ಕೆರೆಗಳ ಡಿ-ನೋಟಿಫಿಕೇಷನ್‍ಗೆ ಅವಕಾಶ ಕೊಡಬೇಡಿ : ರಾಜ್ಯಪಾಲರಿಗೆ ಹೆಚ್ಡಿಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಆ.1-ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಿರ್ಜೀವ ಕೆರೆಗಳನ್ನು ಡಿ ನೋಟಿಫೈ ಮಾಡಲು ಹೊರಟಿರುವ ಕ್ರಮದ ವಿರುದ್ಧ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದು ದೂರು ನೀಡಿದ್ದಾರೆ. ಎರಡು ಪುಟಗಳ ಪತ್ರ ಬರೆದಿರುವ ಕುಮಾರಸ್ವಾಮಿಯವರು ರಾಜ್ಯದಲ್ಲಿರುವ 1500 ಕೆರೆಗಳನ್ನು ಡಿ ನೋಟಿಫೈ ಮಾಡಿ ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಮಾರಲು ಹೊರಟಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈ ವರ್ಷವೂ ಕೂಡ ಉತ್ತಮ ಮಳೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರ್ಜೀವ ಕೆರೆಗಳನ್ನು ಡಿ ನೋಟಿಫೈ ಮಾಡಲು ರಾಜ್ಯಸರ್ಕಾರ ಹೊರಟಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಭೂ ಸುಧಾರಣೆ ತಿದ್ದುಪಡಿ ಮಾಡಿ ಕೆರೆಗಳನ್ನು ಡಿ ನೋಟಿಫೈ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ರೀತಿಯ ಕೆರೆಗಳನ್ನು ನಾಶ ಪಡಿಸಿದರೆ ಸಾರ್ವಜನಿಕರಿಗೆ, ಪರಿಸರಕ್ಕೆ ಧಕ್ಕೆಯಾಗಲಿದೆ. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ರೈತರು ಕೆರೆಯ ನೀರನ್ನು ಅವಲಂಬಿಸಿ ಬೆಳೆ ಬೆಳೆಯುತ್ತಿದ್ದರು. ಅಲ್ಪಸ್ವಲ್ಪ ಮಳೆಯಾದಾಗ ಕೆರೆಯಲ್ಲಿ ಸಂಗ್ರಹಿಸಿರುವ ನೀರನ್ನು ಜಾನುವಾರುಗಳು, ರೈತರು ಬಳಕೆ ಮಾಡುತ್ತಿದ್ದರು. ಈಗ ಏಕಾಏಕಿ ಕೆರೆಗಳನ್ನು ಡಿ ನೋಟಿಫೈ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣಕಾಸು, ಕಾನೂನು, ನಗರಾಭಿವೃದ್ಧಿ, ಸಣ್ಣ ನೀರಾವರಿ, ಪರಿಸರ ಮತ್ತು ಜೀವಶಾಸ್ತ್ರ ಸೇರಿದಂತೆ ಅನೇಕ ಇಲಾಖೆಗಳಿಂದ ರಾಜ್ಯ ಸರ್ಕಾರವು ಒಂದು ವಾರದಲ್ಲಿ ಅನುಮತಿ ಪಡೆದುಕೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.   ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು 1985ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಕೆರೆ ಸಂರಕ್ಷಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಣ್ ಅವರನ್ನು ನೇಮಿಸಿದ್ದರು. ಕೆರೆ ಸಂರಕ್ಷಣೆಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂಬುದು ಸೇರಿದಂತೆ ಅನೇಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 1995ರಲ್ಲಿ ರಾಜ್ಯ ಹೈಕೋರ್ಟ್ ಕೆರೆಯ ಜಾಗವನ್ನು ಖಾಸಗಿ ಕಂಪೆನಿಗೆ ರಾಜಕೀಯ ಮುಖಂಡರುಗಳಿಗೆ ಬೇರೆ ಉದ್ದೇಶದಿಂದ ಹಂಚಿಕೆ ಮಾಡಬಾರದು ಎಂದು ತೀರ್ಪು ನೀಡಿತ್ತು. ಅಲ್ಲದೆ, 2006ರಲ್ಲಿಯೂ ಕೂಡ ಸರ್ವೋಚ್ಚ ನ್ಯಾಯಾಲಯವು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೆರೆ ಜಾಗವನ್ನು ಹಂಚಿಕೆ ಮಾಡಬಾರದು ಎಂದು ಕಟ್ಟುನಿಟ್ಟಿನ ತೀರ್ಪು ನೀಡಿತ್ತು.

ಕಾನೂನು ನಿಯಮ ಗಾಳಿಗೆ ತೂರಿ ಭೂ ಸುಧಾರಣೆ ತಿದ್ದುಪಡಿ ತಂದು ಏಕಾಏಕಿ ಕೆರೆಗಳನ್ನು ಡಿ ನೋಟಿಫೈ ಮಾಡುತ್ತಿದೆ. ನಾನು ಸಿಎಂ ಆಗಿದ್ದಾಗ ಅತಿಕ್ರಮಣವಾಗಿದ್ದ ಸರ್ಕಾರಿ ಜಾಗ, ಕೆರೆಗಳನ್ನು ಗುರುತಿಸಲು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಕಮಿಟಿ ನೇಮಕ ಮಾಡಿದ್ದೆ. ಆ ಸಮಿತಿಯು ರಾಜ್ಯದಲ್ಲಿ ಒಟ್ಟು 13,61,437 ಹೆಕ್ಟೇರ್ ಸರ್ಕಾರಿ ಜಾಗ, 21,33,609 ಹೆಕ್ಟೇರ್ ಭೂಮಿಯನ್ನು ವಿವಿಧ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ವರದಿ ನೀಡಿತ್ತು.

ಅಲ್ಲದೆ, 2011ರಲ್ಲಿ ವಿ.ಬಾಲಸುಬ್ರಹ್ಮಣ್ಯಂ ಕಮಿಟಿ ಕೂಡ ರಾಜ್ಯದಲ್ಲಿ ಒತ್ತುವರಿಯಾಗಿರುವ 11,07,187 ಹೆಕ್ಟೇರ್ ಸರ್ಕಾರಿ ಜಾಗ, ಅಲ್ಲದೆ, ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿತ್ತು. ನಗರದ ಭೈರಸಂದ್ರ ಕೆರೆ, ಚಿಕ್ಕಸಂದ್ರ, ದೇವನಹಳ್ಳಿ ಸೇರಿದಂತೆ ಅನೇಕ ಕೆರೆಗಳನ್ನು ಒತ್ತುವರಿ ಮಾಡಿರುವುದು ಕಂಡುಬಂದಿತ್ತು. ಈ ಎಲ್ಲ ವರದಿಯನ್ನೂ ಸರ್ಕಾರಕ್ಕೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಕೆರೆಗಳ ಸಂರಕ್ಷಣೆಗಾಗಿ ಎರಡು ಕಮಿಟಿಗಳನ್ನು ನೇಮಕ ಮಾಡಿದ್ದೆ.

ಆ ಕಮಿಟಿಯವರು ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಈಗ ಬಂದ ಸರ್ಕಾರವು ಅದರ ಬಗ್ಗೆ ಕ್ರಮ ಕೈಗೊಳ್ಳದೆ, ಕೂಲಂಕಶವಾಗಿ ಚರ್ಚೆ ನಡೆಸದೆ ಏಕಾಏಕಿ ಕೆರೆಗಳನ್ನು ಡಿ ನೋಟಿಫೈ ಮಾಡಲು ಸಿದ್ಧವಾಗಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin