ಆಪರೇಷನ್ ಕಮಲಕ್ಕೆ ಹಣದ ಹೊಳೆ ಹರಿಸಲಾಗುತ್ತಿದೆ : ಖರ್ಗೆ ವಾಗ್ದಾಳಿ

Mallikarjun-Kharge

ನವದೆಹಲಿ, ಜು.31- ಗುಜರಾತ್‍ನಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಕುತಂತ್ರದಿಂದ ಬಿಜೆಪಿ ಬೆಂಬಲಿಸಲು ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರೂ.ಗಳ ಆಮಿಷವೊಡ್ಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿ ಕಾರ್ಜುನ ಖರ್ಗೆ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸದನ ಸಮಾವೇಶಗೊಳ್ಳುತ್ತಿದ್ದಂತೆ ಗುಜರಾತ್ ರಾಜಕೀಯ ಪರಿಸ್ಥಿತಿ ಪ್ರಸ್ತಾಪಿಸಿದ ಖರ್ಗೆ, ಅಗಸ್ಟ್ 8ರಂದು ನಡೆಯುವ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಕುತ್ತಿರುವ ಬೆದರಿಕೆಯಿಂದಾಗಿ ಗುಜರಾತ್‍ನ ಶಾಸಕರು ಕರ್ನಾಟಕಕ್ಕೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸದಸ್ಯ ಜೋತಿರಾದಿತ್ಯ ಸಿಂಧ್ಯಾ ಅವರೂ ದನಿಗೂಡಿಸಿದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಖರ್ಗೆ ಮತ್ತು ಸಿಂಧಿಯಾ ಪಟ್ಟು ಹಿಡಿದರು. ಆದರೆ ಇದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ಹೀಗಾಗಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಬೇಡಿಕೆಯನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ತಳ್ಳಿ ಹಾಕಿದರು.  ರಾಜ್ಯಸಭೆಯಲ್ಲೂ ಗದ್ದಲ-ಕೋಲಾಹಲ: ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅನುಕೂಲವಾಗುವಂತೆ ಗುಜರಾತಿನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ ಸಂಸತ್ತಿನ ಮೇಲ್ಮನೆಯಲ್ಲೂ ಪ್ರತಿಧ್ವನಿಸಿತು.

ಬಿಜೆಪಿ ಕುಮ್ಮಕ್ಕಿನಿಂದಾಗಿ ಪೊಲೀಸರು ತಮ್ಮ ಶಾಸಕರನ್ನು ಅಪಹರಿಸಿ ಹತ್ಯೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿ ಗದ್ದಲ-ಕೋಲಾಹಲ ಸೃಷ್ಟಿಸಿದ ಪರಿಣಾಮ ಸದನದ ಕಲಾಪವನ್ನು ಕೆಲಕಾಲ ಮುಂದೂಡಬೇಕಾಯಿತು.  ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಧುಸೂದನ್ ಮಿಸ್ತ್ರಿ ಮತ್ತು ಇತರ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಪಕ್ಷದ ಶಾಸಕರನ್ನು ಅಪಹರಿಸಲಾಗುತ್ತಿದೆ ಹಾಗೂ ಪಕ್ಷಾಂತರ ಮಾಡಲು ಅವರಿಗೆ 10 ರಿಂದ 15 ಕೋಟಿ ರೂ.ಗಳ ಆಮಿಷ ಒಡ್ಡಲಾಗುತ್ತಿದೆ. ಇದು ಬಿಜೆಪಿಯ ಕುತಂತ್ರ ಎಂದು ಆರೋಪಿಸಿದರು.

ಇದರಿಂದ ಕುಪಿತರಾದ ಬಿಜೆಪಿ ಸದಸ್ಯರೂ ಪ್ರತಿ ಘೋಷಣೆಗಳನ್ನು ಕೂಗಿ ಪರಸ್ಪರ ವಾದ-ಪ್ರತಿವಾದಗಳಲ್ಲಿ ತೊಡಗಿದ್ದರಿಂದ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಉಪ ಸಭಾಪತಿ ಪಿ.ಜೆ.ಕುರಿಯನ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin