ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಮತ್ತೆ ಪರಿಷ್ಕರಣೆ

Devegowda--01-JDS

ಬೆಂಗಳೂರು, ಜು.31- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರ ಹಿಡಿಯಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್‍ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವಿಳಂಬವಾಗಲಿದೆ. ಶ್ರಾವಣ ಮಾಸದಲ್ಲಿ ಬಿಡುಗಡೆ ಮಾಡುವುದಾಗಿ ಜೆಡಿಎಸ್ ವರಿಷ್ಠರು ಹೇಳಿದ್ದರು. ಆದರೆ, ಪಟ್ಟಿ ಇನ್ನೂ ಅಂತಿಮಗೊಳ್ಳದೆ ಪರಿಷ್ಕರಣೆ ಹಂತದಲ್ಲೇ ಉಳಿದಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಅಂತಿಮಗೊಳಿಸಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಆಷಾಢ ಮಾಸದಲ್ಲಿ ಪಟ್ಟಿ ಪ್ರಕಟಿಸುವುದಿಲ್ಲ ಎಂದು ವರಿಷ್ಠರು ಸ್ಪಷ್ಟಪಡಿಸಿದ್ದರು.

ಶ್ರಾವಣ ಮಾಸ ಆರಂಭವಾಗಿದ್ದರೂ ಪಟ್ಟಿ ಅಂತಿಮಗೊಂಡಿಲ್ಲ. ಇನ್ನೂ ಪರಿಷ್ರಣೆ ಹಂತದಲ್ಲೇ ಇದ್ದು, ಕೆಲವೊಂದು ಹೆಸರನ್ನು ಸೇರ್ಪಡೆ ಮಾಡುವ ಹಾಗೂ ಕೆಲವೊಂದು ಹೆಸರನ್ನು ಕೈ ಬಿಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಜೆಡಿಎಸ್‍ನ ಮೊದಲ ಪಟ್ಟಿ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸದ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು.
ಆದರೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಗೊಂದಲ ಹಾಗೂ ಪೈಪೋಟಿ  ಇಲ್ಲದೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಸಾರ್ವಜನಿಕ ಸಭೆಗಳಲ್ಲೇ ಘೋಷಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಗಾಂಧಿನಗರದ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೋರ್‍ಕಮಿಟಿ ಸದಸ್ಯ ವಿ.ನಾರಾಯಣಸ್ವಾಮಿ ಅವರು ಮುಂದಿನ ವಿಧಾನಸಭೆಯ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದರು.   ಅಲ್ಲದೆ, ಬಹಳಷ್ಟು ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಿಗೆ ಈಗಿನಿಂದಲೇ ಸಕ್ರಿಯವಾಗಿ ಪಕ್ಷ ಸಂಘಟನೆ ಹಾಗೂ ಚುನಾವಣೆ ಸಿದ್ದತೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.

ಆದರೆ, ಆ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಬೇರೆ ಪಕ್ಷದತ್ತ ಮುಖ ಮಾಡದಂತೆ ತಡೆಯುವ ಉದ್ದೇಶದಿಂದ ಅಧಿಕೃತ ಘೋಷಣೆ ಮಾಡುತ್ತಿಲ್ಲ. ಕಳೆದ 6 ತಿಂಗಳ ಹಿಂದೆಯೇ 150 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಕೂಡ ಅದು ಸಾಧ್ಯವಾಗಿಲ್ಲ.

ಅಭ್ಯರ್ಥಿಗಳ ಪಟ್ಟಿಯಿಂದ ವಿಧಾನಸಭಾ ಕ್ಷೇತ್ರವಾರು ಸಮಾವೇಶ ನಡೆಸಿ ಕಾರ್ಯಕರ್ತರು ಮತ್ತು ಜನರ ನಾಡಿ ಮಿಡಿತವನ್ನು ಅರಿತು ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

Facebook Comments

Sri Raghav

Admin