ಐಟಿ ದಾಳಿ ದುರುದ್ದೇಶ ಪೂರ್ವಕ : ಖರ್ಗೆ ಕಿಡಿ

mallikarjun-kharge

ಬೆಂಗಳೂರು, ಆ.2- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ದುರುದ್ದೇಶ ಪೂರ್ವಕ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರ ಮೇಲೆ ಐಟಿ, ಇಡಿ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಪ್ರಜಾಪ್ರಭುತ್ವವನ್ನು ಬಿಜೆಪಿ ಪಕ್ಷ ಕಗ್ಗೊಲೆ ಮಾಡಲು ಹೊರಟಿದೆ. ಸರ್ವಾಧಿಕಾರಿ ಧೋರಣೆ ತಾಳಿರುವ ಬಿಜೆಪಿ ವಿರುದ್ಧ ಧನಿ ಎತ್ತುವವರ ಮೇಲೆ ಐಟಿ ಬ್ರಹ್ಮಾಸ್ತ್ರ ಬಿಡುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಗುಜರಾತ್‍ನ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅಹಮ್ಮದ್ ಪಟೇಲ್ ಅವರನ್ನು ಸೋಲಿಸಲೇಬೇಕೆಂಬ ದುರುದ್ದೇಶದಿಂದ ವಾಮಮಾರ್ಗವನ್ನು ಬಿಜೆಪಿ ಅನುಸರಿಸುತ್ತಿದೆ. ನಮ್ಮ ಪಕ್ಷದ ಶಾಸಕರನ್ನು ನಾವು ರಕ್ಷಣೆ ಮಾಡಿಕೊಳ್ಳಲು ಮುಂದಾದರೆ ಅವರ ಮೇಲೆ ಐಟಿ ದಾಳಿ ನಡೆಸುತ್ತದೆ. ಈ ಐಟಿ ದಾಳಿಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.

ಸೇಡಿನ ರಾಜಕಾರಣಕ್ಕಿಳಿದಿರುವ ಬಿಜೆಪಿ ಕ್ರಮ ಖಂಡನೀಯ ಮತ್ತು ಇದೊಂದು ಉದ್ದೇಶಪೂರ್ವಕ ದಾಳಿಯಾಗಿದೆ. ಇದರಿಂದ ನಮ್ಮ ಪಕ್ಷವನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಜನಸಾಮಾನ್ಯರು ಎಲ್ಲವನ್ನು ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರಿಗೆ ತೊಂದರೆ ನೀಡುವ ಉದ್ದೇಶದಿಂದಲೇ ಈ ದಾಳಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಚಾರಿತ್ರ್ಯವನ್ನು ಹಾಳು ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದ್ದು, ಸಂಸತ್‍ನಲ್ಲಿ ಈ ಬಗ್ಗೆ ದನಿ ಎತ್ತುತ್ತೇವೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin