ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ನಿಧನ, ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

BB-Shivappa--01

ಬೆಂಗಳೂರು, ಜು.31-ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ, ರಾಜ್ಯ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಬಿ.ಬಿ.ಶಿವಪ್ಪ (89) ಇಂದು ನಿಧನರಾದರು. ನಗರದ ಸುಗುಣ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ದಾಖಲಾಗಿದ್ದ ಅವರು ಬೆಳಗ್ಗೆ 11.15ರಲ್ಲಿ ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ ಸುಶೀಲ, ಪುತ್ರರಾದ ಪದೀಪ್, ಪ್ರತಾಪ್, ಸುಧೀರ್ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಅವರ ಹುಟ್ಟೂರಾದ ಹಾಸನ ಜಿಲ್ಲೆ ಸಕಲೇಶಪುರದ ಕುಂಬರಹಳ್ಳಿ ಎಸ್ಟೇಟ್‍ನಲ್ಲಿ ನಡೆಯಲಿದೆ.

ಈಡೇರದ ಆಸೆ:

ಕಳೆದ 15 ದಿನಗಳ ಹಿಂದೆ ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಸುಗುಣ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಶಿವಪ್ಪ ತಮ್ಮ ಜೀವನದ ಕೊನೆ ಉಸಿರನ್ನು ಹುಟ್ಟೂರಿನಲ್ಲೇ ಕಳೆದು ಅಲ್ಲಿಯೇ ಉಸಿರು ಬಿಡಬೇಕು ಎಂಬುದು ಅವರ ಆಸೆಯಾಗಿತ್ತು.  ಆದರೆ, ದಿನದಿಂದ ದಿನಕ್ಕೆ ಆರೋಗ್ಯ ಏರುಪೇರು ಆಗುತ್ತಿದ್ದ ಕಾರಣ ವೈದ್ಯರು ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇಂದು ಬೆಳಗ್ಗೆ ಕುಟುಂಬದ ಸದಸ್ಯರು ಹುಟ್ಟೂರಿಗೆ ಕರೆದೊಯ್ಯಲು ಅನುಮತಿ ನೀಡುವಂತೆ ಕೇಳಿದ್ದರು. ಯಾವ ತೀರ್ಮಾನ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ಬೆಳಗ್ಗೆ 11.15ಕ್ಕೆ ಶಿವಪ್ಪನವರ ಪ್ರಾಣಪಕ್ಷಿ ಹಾರಿ ಹೋಗಿತ್ತೆಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ದೌಡಾಯಿಸಿದ ಗಣ್ಯರು:

ಶಿವಪ್ಪನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ವಿವಿಧ ಪಕ್ಷಗಳ ಮುಖಂಡರು, ಅವರ ಒಡನಾಡಿಗಳು ಆಗಮಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಜಿ ಸಚಿವರಾದ ಎಸ್.ಸುರೇಶ್‍ಕುಮಾರ್,ಮುರುಗೇಶ್ ನಿರಾಣಿ, ಶಾಸಕರು, ಪಾಲಿಕೆ ಸದಸ್ಯರು, ಸ್ನೇಹಿತರು ಆಗಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಶಿವಪ್ಪನವರ ಮೃತ ದೇಹವನ್ನು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಕರೆದೊಯ್ಯಲಾಯಿತು. ಇಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಜಗದೀಶ್‍ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್, ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಅಗಲಿದ ಹಿರಿಯ ನಾಯಕನ ಅಂತಿಮ ದರ್ಶನ ಪಡೆದರು.

ತದನಂತರ ಶಾಸಕರ ಭವನಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಇಲ್ಲಿಯೂ ಅನೇಕ ಜನಪ್ರತಿನಿಧಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಬಳಿಕ ಆ್ಯಂಬುಲೆನ್ಸ್ ಮೂಲಕ ಹುಟ್ಟೂರಿಗೆ ಕೊಂಡೊಯ್ಯಲಾಯಿತು.

ಶಿವಪ್ಪ ನಿಧನಕ್ಕೆ ಗಣ್ಯರ ಸಂತಾಪ : 

ಬೆಂಗಳೂರು, ಜು.31- ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ ಬಿಜೆಪಿ ಹಿರಿಯ ಮುಖಂಡ, ಮಾಜಿ ರಾಜ್ಯಾಧ್ಯಕ್ಷ, ಮುತ್ಸದ್ದಿ ರಾಜಕಾರಣಿ ಬಿ.ಬಿ.ಶಿವಪ್ಪ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ.  ರಾಜ್ಯಪಾಲ ವಿ.ಆರ್.ವಾಲಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಎ.ಮಂಜು, ವಿಧಾನಮಂಡಲದ ಉಭಯ ಸದನಗಳ ಪ್ರತಿಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ್‍ಮೂರ್ತಿ ಸೇರಿದಂತೆ ಸಂದರು, ಶಾಸಕರು ಹಾಗೂ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿ.ಬಿ.ಶಿವಪ್ಪ ಅತ್ಯಂತ ಸಜ್ಜನ ರಾಜಕಾರಣಿಯಾಗಿದ್ದರು. ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ಪ್ರಚಲಿತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಇವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಅನೇಕರು ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.  ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಗ್ರಗಣ್ಯ ನಾಯಕರಲ್ಲಿ ಶಿವಪ್ಪ ಕೂಡ ಒಬ್ಬರಾಗಿದ್ದರು. ತಮಗೆ ಹೇಳಬೇಕಾಗಿದ್ದನ್ನು ಯಾವುದಕ್ಕೂ ಅಂಜದೆ, ಅಳುಕದೆ ನೇರವಾಗಿ ಹೇಳುವ ಜಾಯಮಾನ ಅವರದಾಗಿತ್ತು.

ಸದನದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಅತ್ಯಂತ ಗಂಭೀರವಾಗಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಎಂದಿಗೂ ತಮ್ಮ ಎದುರಾಳಿಗಳನ್ನು ಲಘುವಾಗಿ ಕಂಡವರಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅವರ ಹಠಾತ್ ನಿಧನ ರಾಜ್ಯ ಓರ್ವ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ ಎಂದು ಮುಖಂಡರು ದುಃಖ ವ್ಯಕ್ತಪಡಿಸಿದ್ದಾರೆ.  ಬಿ.ಬಿ.ಶಿವಪ್ಪ ನಿಧನದಿಂದ ರಾಜಕೀಯ ಪಕ್ಷಗಳಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಗಣ್ಯರು ಪ್ರಾರ್ಥಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin