ಭ್ರಷ್ಟರ ಜನ್ಮ ಜಾಲಾಡಲು ರೆಡಿಯಾಗಿದೆ ಮೋದಿ ಹೊಸ ಅಸ್ತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Modi

ನವದೆಹಲಿ, ಜು.31-ಭ್ರಷ್ಟ ಅಧಿಕಾರಿಗಳ ವಿರುದ್ಧ ಬಲವಾದ ಚಾಟಿ ಬೀಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಜ್ಜಾಗಿದೆ. ಲಂಚರುಷುವತ್ತುಗಳಿಂದ ಸಮೃದ್ಧರಾಗಿರುವ ಸರ್ಕಾರಿ ಅಧಿಕಾರಿಗಳ ಕಡತ ಮತ್ತು ಪಟ್ಟಿಯನ್ನು ಸಿದ್ದಪಡಿಸುವಂತೆ ಆಯಾ ಇಲಾಖೆಗಳ ಸಚಿವರಿಗೆ ಮೋದಿ ಕಟ್ಟಪ್ಪಣೆ ಮಾಡಿದ್ದಾರೆ. ಈ ಹೊಸ ಬೆಳವಣಿಗೆಯಿಂದಾಗಿ ಭ್ರಷ್ಟರಲ್ಲಿ ಪೀಕಲಾಟ ಶುರುವಾಗಿದೆ.  ಮೋದಿ ಮಂತ್ರಿಮಂಡಲದ ಪ್ರತಿ ಸಚಿವಾಲಯವು ಜಾಗ್ರತ ವಿಭಾಗವನ್ನು ಹೊಂದಿದ್ದು, ಭ್ರಷ್ಟ ಅಧಿಕಾರಿಗಳ ಜನ್ಮ ಜಾಲಾಡಲು ಅವರ ವಿವರಗಳನ್ನು ಹೊಂದಿರುವ ಕಡತ ಸಿದ್ದಪಡಿಸುವಂತೆ ಸೂಚಿಸಲಾಗಿದೆ.

ಕ್ವಿಟ್ ಇಂಡಿಯಾ ಮಾದರಿಯಲ್ಲೇ ಭ್ರಷ್ಟಾಚಾರ ವಿರುದ್ಧ ಹೋರಾಡಲು ಎಲ್ಲರೂ ಸಂಕಲ್ಪ ಮಾಡಬೇಕೆಂದು ಮೋದಿ ನಿನ್ನೆಯಷ್ಟೇ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶವಾಸಿಗಳಿಗೆ ಕರೆ ನೀಡಿದ್ದರು.  ಈಗಾಗಲೇ ಭ್ರಷ್ಟರ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯುತ್ತಿದ್ದು, ಅದರಲ್ಲಿ ಹೆಸರಿಸಲಾಗಿರುವ ಅಧಿಕಾರಿಗಳಿಗೆ ಅಗಸ್ಟ್ 15ರ ನಂತರ ಗ್ರಹಚಾರ ಬಿಡಿಸಲು ಸರ್ಕಾರ ಸಜ್ಜಾಗಿದೆ.

ಅಧಿಕಾರಿಗಳ ಸೇವಾ ವಿವರಗಳ ದಾಖಲೆಗಳ ಆಧಾರದ ಮೇಲೆ ಕಡತಗಳನ್ನು ಗೃಹ ಸಚಿವಾಲಯ ಸಿದ್ದಗೊಳಿಸುತ್ತಿದೆ. ಆಗಸ್ಟ್ 6ರೊಳಗೆ ಈ ಪಟ್ಟಿಯನ್ನು ಅಂತಿಮಗೊಳಿಸುವಂತೆ ಸಚಿವಾಲಯವು ವಿವಿಧ ಇಲಾಖೆಗಳು ಮತ್ತು ಎಲ್ಲ ಅರೆ ಸೇನಾ ಪಡೆಗಳಿಗೆ ಪತ್ರಗಳನ್ನು ರವಾನಿಸಿದೆ. ಭ್ರಷ್ಟ ಅಧಿಕಾರಿಗಳ ಹೆಸರು, ಅವರ ಮೇಲಿರುವ ಭಷ್ಟಾಚಾರ ಆರೋಪಗಳು, ಆದಾಯ ಮೀರಿದ ಅಕ್ರಮ ಆಸ್ತಿಗಳು, ಕರ್ತವ್ಯ ಲೋಪ ಇತ್ಯಾದಿ ಈ ಕಡತದಲ್ಲಿ ಒಳಗೊಂಡಿರುತ್ತದೆ. ಈ ಪಟ್ಟಿ ಮತ್ತು ಸಂಬಂಧಪಟ್ಟ ಕಡತಗಳನ್ನು ಮುಂದಿನ ಕ್ರಮಕ್ಕಾಗಿ ಕೇಂದೀಯ ತನಿಖಾ ದಳ (ಸಿಬಿಐ) ಮತ್ತು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಘಟಕಗಳಿಗೆ ರವಾನಿಸಲಾಗುತ್ತದೆ. ಇಂಥ ಅಧಿಕಾರಿಗಳ ಮತ್ತಷ್ಟು ಪೂರ್ವಾಪರ ಮಾಹಿತಿಗಳನ್ನು ಕಲೆ ಹಾಕಿ ಅವರ ಅಟಾಟೋಪಗಳಿಗೆ ಲಗಾಮು ಹಾಕಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin