? ಉನ್ನತ ಮೂಲಗಳ ಪ್ರಕಾರ ಶಾ ಈ ಖಾತೆ ಹೊಂದುವುದು ಬಹುತೇಕ ನಿಶ್ಚಿತ.  ದೇಶದ ಅತ್ಯಂತ ಜವಾಬ್ದಾರಿಯುತ ರಕ್ಷಣಾ ಇಲಾಖೆಯನ್ನು ಈ ಹಿಂದೆ ಮನೋಹರ್ ಪರಿಕ್ಕರ್ ನಿಭಾಯಿಸುತ್ತಿದ್ದರು. ಆದರೆ ಅವರು ಕರಾವಳಿ ರಾಜ್ಯ ಗೋವಾದ ಮುಖ್ಯಮಂತ್ರಿಯಾದ ನಂತರ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಈ ಎರಡು ಮಹತ್ವದ ಇಲಾಖೆಗಳನ್ನು ಸಂಭಾಳಿಸುವುದು ಒಂದು ಸವಾಲಿನ ಕಾರ್ಯ. ಹೀಗಾಗಿ ಸಮರ್ಥ ವ್ಯಕ್ತಿಯನ್ನು ಆ ಹುದ್ದೆಗೆ ನೇಮಿಸಲು ಅಮಿತ್ ಶಾ ಸೂಕ್ತ ಎಂಬುದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 8ರಂದು ಗುಜರಾತ್‍ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗೆಲ್ಲುವುದು ಬಹುತೇಕ ನಿಶ್ಚಿತ.  ಅಮಿತ್ ರಾಜ್ಯಸಭೆ ಸದಸ್ಯರಾದ ನಂತರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದು, ಶಾ ಅವರಿಗೆ ರಕ್ಷಣಾ ಖಾತೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಂಘಟನೆ ಮತ್ತು ಪಕ್ಷದ ಬಲವರ್ಧನೆಯಲ್ಲಿ ಮಹಾ ಚತುರರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ರಕ್ಷಣಾ ಸಚಿವರನ್ನಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಮೋದಿ ಅವರಿಗೆ ಅನಿವಾರ್ಯವಾಗಿದೆ. ಏಕೆಂದರೆ, ಚೀನಾ ಮತ್ತು ಪಾಕಿಸ್ತಾನ ಎಂಬ ಎರಡು ಯುದ್ದೋನ್ಮಾದ ರಣಹದ್ದುಗಳು ಭಾರತದ ಮೇಲೆ ಎರಗಲು ಕುತಂತ್ರ ರೂಪಿಸುತ್ತಿವೆ. ಈ ಸನ್ನಿವೇಶದಲ್ಲಿ ಅಮಿತ್ ಶಾ ಅವರ ಕೌಟಿಲ್ಯ ನೀತಿ ಕೇಂದ್ರ ಸರ್ಕಾರಕ್ಕೆ ಅನಿವಾರ್ಯ ಎಂಬುದು ಮೋದಿ ಅವರ ಲೆಕ್ಕಚಾರ.

ಹಾಗಾದರೆ ಬಿಜೆಪಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಪ್ರಶ್ನೆಯೂ ಇದೇ ವೇಳೆ ಉದ್ಭವಿಸುತ್ತದೆ. ಬಿಜೆಪಿಯ ಮತ್ತೊರ್ವ ಸಂಘಟನಾ ಚತುರ ಓಂ ಮಾಥುರ್ ಅವರನ್ನು ಆ ಹುದ್ದೆಗೆ ನೇಮಿಸಿ ಎರಡೂ ಕಡೆ ಸಮತೋಲನ ಕಾಯ್ದುಕೊಳ್ಳುವುದು ಮೋದಿಯ ಮಾಸ್ಟರ್ ಪ್ಲಾನ್ ಆಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin