ಬಿಜೆಪಿ ಸಂಸದರಿಗೆ ರಾಜ್ಯದ ಹಿತಕ್ಕಿಂತ ಕುರ್ಚಿಯೇ ಮುಖ್ಯ : ದಿನೇಶ್‍ಗುಂಡೂರಾವ್

Dinesh-Gundurao

ತುಮಕೂರು, ಆ.1- ಮಹಾದಾಯಿ, ಕಳಸಾ ಬಂಡೂರಿ ನಾಲಾ ವಿಚಾರ,ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಕುರಿತಂತೆ ರಾಜ್ಯದ ಜನರ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ಸಂಸದರು, ರಾಜ್ಯ ಸರಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಗೂಬೆ ಕೂರಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ತಿಳಿಸಿದ್ದಾರೆ. ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಶೋಭಾ ಕರಂದ್ಲಾಜೆ,ಬಿ.ಎಸ್.ಯಡಿಯೂರಪ್ಪ, ಸಿ.ಟಿ.ರವಿ ಅವರುಗಳು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವ ಶಾಸಕರ ಪಟ್ಟಿಯನ್ನು ಕಳೆದ ಎರಡು ವರ್ಷಗಳಿಂದ ಬಿಡುಗಡೆ ಮಾಡುತ್ತಲೇ ಇದ್ದಾರೆ.

ಇದುವರೆಗೂ ಯಾರ ಹೆಸರೂ ಸಿಕ್ಕಿಲ್ಲ. ಆಧಾರವಿಲ್ಲದ ಹೇಳಿಕೆಗಳು, ಆರೋಪಗಳನ್ನು ಮಾಡುತ್ತಲೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಬಿಜೆಪಿ ಸಂಸದರು ಮಾತ್ರ, ಮಹಾದಾಯಿ, ಕಳಸ, ಬಂಡೂರಿ ನೀರಾವರಿ ಯೋಜನೆಗಳ ಬಗ್ಗೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಬಗ್ಗೆ ಪ್ರಧಾನಿ ಮುಂದೆ ತುಟ್ಟಿ ಬಿಚ್ಚಲು ತಯಾರಿಲ್ಲ. ಅವರಿಗೆ ಜನರ ಹಿತಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದೇ ಹೆಚ್ಚಾಗಿದೆ ಎಂದರು ತಿರುಗೇಟು ನೀಡಿದರು.
ಬಿಜೆಪಿ ನಾಯಕರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ.ಅವರು ನೀಡುತ್ತಿರುವ ಅಂಕಿ ಅಂಶಕ್ಕೂ, ವಾಸ್ತವ ಬೆಳವಣಿಗೆಗೂ ಸಾಕಷ್ಟು ವೆತ್ಯಾಸವಿದೆ.ಸಾರ್ವಜನಿಕರಿಗೆ ಸುಳ್ಳನೇ ಸತ್ಯವೆಂಬಂತೆ ನಂಬಿಸುವ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ ಎಂದರು.

ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗದೆ 2018ರ ಚುನಾವಣೆಯ ಅಭ್ಯರ್ಥಿಯನ್ನು ಘೋಷಣೆ ಮಾಡುವ ಅಧಿಕಾರವನ್ನು ಯಾರಿಗೂ ಪಕ್ಷ ನೀಡಿಲ್ಲ.ಕೆಲವು ಉತ್ಸಾಹದಿಂದ ಕೆಲವರ ಹೆಸರನ್ನು ಪ್ರಸ್ತಾಪಿಸಿರಬಹುದು.ಈಗಾಗಲೇ ಪಕ್ಷದ ಅದ್ಯಕ್ಷರು ಈ ವಿಚಾರವಾಗಿ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.ನನ್ನನ್ನು ಸೇರಿದಂತೆ ಗೆಲ್ಲುವ ಮತ್ತು ಒಳ್ಳೆಯ ಅಭ್ಯರ್ಥಿಗಳಿಗೆ ಮಾತ್ರ ಟಿಕೇಟ್ ದೊರೆಯಲಿದೆ.ಜನಮನ್ನಣೆ ಇಲ್ಲದೆ ಹಾಲಿ ಶಾಸಕರಿಗೂ ಟಿಕೇಟ್ ನೀಡುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೀರಶೈವ-ಲಿಂಗಾಯಿತ ಅದು ಅಯಾಯ ಸಮುದಾಯಗಳ ಅಂತರಿಕ ವಿಚಾರ.ಸರಕಾರಕ್ಕೂ ವಿವಾದಕ್ಕೂ ಸಂಬಂದವಿಲ್ಲ. ಸಮುದಾಯದ ಮುಖಂಡರಿಂದ ಬಂದ ಮನವಿಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ.ಆದರೆ ಅದಕ್ಕಿಂತಲೂ ಮೊದಲು ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ, ಬಿ.ಎಸ್.ವೈ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಮಾಡಿ ಎಂದು ಹಲವು ಮುಖಂಡರ ಸಹಿ ಪಡೆದು ಮನವಿ ಮಾಡಿದ್ದಾರೆ.ತಾನು ಮಾಡಿದ ತಪ್ಪನ್ನು ಕಾಂಗ್ರೆಸ್ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಮುಖಂಡರಾದ ಹೊನ್ನಗಿರಿಗೌಡ,ವಿ.ವೆಂಕಟೇಶ್,ಆತೀಕ್ ಅಹಮದ್,ಮುಂಜುಳ ರಾಜಣ್ಣ,ತರುಣೇಶ್,ಮೆಹಬೂಬ್ ಪಾಷ,ಆಟೋ ರಾಜು,ಲಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin